ADVERTISEMENT

ಬಾಂಗ್ಲಾಕ್ಕೆ ಅಫ್ಗನ್ ಸವಾಲು

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 18:30 IST
Last Updated 23 ಜೂನ್ 2019, 18:30 IST
ಬಾಂಗ್ಲಾದೇಶ ತಂಡದ ಆಟಗಾರರ ತಾಲೀಮು –ಎಎಫ್‌ಪಿ ಚಿತ್ರ
ಬಾಂಗ್ಲಾದೇಶ ತಂಡದ ಆಟಗಾರರ ತಾಲೀಮು –ಎಎಫ್‌ಪಿ ಚಿತ್ರ   

ಸೌತಾಂಪ್ಟನ್ (ಪಿಟಿಐ): ಸೆಮಿಫೈನಲ್ ಪ್ರವೇಶಿಸುವ ರೇಸ್‌ನಲ್ಲಿ ಉಳಿಯುವ ಕನಸು ಕಾಣುತ್ತಿರುವ ಬಾಂಗ್ಲಾದೇಶ ತಂಡವು ಸೋಮವಾರ ಅಫ್ಗಾನಿಸ್ತಾನ ತಂಡದ ಸವಾಲು ಎದುರಿಸಲಿದೆ.

ಶುಕ್ರವಾರ ಇಂಗ್ಲೆಂಡ್ ತಂಡವು ಶ್ರೀಲಂಕಾದ ಎದುರು ಸೋತಿರುವುದರಿಂದ ಬಾಂಗ್ಗಾದೇಶಕ್ಕೆ ಸ್ಪರ್ಧೆಯಲ್ಲಿ ಉಳಿಯುವ ಅವಕಾಶ ಹೆಚ್ಚಿದೆ. ಆರು ಪಂದ್ಯಗಳನ್ನು ಆಡಿರುವ ಬಾಂಗ್ಲಾ ತಂಡವು ಎರಡರಲ್ಲಿ ಗೆದ್ದುಮ ಮೂರರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರಿಂದಾಗಿ ಐದು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಲಂಕಾ ತಂಡವು ಆರು ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನದಲ್ಲಿದೆ. ಶಕೀಬ್ ಅಲ್ ಹಸನ್, ಮುಷ್ಫಿಕ್ ಉರ್ ರೆಹಮಾನ್ ಅವರು ಭರ್ಜರಿ ಫಾರ್ಮ್‌ನಲ್ಲಿರುವುದರಿಂದ ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆದ್ದು ಮುನ್ನಡೆ ಸಾಧಿಸುವ ಉತ್ಸಾಹದಲ್ಲಿ ತಂಡವಿದೆ.

ಶನಿವಾರ ರಾತ್ರಿ ಭಾರತದ ಎದುರು ದಿಟ್ಟ ಹೋರಾಟದ ಮೂಲಕ ಕ್ರಿಕೆಟ್‌ಪ್ರೇಮಿಗಳ ಮನಗೆದ್ದಿದ್ದ ಅಫ್ಗಾನಿಸ್ತಾನ ತಂಡವನ್ನು ಮಣಿಸುವುದು ಬಾಂಗ್ಲಾ ತಂಡಕ್ಕೆ ಸುಲಭವೇನಲ್ಲ. ಆದರೆ, ಶಿಸ್ತುಬದ್ಧ ಯೋಜನೆಯೊಂದಿಗೆ ಕಣಕ್ಕಿಳಿಯುವ ಅಗತ್ಯವಂತೂ ಇದೆ. ತನ್ನ ಪಾಲಿನ ಆರೂ ಪಂದ್ಯಗಳನ್ನು ಸೋತಿರುವ ಅಫ್ಗನ್ ಪಡೆಗೆ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಒಂದಾದರೂ ಗೆಲುವು ಸಾಧಿಸಿ ಬೀಗುವ ಛಲವಂತೂ ಇದೆ.

ADVERTISEMENT

ಅಫ್ಗನ್ ನಾಯಕ ಗುಲ್ಬದೀನ್ ನೈಬ್, ಅಸ್ಗರ್ ಅಫ್ಗನ್, ಆಲ್‌ರೌಂಡರ್ ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಅವರು ಕಠಿಣ ಸವಾಲೊಡ್ಡುವ ಸಮರ್ಥರಾಗಿದ್ದಾರೆ. ಬಾಂಗ್ಲಾದ ಆಟಗಾರರು ಈ ಆಟಗಾರನ್ನು ಕಟ್ಟಿಹಾಕದಿದ್ದರೆ ದುಬಾರಿ ದಂಡ ತೆರವು ಸಾಧ್ಯತೆಯಂತೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.