ADVERTISEMENT

IND vs AUS: ಅಕ್ಷರ್-ಅಶ್ವಿನ್ ಶತಕದ ಜೊತೆಯಾಟ; ಭಾರತಕ್ಕೆ 1 ರನ್ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2023, 11:37 IST
Last Updated 18 ಫೆಬ್ರುವರಿ 2023, 11:37 IST
   

ದೆಹಲಿ: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ, ಮೊದಲ ಇನಿಂಗ್ಸ್‌ನಲ್ಲಿ 83.3 ಓವರ್‌ಗಳಲ್ಲಿ 262 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ರನ್ನಿನ ಹಿನ್ನಡೆ ಕಂಡಿದೆ.

ಒಂದು ಹಂತದಲ್ಲಿ 139ಕ್ಕೆ ಏಳು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಭಾರಿ ಹಿನ್ನಡೆಯ ಭೀತಿ ಎದುರಾಗಿತ್ತು. ಆದರೆ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಎಂಟನೇ ವಿಕೆಟ್‌ಗೆ 114 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟುವ ಮೂಲಕ ಭಾರತವನ್ನು ಅಪಾಯದಿಂದ ಪಾರು ಮಾಡಿದರು.

ADVERTISEMENT

ಅಕ್ಷರ್ 115 ಎಸೆತಗಳಲ್ಲಿ 74 ರನ್ (9 ಬೌಂಡರಿ, 3 ಸಿಕ್ಸರ್) ಗಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಅಶ್ವಿನ್ 37 ರನ್ (71 ಎಸೆತ, 5 ಬೌಂಡರಿ) ಗಳಿಸಿದರು.

ಈ ಮೊದಲು ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನೇಥನ್ ಲಯನ್ (67ಕ್ಕೆ 5 ವಿಕೆಟ್) ಭಾರತದ ಓಟಕ್ಕೆ ಕಡಿವಾಣ ಹಾಕಿದರು.

ವಿಕೆಟ್ ನಷ್ಟವಿಲ್ಲದೆ 21 ರನ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಅತಿಥೇಯರಿಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಮೊದಲ ವಿಕೆಟ್‌ಗೆ 46 ರನ್‌ ಸೇರಿಸಿದರು.

ಈ ವೇಳೆ ದಾಳಿಗಿಳಿದ ಲಯನ್ ಮೊದಲು ರಾಹುಲ್‌ರನ್ನು (17) ಹೊರದಬ್ಬಿದರು. ಬಳಿಕ, ಒಂದೇ ಓವರ್‌ನಲ್ಲಿ (19ನೇ ಓವರ್) ನಾಯಕ ರೋಹಿತ್ ಶರ್ಮಾ (32) ಹಾಗೂ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಚೇತೇಶ್ವರ ಪೂಜಾರ (0) ಅವರ ವಿಕೆಟ್ ಗಳಿಸಿದರು.

ಈ ಮೂಲಕ ಪೂಜಾರ 100ನೇ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದ ಅಪಖ್ಯಾತಿಗೆ ಒಳಗಾದರು.

ಶ್ರೇಯಸ್ ಅಯ್ಯರ್ (4) ಕೂಡ ಲಯನ್ ಬಲೆಗೆ ಬಿದ್ದರು.

ಇನ್ನೊಂದೆಡೆ ವಿರಾಟ್ ಕೊಹ್ಲಿ (44) ದಿಟ್ಟ ಹೋರಾಟ ತೋರಿದರು. ಅಲ್ಲದೆ ರವೀಂದ್ರ ಜಡೇಜ (26) ಅವರೊಂದಿಗೆ ಐದನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಶ್ರೀಕರ್ ಭರತ್ (6) ಅವರನ್ನು ಪೆವಿಲಿಯನ್‌ಗೆ ಮರಳಿಸಿದ ಲಯನ್ ಐದು ವಿಕೆಟ್ ಪೂರ್ಣಗೊಳಿಸಿದರು. ಅಲ್ಲದೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದರು.

ಇನ್ನುಳಿದಂತೆ ಮೊಹಮ್ಮದ್ ಶಮಿ (2) ಹಾಗೂ ಮೊಹಮ್ಮದ್ ಸಿರಾಜ್ (1*) ರನ್ ಗಳಿಸಿದರು.

ಆಸ್ಟ್ರೇಲಿಯಾ ಪರ ಲಯನ್ ಐದು, ಟಾಡ್ ಮರ್ಫಿ ಹಾಗೂ ಮ್ಯಾಥ್ಯೂ ಕ್ಯೂನೆಮನ್ ತಲಾ ಎರಡು ಮತ್ತು ನಾಯಕ ಪ್ಯಾಟ್ ಕಮಿನ್ಸ್ ಒಂದು ವಿಕೆಟ್ ಗಳಿಸಿದರು.

ಆಸೀಸ್ ದಿಟ್ಟ ಉತ್ತರ...
ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಎರಡನೇ ದಿನದಂತ್ಯಕ್ಕೆ 12 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ. ಉಸ್ಮಾನ್ ಖ್ವಾಜಾ (6 ರನ್) ವಿಕೆಟ್ ಅನ್ನು ರವೀಂದ್ರ ಜಡೇಜ ಕಬಳಿಸಿದರು.

ಟ್ರಾವಿಸ್ ಹೆಡ್ (39*) ಹಾಗೂ ಮಾರ್ನಸ್ ಲಾಬುಷೇನ್ (16*) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.