
ಮುಂಬೈ: ದೆಹಲಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಅವರು ಕ್ರಮವಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಾಗಿ ಚುನಾವಣೆ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಮಿಥುನ್ ಅವರು ಭಾನುವಾರ ಬಿಸಿಸಿಐ ಪ‍್ರಧಾನ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಕ್ರಿಕೆಟ್ ವಲಯದಲ್ಲಿ ಇದು ಅಚ್ಚರಿಗೆ ಕಾರಣವಾಗಿದೆ. ಮಿಥುನ್ ಅವರು 157 ಪ್ರಥಮ ದರ್ಜೆ, 130 ಲಿಸ್ಟ್ ಎ ಮತ್ತು 55 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದರು. 1997–98ರಿಂದ 2016–17ರವರೆಗೆ ಆಡಿರುವ ಅನುಭವಿ ಅವರಾಗಿದ್ದಾರೆ.
ಈ ಮುಂಚೆ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರ ಅಧಿಕಾರವಧಿ ಹೋದ ತಿಂಗಳು ಮುಕ್ತಾಯವಾಗಿತ್ತು. ಇದೀಗ ಅವರ ಸ್ಥಾನ ತುಂಬುವವರ ರೇಸ್‌ನಲ್ಲಿ 45 ವರ್ಷ ವಯಸ್ಸಿನ ಮಿಥುನ್ ಮುಂಚೂಣಿಯಲ್ಲಿದ್ದಾರೆ. ಶನಿವಾರ ರಾತ್ರಿ ನಡೆದಿದ್ದ ಅನೌಪಚಾರಿಕ ಸಭೆಯ ನಂತರ ಈ ಬೆಳವಣಿಗೆ ಆಗಿದೆ. ಇನ್ನು ಕೆಲವು ಪ್ರಮುಖ ಹುದ್ದೆಗಳ ನೇಮಕಕ್ಕೂ ಚರ್ಚೆ ನಡೆಯಿತು ಎನ್ನಲಾಗಿದೆ. ಮುಂದಿನ ಭಾನುವಾರ (ಸೆ 28) ನಡೆಯಲಿರುವ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಚುನಾವಣೆ ನಡೆಯಲಿದೆ.
ಹಾಲಿ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಅದೇ ಹುದ್ದೆಯಲ್ಲಿ ಮುಂದುವರಿಯುವ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಹೋದ ಜನವರಿಯಲ್ಲಿ ಅವರು ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಅರುಣ್ ಧುಮಾಲ್ ಅವರು ಖಜಾಂಚಿ ಹುದ್ದೆಗೆ ನಾಮಪತ್ರ ಸಲ್ಲಿಸಿದರು.
‘ಮುಂದಿನ ಅವಧಿಗಾಗಿ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಗುವುದು. ಮಿಥುನ್ ಮನ್ಹಾಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಯ್ಕೆ ಮಾಡಲು ನಿರ್ಧರಿಸಲಾಗಿದೆ. ಅರುಣ್ ಧುಮಾಲ್ ಅವರು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥರಾಗಿ ಮುಂದುವರಿಯುವರು’ ಎಂದೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಧ್ಯಮಗಳಿಗೆ ತಿಳಿಸಿದರು.
ಈ ಮೊದಲು ಖಜಾಂಚಿ ಆಗಿದ್ದ ಪ್ರಭತೇಜ್ ಭಾಟಿಯಾ ಅವರು ಜಂಟಿ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ರೋಹನ್ ಗೌನ್ಸ್ ದೇಸಾಯಿ ಅವರಿಂದ ತೆರವಾದ ಸ್ಥಾನವನ್ನು ಭಾಟಿಯಾ ಪಡೆಯುವರು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಯದೇವ್ ಶಾ ಅವರು ಅಪೆಕ್ಸ್ ಕೌನ್ಸಿಲ್‌ನಲ್ಲಿ ದಿಲೀಪ್ ವೆಂಗಸರ್ಕಾರ್ ಅವರಿಂದ ತೆರವಾದ ಸ್ಥಾನ ಪಡೆಯುವರು.
