ADVERTISEMENT

ಚಾಂಪಿಯನ್ನರಿಗೆ ‘ರನ್ನರ್ ಅಪ್’ ಸವಾಲು

ಆಸ್ಟ್ರೇಲಿಯಾ–ನ್ಯೂಜಿಲೆಂಡ್ ತಂಡಗಳ ಹಣಾಹಣಿ ಇಂದು

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 18:20 IST
Last Updated 28 ಜೂನ್ 2019, 18:20 IST
ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್   

ಲಾರ್ಡ್ಸ್, ಲಂಡನ್: ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯವನ್ನು ನೆನಪು ಮಾಡಿಕೊಳ್ಳುವ ಸಮಯ ಈಗ ಬಂದಿದೆ.

ಅಂದು ಮುಖಾಮುಖಿಯಾಗಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಶನಿವಾರ ಇಲ್ಲಿ ಸೆಣಸಲಿವೆ. ಆಗ ಪ್ರಶಸ್ತಿ ಗೆದ್ದಿದ್ದ ಕಾಂಗರೂ ನಾಡಿನ ತಂಡವು ಈ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ರನ್ನರ್ಸ್ ಅಪ್ ಆಗಿದ್ದ ಕಿವೀಸ್ ಬಳಗವು ನಾಲ್ಕರ ಘಟ್ಟದ ಹೊಸ್ತಿಲಲ್ಲಿ ನಿಂತಿದೆ. ಎರಡೂ ತಂಡಗಳು ತಲಾ ಏಳು ಪಂದ್ಯಗಳನ್ನು ಆಡಿವೆ. ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಭಾರತದ ಎದುರು ಮಾತ್ರ ಸೋತಿತ್ತು. ಉಳಿದಂತೆ ಎಲ್ಲ ಪಂದ್ಯಗಳಲ್ಲಿಯೂ ಜಯ ದಾಖಲಿಸಿದೆ.

ಕಿವೀಸ್ ತಂಡವು ಐದು ಪಂದ್ಯಗಳಲ್ಲಿ ಗೆದ್ದಿದೆ. ಭಾರತದ ಎದುರಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಮೂರು ದಿನಗಳ ಹಿಂದೆ ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ ತಂಡದ ಅಜೇಯ ಓಟಕ್ಕೆ ತಡೆಯೊಡ್ಡಿತ್ತು. ಅಂದು ತಂಡವು ಗೆದ್ದಿದ್ದರೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿಬಿಟ್ಟಿರುತ್ತಿತ್ತು. ತಂಡವು ಇನ್ನೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ. ಇವೆರಡರಲ್ಲಿ ಒಂದನ್ನು ಗೆದ್ದರೂ ನಾಕೌಟ್ ಹಂತ ಖಚಿತವಾಗಲಿದೆ. ಉಭಯ ತಂಡಗಳ ನಾಯಕರೂ ತಲಾ ಎರಡು ಶತಕ ಹೊಡೆದಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ವೇಗಿ ಮಿಷೆಲ್ ಸ್ಟಾರ್ಕ್ ಮತ್ತು ಕಿವೀಸ್‌ನ ಟ್ರೆಂಟ್ ಬೌಲ್ಟ್‌ ಉತ್ತಮ ಲಯದಲ್ಲಿದ್ದಾರೆ. ಕೇನ್ ವಿಲಿಯಮ್ಸನ್, ಕೆಳಕ್ರಮಾಂಕದಲ್ಲಿ ಜಿಮ್ಮಿ ನಿಶಾಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಈ ಮೂವರ ಆಟದಿಂದಾಗಿಯೇ ತಂಡವು ಗೌರವಯುತವಾದ ಮೊತ್ತ ಗಳಿಸಲು ಸಾಧ್ಯವಾಗಿತ್ತು. ಆರಂಭಿಕ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಅವರು ಇನ್ನೂ ಫಾರ್ಮ್‌ಗೆ ಮರಳದಿರುವುದು ತಂಡಕ್ಕೆ ಚಿಂತೆಗೆ ಚಿಂತೆಯ ವಿಷಯವಾಗಿದೆ. ರಾಸ್ ಟೇಲರ್ ಕೂಡ ಸ್ಥಿರವಾದ ಲಯಕ್ಕೆ ಮರಳಬೇಕಿದೆ.

ಆಸ್ಟ್ರೇಲಿಯಾ ತಂಡಕ್ಕೆ ಸೋತರೆ ನಷ್ಟವಿಲ್ಲ. ಏಕೆಂದರೆ ಈಗ ಸೆಮಿಗೆ ಪ್ರವೇಶಿಸಿರುವುದರಿಂದ ಹೆಚ್ಚಿನ ಒತ್ತಡ ಇಲ್ಲ. ಆದರೆ ಅಗ್ರಸ್ಥಾನದಲ್ಲಿಯೇ ಮುಂದುವರಿಯುವ ಛಲದಿಂದ ಕಣಕ್ಕಿಳಿಯಲಿದೆ. ಹೋದ ವಿಶ್ವಕಪ್ ಟೂರ್ನಿಯ ಫೈನಲ್‌ ಸೋಲಿನ ಸೇಡು ತೀರಿಸಿಕೊಳ್ಳಲು ಕಿವೀಸ್ ಕೂಡ ಸಿದ್ದವಾಗಿದೆ. ಆದ್ದರಿಮದ ರೋಚಕ ಹಣಾಹಣಿ ನಡೆಯುವ ಎಲ್ಲ ಲಕ್ಷಣಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.