ADVERTISEMENT

ವೆಸ್ಟ್ ಇಂಡೀಸ್ ಪ್ರವಾಸ: ಆಸ್ಟ್ರೇಲಿಯಾ ತಂಡದಲ್ಲಿ ಸ್ಮಿತ್, ವಾರ್ನರ್‌

ಏಜೆನ್ಸೀಸ್
Published 17 ಮೇ 2021, 12:30 IST
Last Updated 17 ಮೇ 2021, 12:30 IST
ಆ್ಯರನ್ ಫಿಂಚ್ –ಪಿಟಿಐ ಚಿತ್ರ
ಆ್ಯರನ್ ಫಿಂಚ್ –ಪಿಟಿಐ ಚಿತ್ರ   

ಸಿಡ್ನಿ/ಮೆಲ್ಬರ್ನ್‌: ವೆಸ್ಟ್ ಇಂಡೀಸ್ ಎದುರಿನ ಏಕದಿನ ಮತ್ತು ಟಿ20 ಕ್ರಿಕೆಟ್ ಸರಣಿಗಳಿಗೆ ಆಸ್ಟ್ರೇಲಿಯಾವು 23 ಮಂದಿಯ ತಂಡವನ್ನು ಸೋಮವಾರ ಪ್ರಕಟಿಸಿದ್ದು ಪ್ರಮುಖ ಸ್ಟೀವ್ ಸ್ಮಿತ್ ಸೇರಿದಂತೆ ಆಟಗಾರರಿಗೆ ಸ್ಥಾನ ನೀಡಲಾಗಿದೆ. ನಾಲ್ವರು ಸ್ಪಿನ್ನರ್‌ಗಳನ್ನೂ ಸೇರಿಸಿಕೊಳ್ಳಲಾಗಿದೆ.

ಆ್ಯರನ್ ಫಿಂಚ್ ನಾಯಕತ್ವದ ತಂಡದಲ್ಲಿ ಸ್ಟೀವ್ ಸ್ಮಿತ್‌, ಮಿಷೆಲ್ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್‌ ಇದ್ದಾರೆ. ಇವರೆಲ್ಲರೂ ಈಚೆಗೆ ನಡೆದ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಆಡಿರಲಿಲ್ಲ.

ಐದು ಟಿ20 ಪಂದ್ಯಗಳ ಸರಣಿ ಜುಲೈ ಒಂಬತ್ತರಂದು ಸೇಂಟ್ ಲೂಸಿಯಾದಲ್ಲಿ ಆರಂಭವಾಗಲಿದ್ದು ನಂತರ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇದು ಜುಲೈ 24ರಂದು ಬಾರ್ಬಡೀಸ್‌ನಲ್ಲಿ ಆರಂಭವಾಗಲಿದೆ.

ADVERTISEMENT

ಇಂಗ್ಲೆಂಡ್‌ನಲ್ಲಿರುವ ಮಾರ್ನಸ್ ಲಾಬುಶೇನ್ ಅವರು ಪ್ರಯಾಣದ ‘ಸಮಸ್ಯೆ’ಗಳಿಂದಾಗಿ ತಂಡವನ್ನು ಸೇರಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಅವರನ್ನು ಕೈಬಿಡಲಾಗಿದೆ. ಮಿಚ್ ಸ್ವೆಪ್ಸನ್, ಆ್ಯಡಂ ಜಂಪಾ ಮತ್ತು 19 ವರ್ಷದ ತನ್ವೀರ್ ಸಂಗಾ ತಂಡಕ್ಕೆ ಆಯ್ಕೆಯಾಗಿರುವ ಮೂವರುಲೆಗ್ ಸ್ಪಿನ್ನರ್‌ಗಳು. ಸಿಡ್ನಿ ಥಂಡರ್ ತಂಡದಲ್ಲಿ ಆಡಿರುವ ತನ್ವೀರ್ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ತಂಡ: ಆ್ಯರನ್ ಫಿಂಚ್‌ (ನಾಯಕ), ಆ್ಯಶ್ಟನ್ ಅಗರ್‌, ಜೇಸನ್ ಬೆಹ್ರಂಡಾರ್ಫ್‌, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್‌, ಜೋಶ್ ಹ್ಯಾಜಲ್‌ವುಡ್‌, ಮೊಯಿಸಸ್ ಹೆನ್ರಿಕ್ಸ್‌, ಮಿಚೆಲ್ ಮಾರ್ಷ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ರಿಲಿ ಮಿರೆಡಿತ್‌, ಜೋಶ್ ಫಿಲಿಪ್‌, ಜೇ ರಿಚರ್ಡ್ಸ್‌ನ್, ಕೇನ್ ರಿಚರ್ಡ್ಸ್‌ನ್, ತನ್ವೀರ್ ಸಂಗಾ, ಡಿ‘ಆರ್ಚಿ ಶಾರ್ಟ್‌, ಸ್ಟೀವನ್ ಸ್ಮಿತ್‌, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನಿಸ್‌, ಮಿಚೆಲ್ ಸ್ವೆಪ್ಸನ್‌, ಆ್ಯಂಡ್ರ್ಯೂ ಟೈ, ಮ್ಯಾಥ್ಯೂ ವೇಡ್‌, ಡೇವಿಡ್ ವಾರ್ನರ್‌, ಆ್ಯಡಂ ಜಂಪಾ.

