ADVERTISEMENT

ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯ: ಭಾರತ ಪ್ರವಾಸ ಹಾದಿ ಸುಗಮ

ಪಿಟಿಐ
Published 24 ಅಕ್ಟೋಬರ್ 2019, 11:26 IST
Last Updated 24 ಅಕ್ಟೋಬರ್ 2019, 11:26 IST
   

ಢಾಕಾ:ಆಲ್‌ರೌಂಡರ್ ಶಕೀಬ್‌ ಅಲ್‌ ಹಸನ್‌ ನೇತೃತ್ವದಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರು ನಡೆಸುತ್ತಿದ್ದ ಮುಷ್ಕರ ಗುರುವಾರ ಅಂತ್ಯಗೊಂಡಿದೆ. ಸಂಭಾವನೆ ಹೆಚ್ಚಳ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಅಲ್ಲಿನ ಕ್ರಿಕೆಟ್‌ ಮಂಡಳಿ ಭರವಸೆ ನೀಡಿದ ಬಳಿಕಆಟಗಾರರು ಈ ನಿರ್ಧಾರ ಕೈಗೊಂಡಿದ್ದಾರೆ.

ಇದರಿಂದಾಗಿ ಬಾಂಗ್ಲಾದೇಶ ತಂಡದ ಭಾರತ ಪ್ರವಾಸದ ಹಾದಿ ಸುಗಮಗೊಂಡಿದೆ. ಬುಧವಾರ ಮಧ್ಯರಾತ್ರಿಯವರೆಗೆಬೆಳೆದ ಎರಡು ಗಂಟೆಗಳ ಮಾತುಕತೆಯ ನಂತರ ಆಟಗಾರರು ಮತ್ತು ಮಂಡಳಿಯ ನಡುವೆ ತಲೆದೋರಿದ್ದ ಬಿಕ್ಕಟ್ಟು ಅಂತ್ಯಕಂಡಿದೆ. ಮೂರು ದಿನಗಳ ಹಿಂದೆ ಮುಷ್ಕರ ಆರಂಭವಾಗಿತ್ತು.

ಆ ತಂಡದ ಭಾರತ ಪ್ರವಾಸ ನಿಗದಿಯಂತೆ ನಡೆಯಲಿದೆ. ನವೆಂಬರ್‌ 3ರಿಂದ ನಡೆಯುವ ಪ್ರವಾಸದ ವೇಳೆ ಮೂರು ಟಿ–20 ಪಂದ್ಯಗಳ ಮತ್ತು ಎರಡು ಟೆಸ್ಟ್‌ ಪಂದ್ಯಗಳು ನಡೆಯಲಿವೆ.ಆಟಗಾರರು ಶುಕ್ರವಾರ ಸಿದ್ಧತಾ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ.

‘ಪಪೋನ್‌ ಭಾಯ್‌ (ಬಿಸಿಬಿ ಮುಖ್ಯಸ್ಥ ನಜ್ಮುಲ್‌ ಹಸನ್‌) ಹೇಳಿದ ರೀತಿ ಮಾತುಕತೆ ಫಲಪ್ರದವಾಗಿದೆ. ಅತಿ ಶೀಘ್ರ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಅವರು ಮತ್ತು ಉಳಿದ ನಿರ್ದೇಶಕರು ಭರವಸೆ ನೀಡಿದ್ದಾರೆ. ಈ ಆಶ್ವಾಸನೆಯ ಮೇಲೆ ನಾವು ಕ್ರಿಕೆಟ್‌ ಲೀಗ್‌ ಆಡಲಿದ್ದೇವೆ ಮತ್ತು ಸಿದ್ಧತಾ ಶಿಬಿರಕ್ಕೆ ಹಾಜರಾಗುತ್ತೇವೆ’ ಎಂದು ಶಕೀಬ್‌ ಹೇಳಿರುವುದನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ.

ಶಕೀಬ್‌ ಅವರ ಜೊತೆ ಹಿರಿಯ ಆಟಗಾರರಾದ ಮುಷ್ಫಿಕುರ್‌ ರಹೀಮ್‌, ಮಹಮುದುಲ್ಲಾ ಮತ್ತು ತಮೀಮ್‌ ಇಕ್ಬಾಲ್‌ ಅವರು ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ಮಂಡಿಸಿದ್ದ 11 ಬೇಡಿಕೆಗಳ ಜೊತೆ ಇನ್ನೂ ಎರಡು ಬೇಡಿಕೆಗಳನ್ನು ಆಟಗಾರರು ಮುಂದಿಟ್ಟಿದ್ದರು. ಬಿಸಿಬಿ ಆದಾಯದಲ್ಲಿ ಕೆಲ ಪ್ರಮಾಣ ನೀಡಬೇಕು ಮತ್ತು ಮಹಿಳಾ ಕ್ರಿಕೆಟಿಗರಿಗೂ ಸಮಾನ ಸಂಭಾವನೆ ನೀಡಬೇಕು ಎಂಬುದು ಹೊಸ ಬೇಡಿಕೆಗಳಾಗಿದ್ದವು. ಇದರ ಬಗ್ಗೆ ನಜ್ಮುಲ್‌ ಹಸನ್‌ ಖಚಿತ ಭರವಸೆ ನೀಡಲಿಲ್ಲ. ಆದರೆ ಮೊದಲ 11 ಬೇಡಿಕೆಗಳನ್ನು ಮಾತ್ರ ಈಡೇರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಫ್ರಾಂಚೈಸ್‌ ಮಾದರಿಯಲ್ಲಿ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್ (ಬಿಪಿಎಲ್‌) ನಡೆಸಬೇಕು, ಕೇಂದ್ರ ಗುತ್ತಿಗೆ ಸಂಭಾವನೆ ಹೆಚ್ಚಿಸಬೇಕು ಮತ್ತು ಇದು ಹೆಚ್ಚಿನ ಆಟಗಾರರನ್ನು ಒಳಗೊಳ್ಳಬೇಕು, ಪ್ರಥಮ ದರ್ಜೆ ಆಟಗಾರರ ಪಂದ್ಯ ಶುಲ್ಕ ಏರಿಸಬೇಕು ಮತ್ತು ಆಟಗಾರರ ವೇದಿಕೆಯನ್ನು ಹಿತಾಸಕ್ತಿ ಸಂಘರ್ಷ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.