ADVERTISEMENT

ಆಯ್ಕೆ ಸಮಿತಿ ಅಧ್ಯಕ್ಷರಿಗೆ ಹೆಚ್ಚು ಅಧಿಕಾರ

ಕ್ರಿಕೆಟ್‌: ಬಿಸಿಸಿಐ ಗೌರವ ಕಾರ್ಯದರ್ಶಿ ಅಧಿಕಾರಕ್ಕೆ ಕತ್ತರಿ: ಸಿಒಎ ನಿರ್ದೇಶನ

ಪಿಟಿಐ
Published 18 ಜುಲೈ 2019, 17:40 IST
Last Updated 18 ಜುಲೈ 2019, 17:40 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ತಂಡದ ಆಯ್ಕೆ ಸಭೆಗಳಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಗೌರವ ಕಾರ್ಯದರ್ಶಿಯ ಬದಲು ಆಯ್ಕೆ ಸಮಿತಿ ಅಧ್ಯಕ್ಷರೇ ಸಂಚಾಲಕರಾಗಿರುತ್ತಾರೆ ಎಂದು ಆಡ ಳಿತಾಧಿಕಾರಿಗಳ ಸಮಿತಿ (ಸಿಒಎ) ಗುರುವಾರ ನಿರ್ದೇಶನ ನೀಡಿದೆ.

ಇದು ಸುಪ್ರೀಂ ಕೋರ್ಟ್‌ ನೇಮಿಸಿರುವ ಲೋಧಾ ಸಮಿತಿಯ ಸುಧಾರಣಾ ಕ್ರಮಗಳ ಭಾಗವಾಗಿದೆ. ಹೊರದೇಶಗಳಿಗೆ ತಂಡದ ಪ್ರವಾಸಗಳ ವೇಳೆ, ಆಡಳಿತಾತ್ಮಕ ಮ್ಯಾನೇಜರ್‌ ಅವರೇ ಸಭೆಯನ್ನು ಕರೆಯುವ ಅಧಿಕಾರ ಹೊಂದಿರುತ್ತಾರೆ. ಅಗತ್ಯಬಿದ್ದರೆ ತಂಡವನ್ನು ಪ್ರಕಟಿಸಲೂಬಹುದು ಎಂದು ಸಿಒಎದ ಹೊಸ ನಿರ್ದೇಶನಗಳಲ್ಲಿ ತಿಳಿಸಲಾಗಿದೆ.

ಇನ್ನು ಮುಂದೆ ಬಿಸಿಸಿಐ ಪ್ರಧಾನ ಕಾರ್ಯದರ್ಶಿ (ಸದ್ಯ ಅಮಿತಾಭ್ ಚೌಧರಿ) ಆಯ್ಕೆ ಸಭೆಗಳಲ್ಲಿ ಭಾಗವಹಿಸು ವಂತಿಲ್ಲ. ತಂಡಗಳಿಗೆ ಬದಲಿ ಆಟಗಾರ ರನ್ನು ಆಯ್ಕೆ ಮಾಡುವಾಗಲೂ ಅವರ ಸಮ್ಮತಿ ಅಗತ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ. ಹಿಂದಿನ ಸಂವಿಧಾನದ ಪ್ರಕಾರ ಆಯ್ಕೆ ಸಮಿತಿಯು, ಪ್ರಧಾನ ಕಾರ್ಯದರ್ಶಿ ವ್ಯಾಪ್ತಿಯೊಳಗೆ ಬರುತಿತ್ತು. ಹೊಸ ನಿರ್ದೇಶನದಿಂದಾಗಿ ಅವರ ಮಹತ್ವ ಕಡಿಮೆಯಾಗಿದೆ.

