ರಚಿನ್ ರವೀಂದ್ರ
ಪಿಟಿಐ ಸಂಗ್ರಹ ಚಿತ್ರ
ರಾವಲ್ಪಿಂಡಿ: ಹಣೆಯ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಪುನರಾಗಮನ ಮಾಡಿದ ರಚಿನ್ ರವೀಂದ್ರ (112, 105ಎ, 4x12, 6x1) ಸೊಗಸಾದ ಶತಕ ಬಾರಿಸಿದರು. ಅವರ ಶತಕದ ನೆರವಿನಿಂದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ‘ಎ’ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋಮವಾರ 5 ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆಯಿತು.
ನ್ಯೂಜಿಲೆಂಡ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ಎರಡನೇ ತಂಡವಾಗಿ ನಾಕೌಟ್‌ಗೆ ಮುನ್ನಡೆಯುವುದು ಖಚಿತವಾಯಿತು. ಎರಡು ಸೋಲುಗಳೊಂದಿಗೆ ಆತಿಥೇಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹೊರಬಿದ್ದಂತಾಯಿತು.
ಆಫ್ ಸ್ಪಿನ್ನರ್ ಮೈಕೆಲ್ ಬ್ರೇಸ್‌ವೆಲ್ ಜೀವನಶ್ರೇಷ್ಠ ಬೌಲಿಂಗ್ (26ಕ್ಕೆ4) ಪ್ರದರ್ಶಿಸಿ ಬಾಂಗ್ಲಾದೇಶ ತಂಡವನ್ನು 9 ವಿಕೆಟ್‌ಗೆ 236 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರಂಭದ ಕುಸಿತದಿಂದ ಚೇತರಿಸಿದ ನ್ಯೂಜಿಲೆಂಡ್ 23 ಎಸೆತಗಳಿರುವಂತೆ 5 ವಿಕೆಟ್‌ಗೆ 240 ರನ್ ಹೊಡೆದು ಗೆಲುವು ಆಚರಿಸಿತು. ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ಮೇಲೆ 60 ರನ್‌ಗಳಿಂದ ಜಯಗಳಿಸಿತ್ತು.
ರವೀಂದ್ರ ಅವರಿಗೆ ಏಕದಿನ ಪಂದ್ಯಗಳಲ್ಲಿ ಇದು ನಾಲ್ಕನೇ ಶತಕ. ಅವರು 30 ರನ್ ದಾಟಿದಾಗ ಈ ಮಾದರಿಯಲ್ಲಿ ಸಾವಿರ ರನ್‌ಗಳ ಮೈಲಿಗಲ್ಲು ದಾಟಿದರು.
ಅನುಭವಿಗಳಾದ ವಿಲ್ ಯಂಗ್ (0) ಮತ್ತು ಕೇನ್ ವಿಲಿಯಮ್ಸನ್ (5) ಅವರು 15 ರನ್‌ಗಳಾಗುವಷ್ಟರಲ್ಲಿ ನಿರ್ಗಮಿಸಿದ್ದರು. ಆದರೆ ಎರಡು ಉಪಯುಕ್ತ ಜೊತೆಯಾಟಗಳ ಮೂಲಕ ರವೀಂದ್ರ ಅವರು ತಂಡ ಹಳಿ ತಪ್ಪದಂತೆ ನೋಡಿಕೊಂಡರು. ಮೂರನೇ ವಿಕೆಟ್‌ಗೆ ಕಾನ್ವೆ ಜೊತೆ 57 ರನ್ ಸೇರಿಸಿದರಲ್ಲದೇ, ನಾಯಕ ಟಾಮ್ ಲೇಥಮ್ (55, 76ಎ) ಜೊತೆ ಮಹತ್ವದ 129 ರನ್ ಜೊತೆಯಾಟವಾಡಿದರು. ಗ್ಲೆನ್ ಫಿಲಿಪ್ಸ್ (ಔಟಾಗದೇ 21) ಮತ್ತು ಬ್ರೇಸ್‌ವೆಲ್ (ಅಜೇಯ 11) ಗೆಲುವಿನ ಔಪಚಾರಿಕತೆ ಮುಗಿಸಿದರು.
