ADVERTISEMENT

ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ ಆಸ್ಟ್ರೇಲಿಯಾದ ಅಲಿಸಾ ಹೀಲಿ

‘ಮಾರ್ಚ್‌ನಲ್ಲಿ ಭಾರತ ವಿರುದ್ಧ ಸರಣಿ ಕೊನೆಯದ್ದು’

ಪಿಟಿಐ
Published 13 ಜನವರಿ 2026, 13:49 IST
Last Updated 13 ಜನವರಿ 2026, 13:49 IST
ಅಲಿಸಾ ಹೀಲಿ
ಅಲಿಸಾ ಹೀಲಿ    

ಸಿಡ್ನಿ: ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರಾದ ಅಲಿಸಾ ಹೀಲಿ ಅವರು ತವರಿನಲ್ಲಿ ಭಾರತ ವಿರುದ್ಧ ಮಾರ್ಚ್‌ನಲ್ಲಿ ನಡೆಯಲಿರುವ ಸರಣಿಯ ನಂತರ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.

35 ವರ್ಷ ವಯಸ್ಸಿನ ಹೀಲಿ ಅವರು ಆ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಮತ್ತು ಏಕೈಕ ಟೆಸ್ಟ್‌ ಪಂದ್ಯವನ್ನು ಆಡಲಿದ್ದಾರೆ. ಆದರೆ ಅವರು ಟಿ20 ಸರಣಿ ಆಡುವುದಿಲ್ಲ.

‘ಮುಂಬರುವ ಭಾರತ ವಿರುದ್ಧ ಸರಣಿ ನನ್ನ ಪಾಲಿಗೆ ಕೊನೆಯದಾಗಲಿದೆ ಎಂದು ಮಿಶ್ರಭಾವನೆಗಳೊಂದಿಗೆ ಹೇಳುತ್ತಿದ್ದೇನೆ’ ಎಂದು ಅಲಿಸಾ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ನಾನು ಆಡಲಾರೆ ಎಂಬ ಅರಿವಿದೆ. ಹೀಗಾಗಿ ಭಾರತ ವಿರುದ್ಧ ಟಿ20 ಸರಣಿಯಲ್ಲೂ ಆಡುತ್ತಿಲ್ಲ’ ಎಂದಿದ್ದಾರೆ.

ಹೋದ ದಶಕದಲ್ಲಿ ಆಸ್ಟ್ರೇಲಿಯಾ ತಂಡವು ಮಹಿಳಾ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಅಲಿಸಾ ಅವರ ಪಾಲು ಮಹತ್ವದ್ದು. ಅವರು ಎಂಟು ವಿಶ್ವ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಇದರಲ್ಲಿ ಆರು ಟಿ20 ಮಾದರಿಯಲ್ಲಿ ಬಂದಿವೆ. ಆದರೆ 2025ರಲ್ಲಿ ಏಕದಿನ ವಿಶ್ವಕಪ್ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಎದುರು ಸೋತಿದ್ದು, ಅಲಿಸಾ ಪಡೆಗೆ ನಿರಾಸೆ ಉಂಟುಮಾಡಿತ್ತು.

ವಿಕೆಟ್‌ ಕೀಪರ್– ಬ್ಯಾಟರ್ ಆಗಿರುವ ಅಲಿಸಾ ಆಸ್ಟ್ರೇಲಿಯಾ ಪರ 10 ಟೆಸ್ಟ್, 123 ಏಕದಿನ ಮತ್ತು 162 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 30.56 ಸರಾಸರಿಯಲ್ಲಿ 489 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 35.98 ಸರಾಸರಿಯಲ್ಲಿ 3653 ರನ್ ಗಳಿಸಿದ್ದಾರೆ. ಇದರಲ್ಲಿ ಏಳು ಶತಕಗಳಿವೆ. 

ಟಿ20 ಕ್ರಿಕೆಟ್‌ನಲ್ಲಿ 25.45 ಸರಾಸರಿಯಲ್ಲಿ 3054 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಒಳಗೊಂಡಿದೆ.

‘ಕೆಲವು ವರ್ಷಗಳಿಂದ ಗಾಯದ ಸಮಸ್ಯೆ ಜೊತೆ ಏಗುವುದು ಮಾನಸಿಕವಾಗಿ ನನ್ನನ್ನ ಸಾಕಷ್ಟು ದಣಿಸಿತು’ ಎಂದು ಮಂಗಳವಾರ ಪೋಡ್‌ಕಾಸ್ಟ್‌ನಲ್ಲಿ ಅವರು ಹೇಳಿದ್ದಾರೆ.

‘ಹೀಲಿ ಅವರು ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರು’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಸಿಇಒ ಟಾಡ್‌ ಗ್ರೀನ್‌ಬರ್ಗ್ ಬಣ್ಣಿಸಿದ್ದಾರೆ.

15 ವರ್ಷದ ಕ್ರಿಕೆಟ್‌ ಬದುಕಿನಲ್ಲಿ ಅವರು ಕ್ರೀಡಾಂಗಣದಲ್ಲಿ ಮತ್ತು ಹೊರಗೆ ಈ ಆಟಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ’ ಎಂದೂ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.