ADVERTISEMENT

ಆ್ಯಷಸ್‌ ಪಿಂಕ್‌ಬಾಲ್‌ ಟೆಸ್ಟ್‌: ಎರಡನೇ ದಿನ ಆಸ್ಟ್ರೇಲಿಯಾ ಮೇಲುಗೈ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 15:51 IST
Last Updated 5 ಡಿಸೆಂಬರ್ 2025, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬ್ರಿಸ್ಬೇನ್ : ಛಲದಿಂದ ಆಡಿದ ಆಸ್ಟ್ರೇಲಿಯಾ ತಂಡ ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ (ಹಗಲು ರಾತ್ರಿ) ಪಂದ್ಯದ ಎರಡನೇ ದಿನವಾದ ಶುಕ್ರವಾರ ಇಂಗ್ಲೆಂಡ್ ವಿರುದ್ಧ 44 ರನ್‌ಗಳ ಮುನ್ನಡೆ ಸಂಪಾದಿಸಿತು.

ಆಕ್ರಮಣಕಾರಿಯಾಗಿ ಆಡಿದ ಆರಂಭ ಆಟಗಾರ ಜೇಕ್ ವೆದರಾಲ್ಡ್ (72, 78ಎ, 4x12, 6x1), ಮಾರ್ನಸ್ ಲಾಬುಷೇನ್ (65, 78ಎ, 4x10) ಮತ್ತು ನಾಯಕ ಸ್ಟೀವ್‌ ಸ್ಮಿತ್‌ (61, 85ಎ) ಅರ್ಧ ಶತಕಗಳನ್ನು ಗಳಿಸಿದರು. ಗ್ಯಾಬಾದಲ್ಲಿ ಇಂಗ್ಲೆಂಡ್‌ನ 334 ರನ್‌ಗಳಿಗೆ ಉತ್ತರವಾಗಿ ಆತಿಥೇಯರು 6 ವಿಕೆಟ್‌ಗೆ 378 ರನ್ ಗಳಿಸಿ ಮೇಲುಗೈ ಸಾಧಿಸಿದರು. ಇಂಗ್ಲೆಂಡ್ ಫೀಲ್ಡರ್‌ಗಳು ನಾಲ್ಕು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ್ದು ಆಸ್ಟ್ರೇಲಿಯಾಕ್ಕೆ ನೆರವಾಯಿತು.

ADVERTISEMENT

ಪಿಚ್‌ ಮುಂದಿನ ದಿನಗಳಲ್ಲಿ ಹದಗೆಡುವ ಸಾಧ್ಯತೆಯಿರುವ ಕಾರಣ ಉತ್ತಮ ಲೀಡ್ ಪಡೆಯುವುದು ಆಸ್ಟ್ರೇಲಿಯಾದ ಪಾಲಿಗೆ ನಿರ್ಣಾಯಕವಾಗಿದೆ. ಆಸ್ಟ್ರೇಲಿಯಾ ಮೊದಲ ಟೆಸ್ಟ್‌ ಪಂದ್ಯವನ್ನು ಎರಡೇ ದಿನಗಳ ಒಳಗೆ ಜಯಿಸಿತ್ತು.

ಮೊದಲ ಎಸೆತದಲ್ಲಿ ಮತ್ತು ನಂತರ 25 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಅಲೆಕ್ಸ್‌ ಕ್ಯಾರಿ 46 ರನ್ ಗಳಿಸಿದ್ದು, ಮೈಕೆಲ್‌ ನೆಸೆರ್ (ಔಟಾಗದೇ 15) ಜೊತೆ ಆಟವನ್ನು ಕಾದಿರಿಸಿದ್ದಾರೆ.

