ADVERTISEMENT

ಟೆಸ್ಟ್ ಆಟಗಾರರಿಗೆ ಡ್ಯೂಕ್ ಬಾಲ್ ಸೌಲಭ್ಯ

ಪಿಟಿಐ
Published 8 ಏಪ್ರಿಲ್ 2021, 13:24 IST
Last Updated 8 ಏಪ್ರಿಲ್ 2021, 13:24 IST
ಟೆಸ್ಟ್ ಆಡುವವರಿಗೆ ಐಪಿಎಲ್‌ ಸಂದರ್ಭದಲ್ಲಿ ಡ್ಯೂಕ್ ಬಾಲ್‌ನಲ್ಲಿ ಅಭ್ಯಾಸ ಮಾಡಲು ಅವಕಾಶ ಸಿಗಲಿದೆ –ಪಿಟಿಐ ಚಿತ್ರ
ಟೆಸ್ಟ್ ಆಡುವವರಿಗೆ ಐಪಿಎಲ್‌ ಸಂದರ್ಭದಲ್ಲಿ ಡ್ಯೂಕ್ ಬಾಲ್‌ನಲ್ಲಿ ಅಭ್ಯಾಸ ಮಾಡಲು ಅವಕಾಶ ಸಿಗಲಿದೆ –ಪಿಟಿಐ ಚಿತ್ರ   

ನವದೆಹಲಿ: ಐಪಿಎಲ್‌ನಲ್ಲಿ ಆಡುವ ಭಾರತದ ಪ್ರಮುಖ ಟೆಸ್ಟ್ ಆಟಗಾರರು ನೆಟ್ಸ್‌ನಲ್ಲಿ ಕೆಂಪು ಚೆಂಡನ್ನು ಬಳಸಲು ಬಯಸಿದರೆ ಅಭ್ಯಾಸಕ್ಕಾಗಿ ಡ್ಯೂಕ್‌ ಬಾಲ್‌ ಒದಗಿಸಲು ಸಿದ್ಧ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ತಿಳಿಸಿದೆ.

ಐಪಿಎಲ್ ಮುಗಿದ ನಂತರ ಜೂನ್‌ನಲ್ಲಿ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಭಾರತ ಆಡಲಿದೆ. ಅದಕ್ಕೆ ಅಭ್ಯಾಸ ನಡೆಸಲು ಹೆಚ್ಚು ಸಮಯ ಸಿಗುವುದಿಲ್ಲ. ಆದ್ದರಿಂದ ಬಿಸಿಸಿಐ ಈ ತೀರ್ಮಾನಕ್ಕೆ ಬಂದಿದೆ. ಇದು ಕೇವಲ ಐಚ್ಛಿಕ ಮಾತ್ರ ಎಂದು ಮಂಡಳಿ ಸ್ಪಷ್ಟಪಡಿಸಿದೆ.

‘ಐಪಿಎಲ್‌ ಸಂದರ್ಭದಲ್ಲಿ ಟೆಸ್ಟ್ ಆಟಗಾರರು ಕೆಂಪು ಚೆಂಡಿನಲ್ಲಿ ಅಭ್ಯಾಸ ಮಾಡಲು ಬಯಸಿದರೆ ಅವರಿಗಾಗಿ ಡ್ಯೂಕ್ ಚೆಂಡನ್ನು ಒದಗಿಸಲಾಗುವುದು. ಅದನ್ನು ಬಳಸಿ ಅಭ್ಯಾಸ ಮಾಡಬಹುದಾಗಿದೆ. ಯಾವುದೇ ರೀತಿಯ ಸಹಾಯಕ್ಕಾಗಿ ರಾಷ್ಟ್ರೀಯ ತಂಡದ ಕೋಚ್‌ಗಳೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಬಹುದಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

’ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ನಡುವೆ ಹೆಚ್ಚು ಸಮಯಾವಕಾಶ ಇಲ್ಲ. ಟೂರ್ನಿ ನಿಗದಿಯಂತೆ ಮೇ 29ಕ್ಕೆ ಮುಗಿದು ಮೇ 30 ಅಥವಾ 31ರಂದು ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರೂ ಒಂದು ವಾರ ಕಠಿಣ ಕ್ವಾರಂಟೈನ್‌ನಲ್ಲಿರಬೇಕು. ಹೀಗಾಗಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು 10 ದಿನಗಳು ಮಾತ್ರ ಸಿಗುತ್ತವೆ. ಅಭ್ಯಾಸ ಪಂದ್ಯಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಐಪಿಎಲ್ ಸಂದರ್ಭದಲ್ಲೇ ಕೆಂಪು ಚೆಂಡಿನಲ್ಲಿ ಅಭ್ಯಾಸ ಮಾಡಿದರೆ ಒಳ್ಳೆಯದು’ ಎಂದು ಪದಾಧಿಕಾರಿ ತಿಳಿಸಿದರು.

ನ್ಯೂಜಿಲೆಂಡ್ ತಂಡ ಜೂನ್ ಆರಂಭದಲ್ಲಿ ಇಂಗ್ಲೆಂಡ್ ಎದುರು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆದ್ದರಿಂದ ಆ ತಂಡದ ಆಟಗಾರರು ಫೈನಲ್‌ಗೂ ಮೊದಲು ಚೆನ್ನಾಗಿ ಲಯ ಕಂಡುಕೊಳ್ಳಬಹುದಾಗಿದೆ. ಆದರೆ ಭಾರತ ನೇರವಾಗಿ ಫೈನಲ್ ಕದನಕ್ಕೆ ಇಳಿಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.