ತವರಿಗೆ ತಲುಪಿದ ‘ಐಪಿಎಲ್’ ಆಟಗಾರರು

ಪ್ಯಾಟ್ ಕಮಿನ್ಸ್‌ ಮತ್ತು ಸ್ಟೀವ್ ಸ್ಮಿತ್‌ ಒಳಗೊಂಡಂತೆ ಐಪಿಎಲ್‌ನಲ್ಲಿ ಆಡಿದ್ದ ಆಸ್ಟ್ರೇಲಿಯಾದ ಆಟಗಾರರು ಸೋಮವಾರ ಸಿಡ್ನಿ ತಲುಪಿದರು. ಭಾರತದಲ್ಲಿ ಕೋವಿಡ್ ಏರುಗತಿಯಲ್ಲಿ ಇದ್ದ ಕಾರಣ ಭಾರತಕ್ಕೆ ಹೋಗುವ ಮತ್ತು ಭಾರತದಿಂದ ಬರುವ ವಿಮಾನಯಾನವನ್ನು ಆಸ್ಟ್ರೇಲಿಯಾ ಸರ್ಕಾರ ಸ್ಥಗಿತಗೊಳಿಸಿತ್ತು. ಹೀಗಾಗಿ ಆಟಗಾರರು ಮಾಲ್ಡಿವ್ಸ್‌ಗೆ ತೆರಳಿ ಪ್ರತ್ಯೇಕವಾಸದಲ್ಲಿದ್ದರು.

ಆಟಗಾರರು, ಅಧಿಕಾರಿಗಳು ಹಾಗೂ ವೀಕ್ಷಕ ವಿವರಣೆಕಾರರು ಒಳಗೊಂಡ 38 ಮಂದಿ 10 ದಿನ ಮಾಲ್ಡಿವ್ಸ್‌ನಲ್ಲಿದ್ದರು. ಸಿಡ್ನಿ ಹೋಟೆಲ್‌ನಲ್ಲಿ ಅವರೆಲ್ಲರೂ ಎರಡು ವಾರ ಕಡ್ಡಾಯ ಕ್ವಾರಂಟೈನ್‌ನಲ್ಲಿರುವರು.

ಚೆಂಡು ವಿರೂಪ ಪ್ರಕರಣಕ್ಕೆ ಹೊಸ ತಿರುವು

2018ರಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು ಅಂದು ನಿಷೇಧಕ್ಕೆ ಒಳಗಾಗಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ತಂಡದಲ್ಲಿದ್ದ ಅನೇಕ ಬೌಲರ್‌ಗಳಿಗೆ ಆ ಪಿತೂರಿಯ ಬಗ್ಗೆ ಮಾಹಿತಿ ಇತ್ತು ಎಂದಿದ್ದಾರೆ.

ಬ್ಯಾಂಕ್ರಾಫ್ಟ್‌ ಅವರ ಹೇಳಿಕೆ ಹೊರಬಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನ ಭಾವೈಕ್ಯ ಘಟಕ ವಿಚಾರಣೆಗೆ ಮುಂದಾಗಿದೆ.

ಕೇಪ್‌ಟೌನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿಬ್ಯಾಂಕ್ರಾಫ್ಟ್‌ ಚೆಂಡು ವಿರೂಪಗೊಳಿಸಿದ್ದು ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇದಕ್ಕೆ ಪ್ರಚೋದನೆ ನೀಡಿದ್ದರು ಎಂಬ ಆರೋಪದಡಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ತಲಾ ಒಂದು ವರ್ಷ ನಿಷೇಧಿಸಲಾಗಿತ್ತು. ಬ್ಯಾಂಕ್ರಾಫ್ಟ್‌ ಮೇಲೆ ಒಂಬತ್ತು ತಿಂಗಳ ನಿಷೇಧ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.