ADVERTISEMENT

ಪುರುಷರ ತಂಡದ ಜೊತೆಗೆ ಮಹಿಳಾ ತಂಡ, ಜೂನಿಯರ್‌ ತಂಡದ ಆಯ್ಕೆ ಸಭೆಗೂ ಇದು ಅನ್ವಯವಾಗಲಿದೆ. ಪದಾಧಿಕಾರಿ ಅಥವಾ ಸಿಇಒ ಭಾಗವಹಿಸುವಂತಿಲ್ಲ. ಆಯ್ಕೆ ಸಮಿತಿ ಅಧ್ಯಕ್ಷ/ ಹೊರದೇಶಗಳಲ್ಲಿರುವಾಗ ಆಡಳಿತಾತ್ಮಕ ಮ್ಯಾನೇಜರ್‌ ಅವರೇ ಸಭೆಯ ನಡಾವಳಿಗಳನ್ನು ದಾಖಲಿಸಬೇಕಾಗುತ್ತದೆ. ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ಸಹಿ ಪಡೆಯಬೇಕಾಗುತ್ತದೆ.

ಆಯ್ಕೆ ಮತ್ತು ಆಟಕ್ಕೆ ಸಂಬಂಧಿಸಿದ ವಿಷಯಗಳನ್ನು ತಜ್ಞರೇ ನಿರ್ವಹಿಸಬೇಕು ಎಂದು ಲೋಧಾ ಸಮಿತಿ ಸುಧಾರಣೆಯಲ್ಲಿ ಕಡ್ಡಾಯ ಮಾಡಲಾಗಿದ್ದು, ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಆಯ್ಕೆ ಸಮಿತಿ ಸಭೆ ಮುಂದಕ್ಕೆ

ವೆಸ್ಟ್ ಇಂಡೀಸ್‌ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಶುಕ್ರವಾರ ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಆಯ್ಕೆ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ಕ್ರಿಕೆಟ್‌ ಆಡಳಿತಾಧಿಕಾರಿಗಳ ಸಮಿತಿಯು, ತಂಡದ ಆಯ್ಕೆ ಪ್ರಕ್ರಿಯೆಯ ಅಧಿಕಾರದಲ್ಲಿ ಬದಲಾವಣೆ ಮಾಡಿರುವುದು ಇದಕ್ಕೆ ಕಾರಣ.

ಹೊಸ ಬದಲಾವಣೆ ಸಂಬಂಧ ಕಡತದಲ್ಲೂ ಬದಲಾವಣೆ ಮಾಡಬೇಕಾಗಿದೆ. ಜೊತೆಗೆ ತಂಡದ ಆಟಗಾರರ ಫಿಟ್‌ನೆಸ್‌ ವರದಿಯೂ ಶುಕ್ರವಾರ ಸಂಜೆ ಲಭ್ಯವಾಗಲಿರುವ ಕಾರಣ ಸಭೆ ಶನಿವಾರ ಅಥವಾ ಭಾನುವಾರ ನಡೆಯಲಿದೆ.

‘ನಿಯಮ ಬದಲಾವಣೆಯಿಂದಾಗಿ ಕೆಲವು ಕಾನೂನು ಪಾಲಿಸಬೇಕಾಗಿದೆ. ನಾಯಕನ ಲಭ್ಯತೆ ಬಗ್ಗೆಯೂ ಮಂಡಳಿ ಅಧ್ಯಕ್ಷರಿಗೆ ಬಿಸಿಸಿಐ ಕ್ರಿಕೆಟ್‌ ಅಪರೇಷನ್ಸ್ ತಂಡ ವಿವರ ನೀಡಬೇಕಾಗಿದೆ’ ಎಂದು ಮಂಡಳಿಯ ಹಿರಿಯ ಪದಾಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಆಗಸ್ಟ್‌ 3ರಂದು ಆರಂಭವಾಗುವ ವೆಸ್ಟ್ ಇಂಡೀಸ್‌ ಪ್ರವಾಸದಲ್ಲಿ ಭಾರತ ಮೂರು ಟಿ–20, ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಆ. 3 ರಿಂದ 6ರ ಅವಧಿಯಲ್ಲಿ ಟಿ–20, ಆ. 8 ರಿಂದ 14ರ ಅವಧಿಯಲ್ಲಿ ಏಕದಿನ ಮತ್ತು ಆ. 22 ರಿಂದ ಸೆ. 3ರವರೆಗಿನ ಅವಧಿಯಲ್ಲಿ ಟೆಸ್ಟ್‌ ಪಂದ್ಯಗಳು ನಿಗದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.