ಕ್ಯಾರಿ ಜೊತೆ ಸ್ಟೀವನ್‌ ಸ್ಮಿತ್ ಅವರಿಗೂ ಜೀವದಾನ ದೊರಕಿತು. ಆರ್ಚರ್ ಬೌಲಿಂಗ್‌ನಲ್ಲಿ ಜೇಮಿ ಸ್ಮಿತ್ ಸುಲಭ ಕ್ಯಾಚ್‌ಅನ್ನು ಬಿಟ್ಟರು.

ಒಂದು ಹಂತದಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ಗೆ 291 ರನ್ ಗಳಿಸಿದ್ದು ಬಿಗಿ ಹಿಡಿತ ಸಾಧಿಸಿತ್ತು. ಆದರೆ ಬ್ರೈಡನ್ ಕಾರ್ಸ್ (113ಕ್ಕೆ3) ಅವರು ನಾಲ್ಕು ಎಸೆತಗಳ ಅಂತರದಲ್ಲಿ ಕ್ಯಾಮೆರಾನ್ ಗ್ರೀನ್ (45) ಮತ್ತು ಸ್ಮಿತ್ ಅವರ ವಿಕೆಟ್‌ಗಳನ್ನು ಪಡೆದರು. ಇಂಗ್ಲೆಂಡ್‌ನ ಶಾರ್ಟ್‌ಬಾಲ್‌ ಎಸೆತಗಳ ತಂತ್ರ ಫಲ ನೀಡುವಂತೆ ಕಂಡಿತು.

ಹೆಡ್‌ ಮತ್ತು ವಿದರಾಲ್ಡ್ ಮೊದಲ ವಿಕೆಟ್‌ಗೆ 77 ರನ್‌ ಸೇರಿಸಿದ್ದರು. ನಂತರ ವಿದರಾಲ್ಡ್ ಮತ್ತು ಲಾಬುಷೇನ್ ಎರಡನೇ ವಿಕೆಟ್‌ಗೆ 69 ರನ್ ಪೇರಿಸಿದರು.

ಇದಕ್ಕೆ ಮೊದಲು, ಗುರುವಾರ 9 ವಿಕೆಟ್‌ಗೆ 325 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ, ಎರಡನೇ ದಿನ 14 ಎಸೆತಗಳಲ್ಲಿ ಆಲೌಟ್‌ ಆಯಿತು. ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್‌ ಶತಕ ಗಳಿಸಿದ್ದ ಜೋ ರೂಟ್‌ 138 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಮತ್ತು ಜೋಫ್ರಾ ಆರ್ಚರ್ ನಡುವಣ  ಅಂತಿಮ ವಿಕೆಟ್ ಜೊತೆಯಾಟ 70 ರನ್‌ಗಳಿಗೆ ಬೆಳೆಯಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 76.2 ಓವರುಗಳಲ್ಲಿ 334 (ಜೋ ರೂಟ್‌ ಔಟಾಗದೇ 134, ಜೋಫ್ರಾ ಆರ್ಚರ್ 38; ಮಿಚೆಲ್ ಸ್ಟಾರ್ಕ್ 75ಕ್ಕೆ6); ಆಸ್ಟ್ರೇಲಿಯಾ: 73 ಓವರುಗಳಲ್ಲಿ 6 ವಿಕೆಟ್‌ಗೆ 378 (ಟ್ರಾವಿಸ್ ಹೆಡ್‌ 33, ಜೇಕ್ ವಿದರಾಲ್ಡ್ 72, ಮಾರ್ನಸ್ ಲಾಬುಷೇನ್ 65, ಸ್ಟೀವ್‌ ಸ್ಮಿತ್ 61, ಕ್ಯಾಮರಾನ್ ಗ್ರೀನ್ 45, ಅಲೆಕ್ಸ್‌ ಕ್ಯಾರಿ ಔಟಾಗದೇ 46; ಬ್ರೈಡನ್ ಕಾರ್ಸ್‌ 115ಕ್ಕೆ3, ಬೆನ್‌ ಸ್ಟೋಕ್ಸ್‌ 93ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.