ADVERTISEMENT

ಏಷ್ಯಾ ಕಪ್‌: ಫಿಟ್ನೆಸ್‌ ಪಡೆದ ಸೂರ್ಯಕುಮಾರ್ ಯಾದವ್

ಪಿಟಿಐ
Published 16 ಆಗಸ್ಟ್ 2025, 15:57 IST
Last Updated 16 ಆಗಸ್ಟ್ 2025, 15:57 IST
   

ನವದೆಹಲಿ: ಅಜಿತ್‌ ಅಗರಕರ್‌ ನೇತೃತ್ವದ ಆಯ್ಕೆ ಸಮಿತಿ ಏಷ್ಯಾ ಕಪ್‌ ಟೂರ್ನಿಗೆ  ಭಾರತ ತಂಡವನ್ನು ಆಯ್ಕೆ ಮಾಡಲು ಇದೇ 19ರಂದು ಸಭೆ ಸೇರಲಿದೆ. ಈ ನಡುವೆ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಫಿಟ್ನೆಸ್‌ ಪರೀಕ್ಷೆಯಲ್ಲಿ ಶನಿವಾರ ತೇರ್ಗಡೆಯಾಗಿದ್ದಾರೆ.

ಐಪಿಎಲ್‌ನಲ್ಲಿ ‘ಸರಣಿಯ ಸರ್ವೋತ್ತಮ’ರಾದ ಸೂರ್ಯ ನಂತರ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಹೊಟ್ಟೆಯ ಕೆಳ ಬಲಭಾಗದಲ್ಲಿ ‘ಸ್ಪೋರ್ಟ್ಸ್‌ ಹರ್ನಿಯಾ’ಕ್ಕೆ ಅವರು ಜರ್ಮನಿಯ ಮ್ಯೂನಿಕ್‌ನಲ್ಲಿ ಜೂನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೂರ್ಯ ಅವರು ಫಿಟ್ನೆಸ್‌ ಟೆಸ್ಟ್‌ನಲ್ಲಿ ಯಶಸ್ವಿ ಆಗಿದ್ದಾರೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

34 ವರ್ಷ ವಯಸ್ಸಿನ ಸೂರ್ಯ ಅವರು ಮುಂಬೈನಲ್ಲಿ ಮುಂದಿನ ಮಂಗಳವಾರ ಆಯ್ಕೆಸಮಿತಿ ಸಭೆಗೆ ಹಾಜರಾಗುವುದು ಖಚಿತವಾಗಿದೆ. ಏಷ್ಯಾ ಕಪ್‌ ಸೆಪ್ಟೆಂಬರ್‌ 9 ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿದೆ. ಭಾರತ ಸೆ. 10ರಂದು ಆತಿಥೇಯ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಬಹುನಿರೀಕ್ಷಿತ ಭಾರತ– ಪಾಕ್ ಪಂದ್ಯ ಸೆ. 14ರಂದು ದುಬೈನಲ್ಲಿ ನಡೆಯಲಿದೆ.

ADVERTISEMENT

ಕಳೆದ ಐಪಿಎಲ್‌ನಲ್ಲಿ ಸೂರ್ಯಕುಮಾರ್ 717 ರನ್ ಬಾರಿಸಿದ್ದರು. ಆರೇಂಜ್‌ ಕ್ಯಾಪ್ ಗೆದ್ದ ಸಾಯಿ ಸುದರ್ಶನ್‌ (759 ರನ್) ನಂತರ ರನ್‌ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.