ADVERTISEMENT

ಕೆಪಿಎಲ್‌: ಗೌತಮ್‌ ಬಿರುಸಿನ ಬ್ಯಾಟಿಂಗ್‌

ಬಳ್ಳಾರಿ ಟಸ್ಕರ್ಸ್‌ ಉತ್ತಮ ಮೊತ್ತ

ಮಹಮ್ಮದ್ ನೂಮಾನ್
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST
ಕೆಪಿಎಲ್ ಟೂರ್ನಿಯ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಅಜೇಯ ಅರ್ಧಶತಕ ಗಳಿಸಿದ ಬಳ್ಳಾರಿ ಟಸ್ಕರ್ಸ್ ತಂಡದ ಸಿ.ಎಂ.ಗೌತಮ್ ಆಟದ ವೈಖರಿ. ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್‌
ಕೆಪಿಎಲ್ ಟೂರ್ನಿಯ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಅಜೇಯ ಅರ್ಧಶತಕ ಗಳಿಸಿದ ಬಳ್ಳಾರಿ ಟಸ್ಕರ್ಸ್ ತಂಡದ ಸಿ.ಎಂ.ಗೌತಮ್ ಆಟದ ವೈಖರಿ. ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್‌   

ಮೈಸೂರು: ನಾಯಕ ಸಿ.ಎಂ.ಗೌತಮ್‌ ಮತ್ತೊಂದು ಸೊಗಸಾದ ಇನಿಂಗ್ಸ್‌ ಕಟ್ಟಿದರು. ಅವರ ಬಿರುಸಿನ ಆಟದ ನೆರವಿನಿಂದ ಬಳ್ಳಾರಿ ಟಸ್ಕರ್ಸ್‌ ತಂಡ ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್‌ ಗೆಲುವಿಗೆ 202 ರನ್‌ಗಳ ಗುರಿ ನೀಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಕ್ವಾಲಿಫೈಯರ್–1’ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟಸ್ಕರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 ರನ್‌ ಗಳಿಸಿತು.

63 ಎಸೆತಗಳಲ್ಲಿ 96 ರನ್‌ (9 ಬೌಂ, 5 ಸಿ) ಗಳಿಸಿದ ಗೌತಮ್‌ ತಂಡದ ಭಾರಿ ಮೊತ್ತಕ್ಕೆ ಕಾರಣರಾದರು. ಕೊನೆಯ ಓವರ್‌ಗಳಲ್ಲಿ ಹೊಡೆಬಡಿಯ ಆಟವಾಡಿದ ಜೀಶನ್‌ ಅಲಿ ಸೈಯದ್ (32, 9 ಎ, 3 ಬೌಂ, 3 ಸಿ.) ಪ್ರೇಕ್ಷಕರನ್ನು ರಂಜಿಸಿದರು.

ADVERTISEMENT

ಉತ್ತಮ ಆರಂಭ: ಟಾಸ್‌ ಗೆದ್ದ ಟಸ್ಕರ್ಸ್‌ ಬ್ಯಾಟಿಂಗ್‌ ಆಯ್ದುಕೊಂಡಿತು. ಗೌತಮ್‌ ಮತ್ತು ಅಭಿಷೇಕ್‌ ರೆಡ್ಡಿ (16, 10 ಎಸೆತ) ಮೊದಲ ವಿಕೆಟ್‌ಗೆ 35 ರನ್‌ ಸೇರಿಸಿದರು. ರೆಡ್ಡಿ ವಿಕೆಟ್‌ ಪಡೆದ ಡಿ.ಅವಿನಾಶ್‌ ಈ ಜತೆಯಾಟ ಮುರಿದರು.

ಕಳೆದ ಎರಡು ‍ಪಂದ್ಯಗಳಲ್ಲಿ ಬಿರುಸಿನ ಆಟವಾಡಿದ್ದ ಕೆ.ಗೌತಮ್‌ ಖಾತೆ ತೆರೆಯದೆಯೇ ಪೆವಿಲಿಯನ್‌ ಮರಳಿದರು. ಸ್ಟಾಲಿನ್‌ ಹೂವರ್‌ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ರಕ್ಷಿತ್‌ಗೆ ಕ್ಯಾಚ್ ನೀಡಿದರು.

