ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಆಯೋಜನೆ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಐಪಿಎಲ್ ಫ್ರಾಂಚೈಸ್ ಮಾಲೀಕರು ಶನಿವಾರ ಚರ್ಚಿಸಲಿದ್ದಾರೆ. ವರ್ಚುವಲ್ ಆಗಿ ಸಭೆ ನಡೆಯಲಿದೆ ಎಂದು ಮಂಡಳಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ತಿಂಗಳ 12 ಮತ್ತು 13ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದ್ದು ಅದರ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.
ಭಾರತದಲ್ಲಿ ಟೂರ್ನಿಯನ್ನು ಆಯೋಜಿಸುವುದೇ ಬಿಸಿಸಿಐನ ಮೊದಲ ಆದ್ಯತೆ. ಆದರೆ ಕೋವಿಡ್ ಇನ್ನಷ್ಟು ಹೆಚ್ಚಳವಾದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದರ ಕುರಿತು ಮಾತುಕತೆ ನಡೆಯಲಿದೆ. 2020ರ ಆವೃತ್ತಿಯ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಕಳೆದ ವರ್ಷ ಭಾರತದಲ್ಲಿ ಪಂದ್ಯಗಳು ನಡೆದಿದ್ದರೂ ಮಧ್ಯದಲ್ಲಿ ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣ ಸ್ಥಗಿತಗೊಳಿಸಿ ನಂತರ ಯುಎಇಗೆ ಸ್ಥಳಾಂತರಿಸಲಾಗಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳು ನಡೆಯುತ್ತವೆ.
ಕೆ.ಎಲ್.ರಾಹುಲ್‌ಗೆ ಗರಿಷ್ಠ ಮೊತ್ತ
ಕೆ.ಎಲ್.ರಾಹುಲ್ ಅವರನ್ನು ₹ 17 ಕೋಟಿ ಮೊತ್ತಕ್ಕೆ ಲಖನೌ ಫ್ರಾಂಚೈಸ್ ಖರೀದಿಸಿದ್ದು ಈ ಮೂಲಕ ಲೀಗ್‌ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ ಎಂದು ಕ್ರಿಕ್ ಇನ್ಫೊ ವೆಬ್‌ಸೈಟ್ ವರದಿ ಮಾಡಿದೆ.
ಕ್ರೀಡಾ ಚಾನಲ್‌ವೊದರಲ್ಲಿ ಮಾತನಾಡಿದ ಲಖನೌ ಫ್ರಾಂಚೈಸ್ ಮಾಲೀಕ ಆರ್.ಪಿ.ಸಂಜೀವ್ ಗೋಯೆಂಕಾ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಅವರನ್ನು ₹ 9.2 ಕೋಟಿ ಮೊತ್ತಕ್ಕೆ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಅವರನ್ನು ₹ 4 ಕೋಟಿ ಮೊತ್ತಕ್ಕೆ ಖರೀದಿಸಿರುವುದಾಗಿ ತಿಳಿಸಿದ್ದಾರೆಂದು ವೆಬ್‌ಸೈಟ್ ವಿವರಿಸಿದೆ.
ಅಹಮದಾಬಾದ್‌ಗೆ ಹಾರ್ದಿಕ್ ನಾಯಕ?
ಅಹಮದಾಬಾದ್ ಫ್ರಾಂಚೈಸ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ ಎಂದು ಕ್ರೀಡಾ ವೆಬ್‌ಸೈಟ್‌ಗಳು ವರದಿ ಮಾಡಿವೆ. ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಕೂಡ ಈ ಫ್ರಾಂಚೈಸ್ ಖರೀದಿಸಿದೆ. ಹಾರ್ದಿಕ್ ಮತ್ತು ರಶೀದ್ ಅವರನ್ನು ತಲಾ ₹ 15 ಕೋಟಿ ಮೊತ್ತಕ್ಕೆ ಖರೀದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.