ADVERTISEMENT

ಅಭ್ಯಾಸಕ್ಕೆ ಬಾಬರ್ ಆಜಂ ಗೈರು:ಏನೇ ಆದರೂ ಭಾರತವನ್ನು ಸೋಲಿಸಿ ಎಂದ ಪಿಸಿಬಿ ಅಧ್ಯಕ್ಷ

ಪಿಟಿಐ
Published 23 ಫೆಬ್ರುವರಿ 2025, 4:57 IST
Last Updated 23 ಫೆಬ್ರುವರಿ 2025, 4:57 IST
ಬಾಬರ್ ಆಜಂ
ಎಎಫ್‌ಪಿ ಚಿತ್ರ
ಬಾಬರ್ ಆಜಂ ಎಎಫ್‌ಪಿ ಚಿತ್ರ   

ದುಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.

ಈ ನಡುವೆ, ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಜಂ ಅವರು ತಂಡದ ತರಬೇತಿಗೆ ಗೈರಾಗಿದ್ದಾರೆ. ಹಾಗಾಗಿ, ಭಾರತ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎನ್ನಲಾಗುತ್ತಿದೆ. ಶನಿವಾರ ಸಂಜೆ ನಡೆದ ಅಭ್ಯಾಸದಲ್ಲಿ ಅವರು ಕಾಣದ ಹಿನ್ನೆಲೆಯಲ್ಲಿ ಅವರನ್ನು ಪಂದ್ಯಕ್ಕೆ ಪರಿಗಣಿಸಲಾಗುವುದಿಲ್ಲ ಎಂಬ ಊಹಾಪೋಹಗಳು ದಟ್ಟವಾಗಿವೆ.

ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 94 ಎಸೆತಗಳಲ್ಲಿ 64 ರನ್ ಗಳಿಸಿದ್ದಕ್ಕಾಗಿ ಆಜಂ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಕರಾಚಿಯಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ 60 ರನ್‌ಗಳಿಂದ ಸೋಲುಂಡಿತ್ತು.

ADVERTISEMENT

ಅಭ್ಯಾಸದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಧ್ಯಂತರ ಮುಖ್ಯ ಕೋಚ್ ಅಕಿಬ್ ಜಾವೇದ್, ಅಭ್ಯಾಸಕ್ಕೆ ಆಜಂ ಅನುಪಸ್ಥಿತಿ ಬಗ್ಗೆ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಲಿಲ್ಲ. ಮಾಜಿ ನಾಯಕ ವಿಶ್ರಾಂತಿ ತೆಗದುಕೊಂಡಿದ್ದಾರೆ ಎಂದಷ್ಟೇ ಹೇಳಿದರು.

ಈ ನಡುವೆ ಅದೇನೇ ಆದರೂ ಭಾರತ ತಂಡವನ್ನು ಸೋಲಿಸಿ ಎಂದು ಪಾಕಿಸ್ತಾನ ತಂಡಕ್ಕೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತಾಕೀತು ಮಾಡಿದ್ದಾರೆ.

ಕಳೆದ ರಾತ್ರಿ, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭೇಟಿಯಾದ ನಖ್ವಿ, ಟೀಕಾಕಾರರನ್ನು ಸುಮ್ಮನಿರಿಸಲು, ಯಾವುದೇ ಸಂದರ್ಭದಲ್ಲೂ ಭಾರತ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಪಂದ್ಯದಲ್ಲಿ ಸೋತರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.

ತಂಡದ ಸುಮಾರು ಎರಡು ಗಂಟೆಗಳ ಅಭ್ಯಾಸದ ಸಮಯವನ್ನು ನಖ್ವಿ ಆಗಮನದ ಬಳಿಕ ಒಂದು ಗಂಟೆಗೆ ಸ್ಥಗಿತಗೊಳಿಸಲಾಯಿತು. ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಮುಖ್ಯ ಕೋಚ್ ಅಇಬ್ ಜಾವೇದ್ ಅವರನ್ನು ಭೇಟಿ ಮಾಡಿದ ನಖ್ವಿ ಸುದೀರ್ಘ ಚರ್ಚೆ ನಡೆಸಿದರು.

ವೇಗಿಗಳಾದ ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದು ಕಂಡುಬಂದಿದೆ.

ನಂತರ, ಮಾಧ್ಯಮಗಳ ಜೊತೆ ಮಾತತಡಿದ ನಖ್ವಿ, ಪಾಕಿಸ್ತಾನ ತಂಡ ಭಾರತವನ್ನು ಎದುರಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ನಮ್ಮ ತಂಡವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ನನ್ನ ಅಭಿಪ್ರಾಯದಲ್ಲಿ ಅವರು ಫಾರ್ಮ್‌ನಲ್ಲಿದ್ದಾರೆ. ಗೆದ್ದರೂ, ಸೋತರೂ ನಾವು ತಂಡದೊಂದಿಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.