ADVERTISEMENT

ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಗಳಿಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಪಿಟಿಐ
Published 15 ಫೆಬ್ರುವರಿ 2022, 14:15 IST
Last Updated 15 ಫೆಬ್ರುವರಿ 2022, 14:15 IST
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅಭ್ಯಾಸದಲ್ಲಿ ತೊಡಗಿರುವ ಭಾರತ ತಂಡ: ಪಿಟಿಐ ಚಿತ್ರ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅಭ್ಯಾಸದಲ್ಲಿ ತೊಡಗಿರುವ ಭಾರತ ತಂಡ: ಪಿಟಿಐ ಚಿತ್ರ   

ಮುಂಬೈ: ಫೆಬ್ರವರಿ 25ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಟೆಸ್ಟ್ ಸರಣಿಗೂ ಮುನ್ನವೇ ಟಿ–20ಸರಣಿ ಘೋಷಣೆ ಮಾಡಲಾಗಿದೆ.

ಈ ಹಿಂದೆ ಟಿ–20ಸರಣಿಗೂ ಮುನ್ನ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು.

‘ಭಾರತ ವಿರುದ್ಧ ಶ್ರೀಲಂಕಾ ತಂಡವು ಮೊದಲು 3 ಪಂದ್ಯಗಳ ಟಿ–20 ಸರಣಿ ಆಡಲಿದ್ದು, ನಂತರ 2021–23ರ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿರುವ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಮೊಹಾಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಿಗೂ ಮುನ್ನ ಟಿ–20 ಸರಣಿ ನಡೆಯಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ, ಬಿಸಿಸಿಐ ಅದನ್ನು ಖಚಿತಪಡಿಸಿದೆ.

ಮೊಹಾಲಿಯಲ್ಲಿ ಮಾರ್ಚ್ 4ರಿಂದ 8ವರೆಗೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ವಿರಾಟ್ ಕೊಹ್ಲಿ, ನೂರನೇ ಟೆಸ್ಟ್ ಪಂದ್ಯ ಆಡಿದ ಖ್ಯಾತಿಗೆ ಒಳಗಾಗಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ 16ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಫೆಬ್ರುವರಿ 25ರಂದು ಲಖನೌದಲ್ಲಿ ಮೊದಲ ಟಿ–20 ಪಂದ್ಯ ನಡೆಯಲಿದ್ದು, ಧರ್ಮಶಾಲಾದಲ್ಲಿ ಎರಡನೇ ಮತ್ತು ಮೂರನೇ ಟಿ–20 ಪಂದ್ಯವು ಕ್ರಮವಾಗಿ ಫೆಬ್ರುವರಿ 26 ಮತ್ತು 27ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.