‘ಕಳೆದ ಕೆಲವೇ ತಿಂಗಳುಗಳ ಹಿಂದೆ ಕಾರ್ಯದರ್ಶಿಯಾಗಿ ನೇಮಕವಾಗಿದ್ದೆ. ನಾನು ಈ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಸಹೋದ್ಯೋಗಿಗಳು ಇಚ್ಛೆ ವ್ಯಕ್ತಪಡಿಸಿದ್ದರಿಂದ ನಾಮಪತ್ರ ಸಲ್ಲಿಸಿದೆ’ ಎಂದು ಸೈಕಿಯಾ ತಿಳಿಸಿದರು.
ಭಾರತದ ಆತಿಥ್ಯದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಎದುರಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಕುರಿತೂ ಅವರು ಮಾಹಿತಿ ನೀಡಿದರು.
‘ಈ ಸರಣಿಗಾಗಿ ಸೆ.23 ಅಥವಾ 25ರಂದು ಭಾರತ ತಂಡವನ್ನು ಆಯ್ಕೆ ಮಾಡಲಾಗುವುದು’ ಎಂದರು.
ಅ. 2ರಿಂದ 6ರವರೆಗೆ ಮೊದಲ ಟೆಸ್ಟ್ ಪಂದ್ಯವು ಅಹಮದಾಬಾದ್ ಮತ್ತು ಎರಡನೇಯದ್ದು ನವದೆಹಲಿಯಲ್ಲಿ ಅ.10ರಿಂದ 14ರವರೆಗೆ ನಡೆಯಲಿವೆ.
2025–27ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಆವೃತಿಯಲ್ಲಿ ಶುಭಮನ್ ಗಿಲ್ ಪಡೆಯು ತವರಿನಲ್ಲಿ ಆಡಲಿರುವ ಮೊದಲ ಸರಣಿ ಇದಾಗಿದೆ.
ಹೋದ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಸರಣಿಯಲ್ಲಿ ಗಿಲ್ ಪೂರ್ಣಾವಧಿ ನಾಯಕರಾಗಿ ಆಡಿದ್ದರು.
ನಾಮಪತ್ರ ಸಲ್ಲಿಸಿದೆ: ಭಟ್
‘ಬಿಸಿಸಿಐ ಖಜಾಂಚಿ ಹುದ್ದೆಗೆ ನಾಮಪತ್ರ ಸಲ್ಲಿಸಿರುವೆ. ಮುಂದಿನ ಭಾನುವಾರ ಎಜಿಎಂ ನಡೆಯಲಿದೆ’ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಎಸ್‌ಸಿಎ ಅಧ್ಯಕ್ಷರಾಗಿ ಅವರು ಇದೇ 30ರಂದು ಮೂರು ವರ್ಷದ ಅವಧಿ ಪೂರೈಸಲಿದ್ದಾರೆ.
67 ವರ್ಷದ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಎಡಗೈ ಸ್ಪಿನ್ನರ್ ಆಗಿ ಕರ್ನಾಟಕ ಮತ್ತು ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1983ರಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ಗಳಲ್ಲಿ ಆಡಿದ್ದರು. ಒಟ್ಟು 2 ಪಂದ್ಯಗಳಿಂದ 4 ವಿಕೆಟ್ ಗಳಿಸಿದ್ದರು. 82 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 374 ಮತ್ತು 12 ಲಿಸ್ಟ್ ಎ ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಗಳಿಸಿದ್ದರು.
ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥರಾಗಿ, ಅಂಪೈರಿಂಗ್ ಮತ್ತು ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮೂರು ವರ್ಷಗಳ ಹಿಂದೆ ಕೆಎಸ್‌ಸಿಎ ಆಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.