ADVERTISEMENT

ಭಾರತ– ಆಸ್ಟ್ರೇಲಿಯಾ ಎರಡನೇ ಟೆಸ್ಟ್‌: ಮೊದಲ ದಿನ ಸಮಬಲದ ಹೋರಾಟ

ಬಾರ್ಡರ್‌–ಗವಾಸ್ಕರ್‌ ಸರಣಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 11:24 IST
Last Updated 14 ಡಿಸೆಂಬರ್ 2018, 11:24 IST
ಆರಂಭಿಕ ಆಟಗಾರ ಮಾರ್ಕಸ್‌ ಹ್ಯಾರಿಸ್‌ ಅವರ ವಿಕೆಟ್‌ ಅನ್ನು ಹನುಮ ವಿಹಾರಿ(ಟೋಪಿ ಇಲ್ಲದವರು) ಪಡೆದರು. ಈ ವೇಳೆ ಸಹ ಆಟಗಾರರು ಅಭಿನಂದಿಸಿ ಸಂಭ್ರಮಿಸಿದರು.
ಆರಂಭಿಕ ಆಟಗಾರ ಮಾರ್ಕಸ್‌ ಹ್ಯಾರಿಸ್‌ ಅವರ ವಿಕೆಟ್‌ ಅನ್ನು ಹನುಮ ವಿಹಾರಿ(ಟೋಪಿ ಇಲ್ಲದವರು) ಪಡೆದರು. ಈ ವೇಳೆ ಸಹ ಆಟಗಾರರು ಅಭಿನಂದಿಸಿ ಸಂಭ್ರಮಿಸಿದರು.   

ಪರ್ತ್‌:ಬಾರ್ಡರ್‌–ಗವಾಸ್ಕರ್‌ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಮಬಲದ ಹೋರಾಟ ನಡೆಸಿದವು. ದಿನದಾಟದ ಅಂತ್ಯಕ್ಕೆ 277ರನ್‌ ಗಳಿಸಿರುವ ಟಿಮ್‌ ಪೇನ್‌ ಬಳಗದ ಪ್ರಮುಖ 6 ವಿಕೆಟ್‌ಗಳನ್ನು ವಿರಾಟ್ ಕೊಹ್ಲಿ ಪಡೆ ಉರುಳಿಸಿದೆ.

ಮೊದಲ ಪಂದ್ಯದ ಗೆಲುವಿನ ಹುರುಪಿನಲ್ಲಿ ಪ್ರವಾಸಿ ತಂಡ ಕಣಕ್ಕಿಳಿದಿದ್ದರೆ, ಸೋಲಿನಿಂದ ಚೇತರಿಸಿಕೊಳ್ಳುವ ಛಲದಲ್ಲಿಆತಿಥೇಯ ಬಳಗ ಆಡಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆ್ಯರನ್‌ ಫಿಂಚ್‌(50) ಹಾಗೂ ಮಾರ್ಕಸ್‌ ಹ್ಯಾರಿಸ್‌(70) ಉತ್ತಮ ಆರಂಭ ಒದಗಿಸಿದರು. ತಾಳ್ಮೆಯ ಆಟ ಪ್ರದರ್ಶಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 112 ರನ್‌ಗಳ ಸೇರಿಸಿತು.

36ನೇ ಓವರ್‌ನಲ್ಲಿ ದಾಳಿಗಿಳಿದ ಜಸ್‌ಪ್ರೀತ್‌ ಬೂಮ್ರಾಈ ಜೋಡಿಯನ್ನು ಬೇರ್ಪಡಿಸಿದರು. ಫಿಂಚ್‌ ವಿಕೆಟ್‌ ಪತನದ ಬಳಿಕ ಅಲ್ಪ ಅಂತರದಲ್ಲಿ ಉಸ್ಮಾನ್‌ ಖ್ವಾಜಾ(5), ಹ್ಯಾರಿಸ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌(7) ಪೆವಿಲಿಯನ್‌ ಸೇರಿಕೊಂಡರು. ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ ಶತಕ ಬಾರಿಸಿದ್ದ ಆಸಿಸ್‌ 148 ರನ್‌ ಗಳಿಸುವ ವೇಳೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಈ ವೇಳೆ ಜೊತೆಯಾದ ಶಾನ್‌ ಮಾರ್ಶ್‌ ಹಾಗೂ ಟ್ರಾವಿಸ್‌ ಹೆಡ್‌ ಜೋಡಿ ಐದನೇ ವಿಕೆಟ್‌ಗೆ 84ರನ್‌ಗಳ ಸೇರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು. ಮಾರ್ಶ್‌ 45ರನ್‌ಗಳಿಸಿದ್ದ ವೇಳೆ ಬ್ಯಾಟಿಂಗ್‌ ಆಲ್‌ರೌಂಡರ್‌ ಹನುಮ ವಿಹಾರಿ ಬೌಲಿಂಗ್‌ನಲ್ಲಿ ಅಜಿಂಕ್ಯಾ ರಹಾನೆಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಹೆಡ್‌(58) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸದ್ಯ ನಾಯಕ ಟಿಮ್‌ ಪೇನ್‌(16) ಹಾಗೂ ಪ್ಯಾಟ್‌ ಕುಮಿನ್ಸ್‌(11) ಕ್ರೀಸ್‌ನಲ್ಲಿದ್ದಾರೆ.

ಭಾರತ ಪರ ವೇಗಿ ಇಶಾಂತ್‌ ಶರ್ಮಾ ಹಾಗೂ ವಿಹಾರಿ ತಲಾ ಎರಡು ವಿಕೆಟ್‌ ಕಬಳಿಸಿದರೆ, ಬೂಮ್ರಾ ಮತ್ತು ಉಮೇಶ್‌ ಯಾದವ್‌ ಒಂದೊಂದು ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.