ADVERTISEMENT

ಕ್ರಿಕೆಟ್‌ಗೆ ವಿದಾಯ ಹೇಳಲು ರಾಸ್‌ ಟೇಲರ್ ನಿರ್ಧಾರ

ಬಂಗ್ಲಾದೇಶ ಎದುರಿನ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯದಾಗಿ ಕಣಕ್ಕೆ ಇಳಿಯಲಿರುವ ಬ್ಯಾಟರ್‌

ಏಜೆನ್ಸೀಸ್
Published 30 ಡಿಸೆಂಬರ್ 2021, 14:15 IST
Last Updated 30 ಡಿಸೆಂಬರ್ 2021, 14:15 IST
ರಾಸ್ ಟೇಲರ್ –ಎಪಿ/ಪಿಟಿಐ ಚಿತ್ರ
ರಾಸ್ ಟೇಲರ್ –ಎಪಿ/ಪಿಟಿಐ ಚಿತ್ರ   

ವೆಲಿಂಗ್ಟನ್‌: ನ್ಯೂಜಿಲೆಂಡ್‌ ಕ್ರಿಕೆಟ್ ತಂಡದ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ರಾಸ್ ಟೇಲರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅವರು ದೇಶದ ಪರ ಟೆಸ್ಟ್‌ನಲ್ಲಿ ಕೊನೆಯದಾಗಿ ಕಣಕ್ಕೆ ಇಳಿಯಲಿದ್ದಾರೆ. ಸರಣಿಯ ಮೊದಲ ಪಂದ್ಯಮೌಂಟ್ ಮಾಂಗನೂಯಿ ಬೇ ಓವಲ್‌ನಲ್ಲಿ ಜನವರಿ ಒಂದರಿಂದ ನಡೆಯಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಈಚೆಗೆ ಭಾರತ ವಿರುದ್ಧ ನಡೆದಿದ್ದ ಸರಣಿಯಲ್ಲಿ ಸೋತು ನಿರಾಸೆಗೊಂಡಿರುವ ನ್ಯೂಜಿಲೆಂಡ್‌ಗೆ ಬಾಂಗ್ಲಾ ಎದುರಿನ ಸರಣಿ ಪುನಶ್ಚೇತನಕ್ಕೆ ಹಾದಿಯಾಗಲಿದೆ. ಈ ಸರಣಿಯ ನಂತರ ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅವರು ಆಡಲಿದ್ದಾರೆ. ಮಾರ್ಚ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಟೇಲರ್‌ ವೃತ್ತಿಜೀವನದಲ್ಲಿ ಕೊನೆಯದಾಗಿ ಕ್ರೀಸ್‌ಗೆ ಇಳಿಯಲಿದ್ದಾರೆ. ಆ ಸರಣಿಯ ಕೊನೆಯ ಪಂದ್ಯ ಅವರ ತವರು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ADVERTISEMENT

ಬಾಂಗ್ಲಾದೇಶ ಎದುರಿನ ಎರಡೂ ಟೆಸ್ಟ್‌ಗಳಲ್ಲಿ ಆಡಿದರೆ ರಾಸ್ ಟೇಲರ್ 112 ಪಂದ್ಯ ಆಡಿದಂತಾಗುತ್ತದೆ. ನ್ಯೂಜಿಲೆಂಡ್ ಪರ ಅತಿಹೆಚ್ಚು, 112 ಪಂದ್ಯಗಳನ್ನು ಆಡಿದ ಡ್ಯಾನಿಯಲ್ ವೆಟೋರಿ ಅವರ ಸಾಧನೆ ಸರಿಗಟ್ಟಲು ಆ ಮೂಲಕ ಅವರಿಗೆ ಅವಕಾಶ ಸಿಗಲಿದೆ.

ಗರಿಷ್ಠ ರನ್‌ ಗಳಿಸಿದ ಆಟಗಾರ

ನ್ಯೂಜಿಲೆಂಡ್‌ ಪರವಾಗಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಟೇಲರ್ ಅವರದು. ಟೆಸ್ಟ್‌ನಲ್ಲಿ 19 ಶತಕಗಳೊಂದಿಗೆ7,584 ರನ್ ಕಲೆ ಹಾಕಿರುವ ಅವರು ಏಕದಿನ ಕ್ರಿಕೆಟ್‌ನಲ್ಲಿ 8,581 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 21 ಶತಕಗಳನ್ನು ಗಳಿಸಿದ್ದು ನ್ಯೂಜಿಲೆಂಡ್‌ನ ದಾಖಲೆಯಾಗಿದೆ. ಟೆಸ್ಟ್‌ನಲ್ಲಿ ಅತಿಹೆಚ್ಚು ಶತಕ ಗಳಿಸಿದ ದೇಶದ ಎರಡನೇ ಆಟಗಾರ ಆಗಿದ್ದಾರೆ.

2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಟೇಲರ್ 2006ರಲ್ಲಿ ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 102 ಟ್ವೆಂಟಿ20 ಪಂದ್ಯಗಳನ್ನು ಆಡಿದ್ದು ನ್ಯೂಜಿಲೆಂಡ್ ಪರವಾಗಿ 100ಕ್ಕೂ ಹೆಚ್ಚು ಪಂದ್ಯ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.