ADVERTISEMENT

ಇಂಗ್ಲೆಂಡ್‌ ಕ್ಲೀನ್‌ಸ್ವೀಪ್‌ ಸಾಧನೆ

ಕ್ರಿಕೆಟ್‌: ಅಂತಿಮ ಟೆಸ್ಟ್‌ನಲ್ಲೂ ನ್ಯೂಜಿಲೆಂಡ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 15:06 IST
Last Updated 27 ಜೂನ್ 2022, 15:06 IST
ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ಸಹ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಹಾಗೂ ಸಹ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಲೀಡ್ಸ್ (ಎಎಫ್‌ಪಿ): ನ್ಯೂಜಿಲೆಂಡ್‌ ಎದುರಿನ ಅಂತಿಮ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿದ ಇಂಗ್ಲೆಂಡ್‌, ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿತು.

ಗೆಲುವಿಗೆ 296 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್‌ ಕೊನೆಯ ದಿನವಾದ ಸೋಮವಾರ 54.2 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು.

ಇಂಗ್ಲೆಂಡ್‌ 2ಕ್ಕೆ 183 ರನ್‌ಗಳಿಂದ ದಿನದಾಟ ಆರಂಭಿಸಿತು. ಗೆಲ್ಲಲು ಇನ್ನೂ 113 ರನ್‌ಗಳು ಬೇಕಿದ್ದವು. ಮಳೆಯ ಕಾರಣ ಮೊದಲ ಅವಧಿಯ ಆಟ ನಡೆಯಲಿಲ್ಲ. ಎರಡನೇ ಅವಧಿಯಲ್ಲಿ ಕೇವಲ 15.2 ಓವರ್‌ಗಳನ್ನು ಆಡಿ ಜಯ ಸಾಧಿಸಿತು.

ADVERTISEMENT

ಜೋ ರೂಟ್‌ (ಅಜೇಯ 86) ಮತ್ತು ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದ ಜಾನಿ ಬೈಸ್ಟೋ (ಅಜೇಯ 71, 44 ಎ., 4X8, 6X3) ಆತಿಥೇಯ ತಂಡವನ್ನು ಬೇಗನೇ ಗೆಲುವಿನತ್ತ ಕೊಂಡೊಯ್ದರು.

30 ಎಸೆತಗಳಲ್ಲಿ 50 ರನ್‌ ಪೂರೈಸಿದ ಬೈಸ್ಟೋ, ಇಂಗ್ಲೆಂಡ್‌ ಪರ ಟೆಸ್ಟ್‌ನಲ್ಲಿ ಎರಡನೇ ಅತಿವೇಗದ ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. ಸ್ಪಿನ್ನರ್‌ ಮೈಕಲ್‌ ಬ್ರೇಸ್‌ವೆಲ್‌ ಅವರ ಓವರ್‌ನಲ್ಲಿ ಭರ್ಜರಿ ಸಿಕ್ಸರ್‌ ಗಳಿಸಿ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌ 117.3 ಓವರ್‌ಗಳಲ್ಲಿ 329; ಇಂಗ್ಲೆಂಡ್‌: 67 ಓವರ್‌ಗಳಲ್ಲಿ 360. ಎರಡನೇ ಇನಿಂಗ್ಸ್: ನ್ಯೂಜಿಲೆಂಡ್‌: 105.2 ಓವರ್‌ಗಳಲ್ಲಿ 326;ಇಂಗ್ಲೆಂಡ್ 54.2 ಓವರ್‌ಗಳಲ್ಲಿ 3ಕ್ಕೆ 296 (ಒಲಿ ಪೋಪ್‌ 82, ಜೋ ರೂಟ್‌ ಔಟಾಗದೆ 86, ಜಾನಿ ಬೈಸ್ಟೋ ಔಟಾಗದೆ 71, ಟಿಮ್ ಸೌಥಿ 68ಕ್ಕೆ 1)

ಫಲಿತಾಂಶ: ಇಂಗ್ಲೆಂಡ್‌ಗೆ 7 ವಿಕೆಟ್‌ ಗೆಲುವು; 3–0 ರಲ್ಲಿ ಸರಣಿ ಜಯ

ಪಂದ್ಯಶ್ರೇಷ್ಠ: ಜಾಕ್‌ ಲೀಚ್‌

ಸರಣಿ ಶ್ರೇಷ್ಠ: ಜೋ ರೂಟ್‌ (ಇಂಗ್ಲೆಂಡ್‌), ಡೆರಿಲ್‌ ಮಿಚೆಲ್ (ನ್ಯೂಜಿಲೆಂಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.