ADVERTISEMENT

ರಣಜಿ ಟ್ರೋಫಿ ಅಭಿಯಾನ ನಾಳೆಯಿಂದ: ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ಪಡಿಕ್ಕಲ್‌, ನಾಯರ್ ಮೇಲೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 14:10 IST
Last Updated 14 ಅಕ್ಟೋಬರ್ 2025, 14:10 IST
ದೇವದತ್ತ ಪಡಿಕ್ಕಲ್‌ 
ದೇವದತ್ತ ಪಡಿಕ್ಕಲ್‌    

ಬೆಂಗಳೂರು: 2014–15ರ ಋತುವಿನಲ್ಲಿ ಚಾಂಪಿಯನ್‌ ಆದ ಬಳಿಕ ಪ್ರಶಸ್ತಿಯ ಬರವನ್ನು ಎದುರಿಸುತ್ತಿರುವ ಕರ್ನಾಟಕ ತಂಡವು ರಣಜಿ ಟ್ರೋಫಿ ಹಾಲಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಆತಿಥೇಯ ಸೌರಾಷ್ಟ್ರ ವಿರುದ್ಧ ಮಯಂಕ್‌ ಅಗರವಾಲ್ ಬಳಗವು ಬುಧವಾರ ಅಭಿಯಾನ ಆರಂಭಿಸಲಿದೆ.

ಉಭಯ ತಂಡಗಳು ಎಲೀಟ್‌ ಬಿ ಗುಂಪಿನಲ್ಲಿವೆ. ಈ ಗುಂಪಿನಲ್ಲಿ ಕಳೆದ ಬಾರಿಯ ರನ್ನರ್ಸ್‌ ಅಪ್‌ ಕೇರಳ ಸೇರಿದಂತೆ ಎಂಟು ತಂಡಗಳಿವೆ.

ಎಂಟು ಬಾರಿಯ ಚಾಂಪಿಯನ್‌ ಕರ್ನಾಟಕ ತಂಡಕ್ಕೆ ಒಂದು ದಶಕದಿಂದ ಪ್ರಶಸ್ತಿ ಸುತ್ತು ತಲುಪಲು ಸಾಧ್ಯವಾಗಿಲ್ಲ. ಈ ಬಾರಿ ತಂಡವು ಅನುಭವಿಗಳು ಮತ್ತು ಉದಯೋನ್ಮುಖ ಆಟಗಾರರ ಮಿಶ್ರಣದೊಂದಿಗೆ ‌‌ಸಮತೋಲನದಿಂದ ಕೂಡಿದೆ.

ADVERTISEMENT

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಬ್ಯಾಟರ್‌ ದೇವದತ್ತ ಅವರು ತಂಡವನ್ನು ಸೇರಿಕೊಂಡಿದ್ದಾರೆ. ಅನುಭವಿ ಬ್ಯಾಟರ್‌ ಕರುಣ್‌ ನಾಯರ್‌ ಎರಡು ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ.

ಪಡಿಕ್ಕಲ್ ಅವರು ಅಗರವಾಲ್‌ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಆರ್. ಸ್ಮರಣ್‌, ನಾಯರ್, ಶ್ರೀಜಿತ್ ಕೆ.ಎಲ್ ಮತ್ತು ಅಭಿನವ್ ಮನೋಹರ್ ಬ್ಯಾಟಿಂಗ್ ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ. ಪಡಿಕ್ಕಲ್‌ ಸೇರ್ಪಡೆಯಿಂದಾಗಿ ಯುವ ಆರಂಭಿಕ ಆಟಗಾರ ಅನೀಶ್ ಕೆ.ವಿ. ಅವರು ಬೆಂಚ್‌ನಲ್ಲಿ ಉಳಿಯುವ ಸಾಧ್ಯತೆಯೇ ಹೆಚ್ಚು.

33 ವರ್ಷದ ನಾಯರ್‌ ಎರಡು ವರ್ಷಗಳ ಬಳಿಕ ಮತ್ತೆ ರಾಜ್ಯಕ್ಕೆ ವಾಪಸಾಗಿರುವುದು ತಂಡದಲ್ಲಿ ಆತ್ಮವಿಶ್ವಾಸ ವೃದ್ಧಿಸಿದೆ. ಕಳೆದ ಎರಡು ಋತುವಿನಲ್ಲಿ ಅವರು ವಿದರ್ಭ ತಂಡದಲ್ಲಿ ರನ್‌ ಹೊಳೆ ಹರಿಸಿದ್ದರು. ಹೋದ ಸಾಲಿನಲ್ಲಿ ವಿದರ್ಭ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಯಶಸ್ಸಿನ ಬಳಿಕ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಆಯ್ಕೆಯಾಗಿದ್ದರು. ಆದರೆ, ಅಲ್ಲಿ ನಿರಾಸೆ ಮೂಡಿಸಿದ್ದರಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿಗೆ ಕೈಬಿಡಲಾಗಿತ್ತು.

