ADVERTISEMENT

ಇಂದೋರ್ ಟೆಸ್ಟ್: ಬಾಂಗ್ಲಾ ತಂಡಕ್ಕೆ ಶಮಿ ಶಾಕ್ !

ಭಾರತಕ್ಕೆ ಮೊದಲ ದಿನದ ಗೌರವ; ಮಿಂಚಿದ ಅಶ್ವಿನ್, ಪೂಜಾರ, ಮಯಂಕ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 20:09 IST
Last Updated 14 ನವೆಂಬರ್ 2019, 20:09 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ಇಂದೋರ್: ಮೊಹಮ್ಮದ್ ಶಮಿಯ ರಿವರ್ಸ್ ಸ್ವಿಂಗ್ ಮತ್ತು ಆರ್‌.ಅಶ್ವಿನ್ ಆಫ್‌ ಸ್ಪಿನ್ ದಾಳಿಗೆ ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಪಡೆ ತರಗೆಲೆಯಂತೆ ಉದುರಿತು.

ಹೋಳ್ಕರ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 150 ರನ್‌ಗಳ ಅಲ್ಪಮೊತ್ತಕ್ಕೆ ಬಾಂಗ್ಲಾ ತಂಡವು ಆಲೌಟ್ ಆಯಿತು. ಇನಿಂಗ್ಸ್‌ ಆರಂಭಿಸಿದ ಭಾರತ ತಂಡವು ದಿನದಾಟದ ಕೊನೆಗೆ 26 ಓವರ್‌ಗಳಲ್ಲಿ 1 ವಿಕೆಟ್‌ಗೆ 86 ರನ್ ಗಳಿಸಿತು. ಮಯಂಕ್ ಅಗರವಾಲ್ (ಬ್ಯಾಟಿಂಗ್ 37; 81ಎಸೆತ, 6 ಬೌಂಡರಿ) ಮತ್ತು ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 43; 61ಎಸೆತ, 7ಬೌಂಡರಿ) ಕ್ರೀಸ್‌ನಲ್ಲಿದ್ದಾರೆ.

ಟಾಸ್ ಗೆದ್ದ ಬಾಂಗ್ಲಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರನ್‌ ಹೊಳೆಯೇ ಹರಿದ ಇತಿಹಾಸವಿರುವ ಇಲ್ಲಿಯ ಪಿಚ್‌ ಬಗ್ಗೆ ತಿಳಿದಿದ್ದ ಬಾಂಗ್ಲಾ ನಾಯಕ ಮೊಮಿನುಲ್ ಹಕ್ ಈ ನಿರ್ಧಾರ ತೆಗೆದುಕೊಂಡರು. ಆದರೆ, ಅದಕ್ಕೆ ತಕ್ಕಂತೆ ಬ್ಯಾಟ್ಸ್‌ಮನ್‌ಗಳು ಆಡಲಿಲ್ಲ. ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಬೆಳಿಗ್ಗೆಯ ವಾತಾವರಣದಲ್ಲಿ ಬಾಂಗ್ಲಾದ ಆರಂಭಿಕ ಜೋಡಿಗೆ ಪೆವಿಲಿಯನ್ ದಾರಿ ತೋರಿಸಿದರು. ತಂಡವು ಏಳು ಓವರ್‌ಗಳಲ್ಲಿ ಕೇವಲ 12 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಮೊಮಿನುಲ್ ಹಕ್ ಮತ್ತು ಮೊಹಮ್ಮದ್ ಮಿಥುನ್ (13) ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಈ ಜೊತೆಯಾಟ ಬೆಳೆಯದಂತೆ ಶಮಿ ತಡೆದರು. ಮಿಥುನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ADVERTISEMENT

ಇನ್ನೊಂದೆಡೆ ಆಫ್‌ಸ್ಪಿನ್ನರ್ ಅಶ್ವಿನ್ ಅವರು ಶಮಿಗೆ ಉತ್ತಮ ಬೆಂಬಲ ಕೊಟ್ಟರು. ಆದರೆ ಫೀಲ್ಡಿಂಗ್‌ನಲ್ಲಿ ಆದ ಲೋಪಗಳಿಂದಾಗಿ ಮಷ್ಫಿಕುರ್ ರಹೀಮ್ (43; 105ಎ, 4ಬೌಂ, 1ಸಿ) ರನ್‌ ಗಳಿಸುವ ಧೈರ್ಯ ಮಾಡಿದರು. ಉಮೇಶ್ ಯಾದವ್ ಹಾಕಿದ 24ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ, ಅಶ್ವಿನ್ ಹಾಕಿದ 28ನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು 40ನೇ ಓವರ್‌ನಲ್ಲಿ ಸಹಾ ಕ್ಯಾಚ್ ಬಿಟ್ಟರು.

