ADVERTISEMENT

Bangla Unrest: ಮಹಿಳೆಯರ T20 ವಿಶ್ವಕಪ್ ಆಯೋಜನೆಗೆ ಸೇನೆಯ ನೆರವು ಕೋರಿದ ಬಿಸಿಬಿ

ಪಿಟಿಐ
Published 10 ಆಗಸ್ಟ್ 2024, 9:37 IST
Last Updated 10 ಆಗಸ್ಟ್ 2024, 9:37 IST
<div class="paragraphs"><p>ಬಾಂಗ್ಲಾದೇಶ ಕ್ರಿಕೆಟ್ ತಂಡ</p></div>

ಬಾಂಗ್ಲಾದೇಶ ಕ್ರಿಕೆಟ್ ತಂಡ

   

ಪಿಟಿಐ ಚಿತ್ರ

ಢಾಕಾ: ಮಹಿಳೆಯರ ಟಿ20 ಕ್ರಿಕೆಟ್‌ ವಿಶ್ವಕಪ್‌ ಆಯೋಜಿಸಲು ಭದ್ರತೆ ಒದಗಿಸುವಂತೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು (ಬಿಸಿಬಿ) ಸೇನಾ ಮುಖ್ಯಸ್ಥರಿಗೆ ಪತ್ರ ಬರೆದಿದೆ.

ADVERTISEMENT

ಅರಾಜಕತೆ ಸೃಷ್ಟಿಯಾಗಿರುವ ಬಾಂಗ್ಲಾದೇಶದಲ್ಲಿ ಅಕ್ಟೋಬರ್‌ 3ರಿಂದ 20ರವರೆಗೆ ವಿಶ್ವಕಪ್ ನಿಗದಿಯಾಗಿದೆ. ಸಿಲ್ಹೆಟ್‌ ಮತ್ತು ಮೀರ್‌ಪುರದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್‌ 27ರಂದು ಆರಂಭವಾಗಲಿವೆ.

ಕ್ರಿಕ್‌ಬಜ್‌ ವೆಬ್‌ಸೈಟ್‌ ಪ್ರಕಾರ, ಬಾಂಗ್ಲಾದೇಶ ಸೇನಾ ಪಡೆ ಮುಖ್ಯಸ್ಥ ಜನರಲ್‌ ವಕರ್ ಉಜ್‌–ಜಮಾನ್‌ ಅವರಿಗೆ ಬಿಸಿಬಿ ಪತ್ರ ಬರೆದಿದೆ.

ವಿವಾದಿತ ಮೀಸಲಾತಿ ವಿರೋಧಿಸಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದುವರೆಗೆ 400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಹುದ್ದೆಗೆ ಕಳೆದ ವಾರ ರಾಜೀನಾಮೆ ನೀಡಿ ಪಲಾಯನ ಮಾಡಿರುವ ಶೇಖ್‌ ಹಸೀನಾ, ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಇದೀಗ, ಮೊಹಮ್ಮದ್‌ ಯೂನಸ್‌ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಆದಾಗ್ಯೂ, ಪ್ರತಿಭಟನೆಯ ಕಿಚ್ಚು ತಣ್ಣಗಾಗಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದೆ. ನಿಗದಿತ ಸಮಯದಲ್ಲೇ ಟೂರ್ನಿ ನಡೆಸಲು ಭಾರತ, ಯುಎಇ ಹಾಗೂ ಶ್ರೀಲಂಕಾದತ್ತ ನೋಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಶೇಖ್‌ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಪ್ರತಿಭಟನಾಕಾರರು ಢಾಕಾದಲ್ಲಿ ಸಂಭ್ರಮಿಸಿದರು.

ಬಿಸಿಬಿ ಅಧ್ಯಕ್ಷ ನಜ್ಮುಲ್‌ ಹಸನ್‌ ಪಾಪನ್‌ ಹಾಗೂ ಮಂಡಳಿಯ ಕೆಲವು ನಿರ್ದೇಶಕರೂ ದೇಶ ತೊರೆದಿದ್ದಾರೆ. ಅವರೆಲ್ಲ, ಹಸೀನಾ ನೇತೃತ್ವದ ಅವಾಮಿ ಲೀಗ್‌ ಬೆಂಬಲದೊಂದಿಗೆ ಅಧಿಕಾರಕ್ಕೇರಿದ್ದರು ಎನ್ನಲಾಗಿದೆ.

ಬಿಸಿಬಿಯ ತೀರ್ಪುಗಾರರ ಸಮಿತಿ ಮುಖ್ಯಸ್ಥ ಇಫ್ತಿಖರ್‌ ಅಹ್ಮದ್‌ ಮಿಥು ಅವರು, 'ಟೂರ್ನಿಯ ಆಯೋಜನೆಗೆ ಪ್ರಯತ್ನಿಸುತ್ತಿದ್ದೇವೆ' ಎಂದಿದ್ದಾರೆ.

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಮ್ಮಲ್ಲಿ ಹೆಚ್ಚಿನವರು ದೇಶದಲ್ಲಿ ಉಳಿದಿಲ್ಲ. ಮಹಿಳಾ ಟಿ20 ವಿಶ್ವಕಪ್‌ ಆರಂಭಕ್ಕೆ ಇನ್ನು ಎರಡೇ ತಿಂಗಳು ಬಾಕಿ ಇದ್ದು, ಭದ್ರತೆ ನೀಡುವಂತೆ ಕೋರಿ ಸೇನಾ ಮುಖ್ಯಸ್ಥರಿಗೆ ಗುರುವಾರ (ಆಗಸ್ಟ್‌ 8ರಂದು) ಪತ್ರ ಬರೆದಿದ್ದೇವೆ' ಎಂದು ತಿಳಿಸಿದ್ದಾರೆ.

'ಪರಿಸ್ಥಿತಿ ಕುರಿತು ಐಸಿಸಿಯು ಎರಡು ದಿನಗಳ ಹಿಂದೆ ನಮ್ಮನ್ನು ಸಂಪರ್ಕಿಸಿತ್ತು. ಶೀಘ್ರವೇ ಉತ್ತರ ನೀಡುವುದಾಗಿ ಪ್ರತಿಕ್ರಿಯಿಸಿದ್ದೇವೆ. ಮಧ್ಯಂತರ ಸರ್ಕಾರ ರಚನೆಯಾಗಿದೆಯಾದರೂ, ನಾವು ಐಸಿಸಿಗೆ ಭದ್ರತೆಯ ಬಗ್ಗೆ ಖಾತ್ರಿ ನೀಡಬೇಕಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಏಜೆನ್ಸಿಯಲ್ಲದೆ ಮಂಡಳಿಯಾಗಲೀ, ಇತರರಾಗಲೀ ರಕ್ಷಣೆ ಒದಗಿಸಲು ಸಾಧ್ಯವಿಲ್ಲ. ಹಾಗಾಗಿ, ಸೇನೆಗೆ ಪತ್ರ ಬರೆದಿದ್ದೇವೆ. ಪ್ರತಿಕ್ರಿಯೆ ಬಂದ ಬಳಿಕ ಐಸಿಸಿಗೆ ಮಾಹಿತಿ ನೀಡುತ್ತೇವೆ' ಎಂದೂ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.