ಹೋದ ವರ್ಷ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಸ್ಮರಣ್‌ ಅವರು ಅಮೋಘ ಪ್ರದರ್ಶನ ನೀಡಿದ್ದರು. ತಮ್ಮ ಮೊದಲ ವರ್ಷದಲ್ಲೇ 64.50 ಸರಾಸರಿಯಲ್ಲಿ 516 ರನ್‌ ಗಳಿಸಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹೀಗಾಗಿ, ಈ ಬಾರಿಯೂ ಅವರ ಮೇಲೆ ನಿರೀಕ್ಷೆಯ ಭಾರವಿದೆ. 

ಕರ್ನಾಟಕದ ಬ್ಯಾಟಿಂಗ್‌ ಮತ್ತು ವೇಗದ ಬೌಲಿಂಗ್‌ ವಿಭಾಗ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಆದರೆ ಉತ್ತಮ ಸ್ಪಿನ್ನರ್‌ಗಳ ಕೊರತೆ ತಂಡವನ್ನು ಕಾಡುತ್ತಿದೆ. ಕಳೆದ ಆವೃತ್ತಿಯಲ್ಲಿ ಕೇರಳಕ್ಕೆ ಆಡಿದ್ದ ಅನುಭವಿ ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಅವರು ತಂಡಕ್ಕೆ ವಾ‍ಪಸಾಗಿರುವುದು ಕೊಂಚ ಬಲಬಂದಿದೆ. ಅವರಿಗೆ ಆಫ್ ಸ್ಪಿನ್ನರ್ ಮೊಹ್ಸಿನ್ ಖಾನ್ ಅಥವಾ ಎಡಗೈ ಸ್ಪಿನ್ನರ್‌ ಶಿಖರ್‌ ಶೆಟ್ಟಿ ಸಾಥ್‌ ನೀಡಲಿದ್ದಾರೆ. ವೈಶಾಖ ವಿಜಯಕುಮಾರ್ ಮತ್ತು ವಿದ್ವತ್ ಕಾವೇರಪ್ಪ ಅವರು ವೇಗದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.  

ತಂಡಗಳು:

ಕರ್ನಾಟಕ ತಂಡ (ಸಂಭವನೀಯರು): ಮಯಂಕ್‌ ಅಗರವಾಲ್‌ (ನಾಯಕ), ದೇವದತ್ತ ಪಡಿಕ್ಕಲ್‌, ಸ್ಮರಣ್‌ ಆರ್‌, ಕರುಣ್‌ ನಾಯರ್‌, ಶ್ರೀಜಿತ್‌ ಕೆ.ಎಲ್‌ (ವಿಕೆಟ್‌ ಕೀಪರ್‌), ಅಭಿನವ್‌ ಮನೋಹರ್‌, ಶ್ರೇಯಸ್‌ ಗೋಪಾಲ್‌, ವೆಂಕಟೇಶ್ ಎಂ, ವೈಶಾಖ ವಿಜಯಕುಮಾರ್‌, ಶ್ರೀಖರ್‌ ಶೆಟ್ಟಿ/ಮೊಹ್ಸಿನ್‌ ಖಾನ್‌, ವಿದ್ವತ್‌ ಕಾವೇರಪ್ಪ

ಸೌರಾಷ್ಟ್ರ ತಂಡ: ಜಯದೇವ್ ಉನದ್ಕತ್ (ಸಿ), ಹರ್ವಿಕ್ ದೇಸಾಯಿ, ತರಂಗ್ ಗೊಹೆಲ್, ಅರ್ಪಿತ್ ವಾಸವ್‌ದಾ, ಚಿರಾಗ್ ಜಾನಿ, ಪ್ರೇರಕ್ ಮಂಕಡ್, ಯುವರಾಜ್‌ಸಿನ್ಹ್ ದೋಡಿಯಾ, ಧರ್ಮೇಂದ್ರ ಸಿನ್ಹಾ ಜಡೇಜ, ಚೇತನ್ ಸಕಾರಿಯಾ, ಪಾರ್ಥ್ ಭುತೆ, ಸಮ್ಮರ್ ಗಜ್ಜರ್, ಅಂಶ್ ಗೋಸಾಯಿ, ಜೇ ಗೋಹಿಲ್, ಕೆವಿನ್ ಜೀವರಾಜನಿ, ಹೆತ್ವಿಕ್ ಕೋಟಕ್, ಅಂಕುರ್ ಪನ್ವಾರ್.

ಕರುಣ್‌ ನಾಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.