ಊಟದ ವಿರಾಮದ ನಂತರದ ಕೆಲ ಹೊತ್ತಿ ನಲ್ಲಿಯೇ ಮೊಮಿನುಲ್ ಹಕ್ ವಿಕೆಟ್ ಕಬಳಿಸಿದ ಅಶ್ವಿನ್ ಮಿಂಚಿದರು. ತಮ್ಮ ಎರಡನೇ ಸ್ಪೆಲ್ ಆರಂಭಿಸಿದ ಶಮಿಯ ರಿವರ್ಸ್‌ ಸ್ವಿಂಗ್ ಎಸೆತಕ್ಕೆ ಮಹಮುದುಲ್ಲಾ (10 ರನ್) ಅವಕ್ಕಾದರು. ಸ್ವಲ್ಪ ಹೊತ್ತಿನ ನಂತರ ಮುಷ್ಫಿಕುರ್‌ಗೂ ಶಮಿ ಶಾಕ್ ಕೊಟ್ಟರು. ಮೆಹದಿ ಹಸನ್‌ಗೆ ಖಾತೆಯನ್ನೂ ತೆರೆಯಲು ಬಿಡದ ಶಮಿ ಕೇಕೆ ಹಾಕಿದರು.

ಸಹ ಆಟಗಾರರ ಜೊತೆ ಸಂಭ್ರಮಿಸಿದ ಇಶಾಂತ್‌ ಶರ್ಮಾ (ಮಧ್ಯ) –ಪಿಟಿಐ ಚಿತ್ರ

ಪೂಜಾರ ವಿಭಿನ್ನ ಆಟ: ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಮಧ್ಯಮವೇಗಿ ಅಬು ಜಯೆದ್ ಆಫ್‌ಸ್ಟಂಪಿನಿಂದ ಹೊರ ಹಾಕಿದ್ದ ಎಸೆತವನ್ನು ಕಟ್ ಮಾಡುವ ಪ್ರಯತ್ನದಲ್ಲಿ ರೋಹಿತ್ ಶರ್ಮಾ ಅವರು ವಿಕೆಟ್‌ಕೀಪರ್ ಲಿಟನ್ ದಾಸ್‌ಗೆ ಸುಲಭ ಕ್ಯಾಚಿತ್ತರು.

ಆಗ ಕ್ರೀಸ್‌ಗೆ ಬಂದ ಪೂಜಾರ ತಮ್ಮ ಶೈಲಿಗಿಂತ ಭಿನ್ನವಾದ ಆಟವಾಡಿದರು. ಬೀಸಾಟದ ಝಲಕ್ ತೋರಿದರು. ತೈಜುಲ್ ಇಸ್ಲಾಂ ಹಾಕಿದ 15ನೇ ಓವರ್‌ನಲ್ಲಿ ಮೂರು ಬೌಂಡರಿಗಳನ್ನು ಚಚ್ಚಿದರು. ನಂತರದ ಓವರ್‌ ಬೌಲಿಂಗ್ ಮಾಡಿದ ಇಬಾದತ್ ಹುಸೇನ್‌ಗೂ ಬಿಸಿ ಮುಟ್ಟಿಸಿದರು. ಸತತ ಎರಡು ಬೌಂಡರಿ ಗಳಿಸಿದರು.

ಇನ್ನೊಂದು ಬದಿಯಲ್ಲಿದ್ದ ಮಯಂಕ್ ಅಗರವಾಲ್ ಅವರಿಗಿಂತಲೂ ಹೆಚ್ಚು ರನ್‌ ಗಳಿಸಿದರು. ಮಯಂಕ್ 16 ರನ್ ಗಳಿಸಿದ್ದಾಗ, ಪೂಜಾರ ಖಾತೆಯಲ್ಲಿ 34 ರನ್‌ಗಳಿದ್ದವು. ಇದರ ನಂತರ ಆತ್ಮವಿಶ್ವಾಸದಿಂದ ಆಡಿದ ಮಯಂಕ್‌ ಕೂಡ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಿದರು. ಇದರಿಂದಾಗಿ ಬಾಂಗ್ಲಾ ಬೌಲರ್‌ ಮತ್ತು ಫೀಲ್ಡರ್‌ಗಳ ಮೇಲೆ ಒತ್ತಡ ಹೆಚ್ಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.