ಇದಕ್ಕೆ ಮೊದಲು, ಬ್ಯಾಟಿಂಗಿಗೆ ಕಳುಹಿಸಲ್ಪಟ್ಟ ಬಾಂಗ್ಲಾ ಪರ ಆರಂಭ ಆಟಗಾರ ನಜ್ಮುಲ್ ಹುಸೇನ್ ಶಾಂತೊ 77 ರನ್ (110ಎ, 4x9) ಹೊಡೆದರೆ, ಕೆಳಮಧ್ಯಮ ಕ್ರಮಾಂಕದಲ್ಲಿ ಜೇಕರ್ ಅಲಿ 45 ರನ್ ಗಳಿಸಿ ತಂಡ 200 ರನ್‌ಗಳ ಮೊತ್ತ ದಾಟಲು ಕಾರಣರಾದರು.
ಮೊದಲ ವಿಕೆಟ್‌ಗೆ ತಂಜಿದ್ ಹುಸೇನ್ (24, 24ಎ) ಮತ್ತು ಶಾಂತೊ ಎಂಟು ಓವರುಗಳಲ್ಲಿ 45 ರನ್ ಸೇರಿಸಿದ್ದರು. ಆದರೆ 34 ವರ್ಷ ವಯಸ್ಸಿನ ಬ್ರೇಸ್‌ವೆಲ್ ಮೊದಲ ಓವರಿನಲ್ಲೇ ಈ ಜೊತೆಯಾಟ ಮುರಿದರು. ತಂಜಿದ್ ಮಿಡ್‌ವಿಕೆಟ್‌ನಲ್ಲಿ ಕೇನ್ ವಿಲಿಯಮ್ಸ್ ಅವರಿಗೆ ಕ್ಯಾಚಿತ್ತರು.
ವೇಗದ ಬೌಲರ್ ವಿಲ್ ಓ ರೋರ್ಕ್ ನಂತರ ಮೆಹಿದಿ ಹಸನ್ ಮಿರಾಜ್ (13) ಅವರ ವಿಕೆಟ್ ಪಡೆದರು. ಮಧ್ಯಮ ಕ್ರಮಾಂಕದ ಆಟಗಾರರು ಬ್ರೇಸ್‌ವೆಲ್ ಅವರ ಪರಿಣಾಮಕಾರಿ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದರು. ಬ್ರೇಸ್‌ವೆಲ್ ಮತ್ತೆ ಮೂರು ವಿಕೆಟ್‌ಗಳನ್ನು (ತೌಹಿದ್ ಹೃದಯ್, ಮುಷ್ಫಿಕುರ್ ರಹೀಂ ಮತ್ತು ಮಹಮದುಲ್ಲಾ) ಪಡೆದು ಬಾಂಗ್ಲಾ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಸ್ಕೋರುಗಳು
ಬಾಂಗ್ಲಾದೇಶ: 50 ಓವರುಗಳಲ್ಲಿ 9 ವಿಕೆಟ್‌ಗೆ 236 (ತಂಜಿದ್ ಹಸನ್ 24, ನಜ್ಮುಲ್ ಹುಸೇನ್ ಶಾಂತೊ 77, ಜೇಕರ್ ಅಲಿ 45, ರಿಷದ್ ಹುಸೇನ್ 26; ಬ್ರೇಸ್‌ವೆಲ್ 26ಕ್ಕೆ4, ವಿಲ್ ಓ ರೋರ್ಕ್ 48ಕ್ಕೆ2)
ನ್ಯೂಜಿಲೆಂಡ್: 46.1 ಓವರುಗಳಲ್ಲಿ 5 ವಿಕೆಟ್‌ಗೆ 240 (ಡೆವಾನ್ ಕಾನ್ವೆ 30, ರಚಿನ್ ರವೀಂದ್ರ 112, ಟಾಮ್ ಲೇಥಮ್ 55, ಗ್ಲೆನ್ ಫಿಲಿಪ್ಸ್ ಔಟಾಗದೇ 21)
ಪಂದ್ಯದ ಆಟಗಾರ: ರಚಿನ್ ರವೀಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.