ಬೆನ್ನುಬೆನ್ನಿಗೆ ಎರಡು ವಿಕೆಟ್‌ ಕಳೆದುಕೊಂಡ ಟಸ್ಕರ್ಸ್‌ ಒತ್ತಡಕ್ಕೆ ಒಳಗಾಯಿತು. ಆದರೆ ಸಿ.ಎಂ.ಗೌತಮ್‌ ಮತ್ತು ದೇವದತ್ತ ಪಡಿಕ್ಕಲ್ (19, 16 ಎಸೆತ) ಮೂರನೇ ವಿಕೆಟ್‌ಗೆ 34 ಎಸೆತಗಳಲ್ಲಿ 49 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು.

ಗೌತಮ್‌ ಆ ಬಳಿಕ ಸಿ.ಎ.ಕಾರ್ತಿಕ್‌ (25, 18 ಎಸೆತ) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 40 ಎಸೆತಗಳಲ್ಲಿ 67 ರನ್‌ ಸೇರಿಸಿದರು. ಕೊನೆಯಲ್ಲಿ ನಾಯಕನಿಗೆ ತಕ್ಕ ಸಾಥ್‌ ನೀಡಿದ ಜೀಶನ್‌ ಸ್ಕೋರಿಂಗ್‌ನ ವೇಗ ಹೆಚ್ಚಿಸಿದರು. ಐದನೇ ವಿಕೆಟ್‌ಗೆ 15 ಎಸೆತಗಳಲ್ಲಿ 49 ರನ್‌ಗಳು ಬಂದವು.

ಕೊನೆಯ 5 ಓವರ್‌ಗಳಲ್ಲಿ ಟಸ್ಕರ್ಸ್ 70 ರನ್‌ ಪೇರಿಸಿತು. ಗೌತಮ್‌ಗೆ ಈ ಪಂದ್ಯದಲ್ಲೂ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ಕಳೆದ ಪಂದ್ಯದಲ್ಲಿ ಅವರು ಅಜೇಯ 92 ರನ್‌ ಗಳಿಸಿದ್ದರು. ಎದುರಾಳಿ ತಂಡದ ಎಲ್ಲ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಅಂಗಳದ ಮೂಲೆಮೂಲೆಗೂ ಚೆಂಡನ್ನಟ್ಟಿದರು.

ಸಂಕ್ಷಿಪ್ತ ಸ್ಕೋರ್‌: ಬಳ್ಳಾರಿ ಟಸ್ಕರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 (ಸಿ.ಎಂ.ಗೌತಮ್ 96, ಅಭಿಷೇಕ್‌ ರೆಡ್ಡಿ 16, ದೇವದತ್ತ ಪಡಿಕ್ಕಲ್ 19, ಸಿ.ಎ.ಕಾರ್ತಿಕ್ 25, ಜೀಶನ್‌ ಅಲಿ 32, ಡಿ.ಅವಿನಾಶ್ 53ಕ್ಕೆ 2, ಝಹೂರ್ ಫರೂಕಿ 48ಕ್ಕೆ 2)

ಇನ್ನೊಂದು ಅವಕಾಶ

ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ಫೈನಲ್‌ ಪ್ರವೇಶಿಸಲಿದೆ. ಸೋತ ತಂಡಕ್ಕೆ ಫೈನಲ್‌ ಪ್ರವೇಶಿಸಲು ಇನ್ನೊಂದು ಅವಕಾಶವಿದೆ.‘ಎಲಿಮಿನೇಟರ್‌’ನಲ್ಲಿ ಗೆಲ್ಲುವ ತಂಡದ ಜತೆ ಆ.30 ರಂದು ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡಲಿದೆ.

***

ಇಂದಿನ ಪಂದ್ಯ

ಎಲಿಮಿನೇಟರ್:ಶಿವಮೊಗ್ಗ ಲಯನ್ಸ್– ಹುಬ್ಬಳ್ಳಿ ಟೈಗರ್ಸ್

ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.