ADVERTISEMENT

ಬಜರಂಗ್ ಪೂನಿಯಾ, ಇಳವೆನ್ನಿಲಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 16:07 IST
Last Updated 9 ಡಿಸೆಂಬರ್ 2020, 16:07 IST
ಬಜರಂಗ್ ಪೂನಿಯಾ
ಬಜರಂಗ್ ಪೂನಿಯಾ   

ನವದೆಹಲಿ: ಕುಸ್ತಿಪಟು ಬಜರಂಗ್ ಪೂನಿಯಾ ಮತ್ತು ಶೂಟಿಂಗ್ ಕ್ರೀಡಾಪಟು ಇಳವೆನ್ನಿಲಾ ವಾಳರಿವನ್ ಅವರು ಎಫ್‌ಐಸಿಸಿಐ ಇಂಡಿಯಾ ಕ್ರೀಡಾ ಪ್ರಶಸ್ತಿ ಗಳಿಸಿದ್ದಾರೆ.

2019–20ನೇ ಸಾಲಿನಲ್ಲಿ ಇವರಿಬ್ಬರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪುರುಷರ ಫ್ರೀಸ್ಟೈಲ್ ಕುಸ್ತಿಪಟು ಬಜರಂಗ್ ಅವರು ಸದ್ಯ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

’ಇಂತಹ ಪ್ರಶಸ್ತಿ, ಪುರಸ್ಕಾರಗಳು ನನ್ನಲ್ಲಿ ನವಚೈತನ್ಯ ತುಂಬುತ್ತವೆ. ಮತ್ತಷ್ಟು ಉನ್ನತ ಸಾಧನೆ ಮಾಡುವ ಆತ್ಮವಿಶ್ವಾಸ ಮೂಡುತ್ತದೆ. ಮುಂದಿನ ದಿನಗಳಲ್ಲಿ ದೊಡ್ಡ ಸಾಧನೆ ಮಾಡುತ್ತೇನೆ. ನನ್ನ ಜೊತೆಗೆ ಪ್ರಶಸ್ತಿ ಪಡೆಯುತ್ತಿರುವ ಎಲ್ಲ ಕ್ರೀಡಾಪಟುಗಳಿಗೂ ಅಭಿನಂದನೆಗಳು‘ ಎಂದು ಬಜರಂಗ್ ಹೇಳಿದ್ದಾರೆ.

ADVERTISEMENT

’ನನ್ನ ಕುಟುಂಬಕ್ಕೆ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ. ಮೆಂಟರ್ ಆಗಿರುವ ಗಗನ್ ನಾರಂಗ್ ಮತ್ತು ಕೋಚ್ ನೇಹಾ ಚೌಹಾಣ್ ಅವರ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ. ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ನೀಡುತ್ತಿರುವ ಬೆಂಬಲಕ್ಕೆ ಚಿರ ಋಣಿ‘ ಎಂದು ಇಳವೆನ್ನಿಲ್ಲಾ ಹೇಳಿದ್ದಾರೆ.

ಪ್ಯಾರಾ ಅಥ್ಲೀಟ್ ವಿಭಾಗದಲ್ಲಿ ಸುಂದರ್ ಸಿಂಗ್ ಗುರ್ಜರ್ ಮತ್ತು ಸಿಮ್ರನ್ ಶರ್ಮಾ ಅವರಿಗೆ ಗೌರವ ಸಂದಿದೆ.

ಅಥ್ಲೆಟಿಕ್ಸ್‌ ಕೋಚ್ ರಾಧಾಕೃಷ್ಣನ್ ನಾಯರ್ ಅವರಿಗೆ ವರ್ಷದ ತರಬೇತುದಾರ ಪುರಸ್ಕಾರ ನೀಡಲಾಗಿದೆ.

ಉದ್ಯಮಗಳ ಒಕ್ಕೂಟವಾಗಿರುವ ಎಫ್‌ಐಸಿಸಿಐ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಕ್ರೀಡಾ ಉತ್ತೇಜನ ಸಂಸ್ಥೆಯ (ಖಾಸಗಿ ವಲಯ) ಟೆನ್ವಿಕ್ ಸ್ಪೋರ್ಟ್ಸ್‌ ಪರವಾಗಿ ಪ್ರಶಸ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.