ADVERTISEMENT

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಹುದ್ದೆ ಮತ್ತೆ ಅನಿಲ್ ಕುಂಬ್ಳೆಗೆ?

ಪಿಟಿಐ
Published 18 ಸೆಪ್ಟೆಂಬರ್ 2021, 12:06 IST
Last Updated 18 ಸೆಪ್ಟೆಂಬರ್ 2021, 12:06 IST
ಅನಿಲ್ ಕುಂಬ್ಳೆ, ಪ್ರಜಾವಾಣಿ ಚಿತ್ರ
ಅನಿಲ್ ಕುಂಬ್ಳೆ, ಪ್ರಜಾವಾಣಿ ಚಿತ್ರ   

ನವದೆಹಲಿ: ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಭಾರತ ತಂಡದ ಮುಖ್ಯ ಕೋಚ್‌ ಆಗುವ ಅವಕಾಶ ಮತ್ತೆ ಒದಗಿಬರುವ ಸಾಧ್ಯತೆಯಿದೆ.

ಟಿ20 ವಿಶ್ವಕಪ್ ಬಳಿಕ ಈಗಿನ ಕೋಚ್‌ ರವಿಶಾಸ್ತ್ರಿ ಅವರ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕೆ ಅಧ್ಯಕ್ಷ ಸೌರವ್‌ ಗಂಗೂಲಿ ನೇತೃತ್ವದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ), ಕುಂಬ್ಳೆ ಅಥವಾ ಮಾಜಿ ಆಟಗಾರ ವಿ.ವಿ.ಎಸ್‌. ಲಕ್ಷ್ಮಣ್ ಅವರನ್ನು ಕರೆತರುವ ಸಾಧ್ಯತೆಯಿದೆ.

ಲೆಗ್‌ಸ್ಪಿನ್ನರ್ ಕುಂಬ್ಳೆ 2016–17ರ ಅವಧಿಯಲ್ಲಿ ಒಂದು ವರ್ಷ ಭಾರತ ತಂಡದ ಕೋಚ್ ಹುದ್ದೆಯಲ್ಲಿದ್ದರು. ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯು ರವಿಶಾಸ್ತ್ರಿ ಅವರಿಂದ ತೆರವಾದ ಸ್ಥಾನಕ್ಕೇ ಕುಂಬ್ಳೆ ಅವರನ್ನು ನೇಮಿಸಿತ್ತು.

ADVERTISEMENT

ನಾಯಕ ವಿರಾಟ್‌ ಕೊಹ್ಲಿ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ, ಚಾಂಪಿಯನ್ಸ್ ಟ್ರೋಫಿ ಫೈನಲ್‌ ಬಳಿಕ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ಮಣಿದಿತ್ತು.

ಕುಂಬ್ಳೆ ಜೊತೆಗೆ, ಮಂಡಳಿಯು ಲಕ್ಷ್ಮಣ್ ಅವರನ್ನೂ ಬಿಸಿಸಿಐ ಸಂಪರ್ಕಿಸಬಹುದು. ಅವರು ಕೆಲವು ವರ್ಷಗಳಿಂದ ಐಪಿಎಲ್ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ನ ಮಾರ್ಗದರ್ಶಕರಾಗಿದ್ದಾರೆ.

‘ಕೋಚ್‌ ಹುದ್ದೆಯಿಂದ ಅನಿಲ್ ಕುಂಬ್ಳೆ ನಿರ್ಗಮಿಸುವಲ್ಲಿ ಆಗಿರುವ ಪ್ರಮಾದಕ್ಕೆ ತಿದ್ದುಪಡಿ ಬೇಕಿದೆ. ಕೊಹ್ಲಿ ಅವರ ಒತ್ತಡಕ್ಕೆ ಒಳಗಾಗಿ ಆಡಳಿತಗಾರರ ಸಮಿತಿಯು (ಸಿಒಎ) ಅವರನ್ನು ತೆಗೆದುಹಾಕಿದ ರೀತಿಯು ಅತ್ಯುತ್ತಮ ಮಾದರಿಯಲ್ಲ. ಆದರೆ, ಕುಂಬ್ಳೆ ಅಥವಾ ಲಕ್ಷ್ಮಣ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿದ್ದಾರೆಯೇ ಎಂಬುದರ ಮೇಲೆ ಇದು ಅವಲಂಬಿಸಿದೆ‘ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಕೊಹ್ಲಿ ಅವರು ಈಗಾಗಲೇ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ ನಾಯಕತ್ವದಿಂದ ನಿರ್ಗಮಿಸುವುದಾಗಿ ಹೇಳಿದ್ದಾರೆ.

ಭಾರತದ ಕೋಚ್‌ಗಳೇ ಬಿಸಿಸಿಐ ಆಡಳಿತಕ್ಕೆ ಯಾವಾಗಲೂ ಮೊದಲ ಆಯ್ಕೆಯಾಗಿದ್ದಾರೆ. ಕುಂಬ್ಳೆ ಮತ್ತು ಲಕ್ಷ್ಮಣ್ ಇಬ್ಬರೂ ಭಾರತೀಯ ಕ್ರಿಕೆಟ್‌ನಲ್ಲಿ ಉತ್ತುಂಗಕ್ಕೇರಿದವರು. 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳ ಆಡಿದ ಜೊತೆಗೆ ತರಬೇತಿಯ ಅನುಭವವು ಅವರ ಬೆನ್ನಿಗಿದೆ. ವಿದೇಶಿ ಕೋಚ್ ಎರಡನೇ ಆಯ್ಕೆಯಾಗಿದೆ.

ವಿಕ್ರಂ ರಾಥೋಡ್‌ ಸ್ಪರ್ಧೆಯಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮೂಲಗಳು ‘ಅವರು ಇಚ್ಛಿಸಿದರೆ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ ಮುಖ್ಯ ಕೋಚ್‌ ಆಗುವಷ್ಟು ಔನ್ನತ್ಯ ಅವರಿಗಿಲ್ಲ. ಸಹಾಯಕ ಕೋಚ್‌ಗೆ ಅವರು ಸೂಕ್ತ‘ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.