ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಲಭ್ಯ: ವದಂತಿಗಳಿಗೆ ತೆರೆ ಎಳೆದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2021, 9:21 IST
Last Updated 15 ಡಿಸೆಂಬರ್ 2021, 9:21 IST
ವಿರಾಟ್ ಕೊಹ್ಲಿ – ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ – ಎಎಫ್‌ಪಿ ಚಿತ್ರ   

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಜನವರಿಯಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಆಯ್ಕೆಗೆ ಲಭ್ಯವಿರುತ್ತೇನೆ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಈ ಮೂಲಕ ಏಕದಿನ ಸರಣಿಯಿಂದ ಕೊಹ್ಲಿ ಹೊರಗುಳಿಯಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಕದಿನ ಕ್ರಿಕೆಟ್ ಸರಣಿಯಲ್ಲಿ ತಂಡದ ಆಯ್ಕೆಗೆ ಲಭ್ಯವಿರುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ವಿರಾಟ್ ಕೊಹ್ಲಿ ಅವರು ಮಗಳು ವಮಿಕಾ ಮೊದಲ ಹುಟ್ಟುಹಬ್ಬ ಆಚರಿಸುವ ಸಲುವಾಗಿ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಈ ಕುರಿತು ಈಗಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ಮಂಗಳವಾರ ವರದಿ ಮಾಡಿದ್ದವು. ಅತ್ತ ಮಂಡಿರಜ್ಜು ನೋವಿನಿಂದಾಗಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಲಭ್ಯರಿಲ್ಲ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಹೀಗಾಗಿ ಏಕದಿನ ಕ್ರಿಕೆಟ್ ಸರಣಿಗೆ ವಿರಾಟ್ ಲಭ್ಯರಿಲ್ಲ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.