
ಬೆಂಗಳೂರು: ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಟೂರ್ನಿಯಲ್ಲಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿತು.
ಹರಿಯಾಣದ ಸುಲ್ತಾನಪುರದಲ್ಲಿ ಸೋಮವಾರ ನಡೆದ ಎಲೀಟ್ ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ ತಂಡವು 5 ವಿಕೆಟ್‌ಗಳಿಂದ ತಮಿಳುನಾಡು ಕ್ರಿಕೆಟ್ ಸಂಸ್ಥೆಯ ವಿರುದ್ಧ ಪರಾಭವಗೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜ್ಯ ತಂಡವು ಐಶ್ವರ್ಯ ಲಕ್ಷ್ಮಿ ಆರ್. (14ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 110 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ತಮಿಳುನಾಡು ತಂಡವು 19.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ, ಗೆಲುವಿನ ನಗೆ ಬೀರಿತು.
ಗುಂಪು ಹಂತದ ಎಲ್ಲ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ತಮಿಳುನಾಡು ತಂಡವು (20 ಪಾಯಿಂಟ್ಸ್) ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, ಮೂರು ಪಂದ್ಯ ಗೆದ್ದು ಎರಡರಲ್ಲಿ ಸೋತ ರೋಷಿಣಿ ಕಿರಣ್ ಪಡೆಯು (12 ಅಂಕ) ಎರಡನೇ ಸ್ಥಾನ ಪಡೆಯಿತು. ಈ ಎರಡೂ ತಂಡಗಳು ಡಿಸೆಂಬರ್ 5ರಿಂದ ಅಹಮದಾಬಾದ್‌ನಲ್ಲಿ ನಡೆಯಲಿರುವ ಪ್ರಿಕ್ವಾರ್ಟರ್ ಸುತ್ತಿಗೆ ಅರ್ಹತೆ ಪಡೆದುಕೊಂಡವು.
ರಾಜ್ಯ ತಂಡವು ನಾಕೌಟ್ ಸುತ್ತಿನಲ್ಲಿ ಪಂಜಾಬ್ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರು:
ಕರ್ನಾಟಕ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 110 (ನಿಕಿ ಪ್ರಸಾದ್ 37, ಪ್ರೇರಣಾ ಜಿ.ಆರ್. 31; ಐಶ್ವರ್ಯ ಲಕ್ಷ್ಮಿ ಆರ್. 14ಕ್ಕೆ3).
ತಮಿಳುನಾಡು: 19.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 113 (ಎನ್.ಎಸ್.ಸುಬ್ಬಲಕ್ಷ್ಮಿ 32, ಸಿ.ಶುಶಾಂಧಿಕಾ 25; ಅನನ್ಯಾ ಹೆಗ್ಡೆ 17ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.