ಶ್ರೀಲಂಕಾ ಆಟಗಾರರ ಸಂಭ್ರಮ
ಚಿತ್ರಕೃಪೆ: @OfficialSLC
ಕೊಲಂಬೊ: ಏಳು ರನ್‌ಗಳ ಅಂತರದಿಂದ ಶತಕ ಕೈತಪ್ಪಿಸಿಕೊಂಡ ಸದೀರ ಸಮರವಿಕ್ರಮ ಅವರ ಸೊಗಸಾದ ಬ್ಯಾಟಿಂಗ್ ಮತ್ತು ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ, ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್‌ಗಳಿಂದ ಮಣಿಸಿತು.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೆಯ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 257 ರನ್ ಗಳಿಸಿತು. ಸಮರವಿಕ್ರಮ (93; 72ಎ, 4X8, 6X2) ಹಾಗೂ ಮೆಂಡಿಸ್ (50; 73ಎ; 4X6, 6X1) ಅವರು ಚೆಂದದ ಬ್ಯಾಟಿಂಗ್ ಮಾಡಿದರು.
ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 48.1 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟಾಯಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ತೌಹೀದ್ ಹೃದಯ್ (82 ರನ್; 97 ಎ.) ಹೊರತುಪಡಿಸಿ ಇತರರು ವಿಫಲರಾದರು.
ತಲಾ ಮೂರು ವಿಕೆಟ್ ಪಡೆದ ಮಹೀಶ್ ತೀಕ್ಷಣ, ದಸುನ್ ಶನಕ ಮತ್ತು ಮತೀಶ ಪಥಿರಾಣ ಅವರು ಬಾಂಗ್ಲಾ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು.
ಸಮರವಿಕ್ರಮ ಆಸರೆ: ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲಂಕಾ ತಂಡದ ಆರಂಭಿಕ ಬ್ಯಾಟರ್ ಕರುಣಾರತ್ನೆ ಆರನೇ ಓವರ್‌ನಲ್ಲಿ ಹಸನ್ ಮೆಹಮೂದ್ ಎಸೆತಕ್ಕೆ ಔಟಾದರು.
ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನಿಸಾಂಕ (40; 60ಎ) ಅವರೊಂದಿಗೆ ಸೇರಿದ ಮೆಂಡಿಸ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿದರು. ಶೊರಿಫುಲ್ ಇಸ್ಲಾಂ 24ನೇ ಓವರ್‌ನಲ್ಲಿ ಹಾಕಿದ ಎಸೆತದಲ್ಲಿ ನಿಸಾಂಕ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಎರಡು ಓವರ್‌ಗಳ ಅಂತರದಲ್ಲಿ ಮೆಂಡಿಸ್ ಕೂಡ ಇಸ್ಲಾಂ ಬೌಲಿಂಗ್‌ನಲ್ಲಿ ಔಟಾದರು. ಆಗ ಕ್ರೀಸ್‌ನಲ್ಲಿದ್ದ ಸಮರವಿಕ್ರಮ ಏಕಾಂಗಿಯಾಗಿ ಹೋರಾಟ ಮಾಡಿದರು. ಒಂದು ಬದಿಯಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೂ ದಿಟ್ಟತನದ ಬ್ಯಾಟಿಂಗ್ ಮಾಡಿದರು.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 257 (ಪಥುಮ್ ನಿಸಾಂಕ 40, ಕುಶಾಲ ಮೆಂಡಿಸ್ 50, ಸದೀರ ಸಮರವಿಕ್ರಮ 93, ಶನಾಕ 24, ತಸ್ಕಿನ್ ಅಹಮದ್ 62ಕ್ಕೆ3, ಶೊರಿಫುಲ್ ಇಸ್ಲಾಂ 48ಕ್ಕೆ2, ಹಸನ್ ಮೆಹಮೂದ್ 57ಕ್ಕೆ3)
ಬಾಂಗ್ಲಾದೇಶ: 48.1 ಓವರ್‌ಗಳಲ್ಲಿ 236 (ತೌಹೀದ್ ಹೃದಯ್ 82, ಮುಷ್ಫಿಕುರ್ ರಹೀಂ 29, ಮೆಹದಿ ಹಸನ್ ಮಿರಾಜ್ 28, ಮಹೀಶ್ ತೀಕ್ಷಣ 69ಕ್ಕೆ 3, ದಸುನ್ ಶನಕ 28ಕ್ಕೆ 3, ಮತೀಶ ಪಥಿರಾಣ 58ಕ್ಕೆ 3)
ಫಲಿತಾಂಶ: ಶ್ರೀಲಂಕಾಕ್ಕೆ 21 ರನ್ ಗೆಲುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.