ಸಯ್ಯದ್ ಕಿರ್ಮಾನಿ
ಚಿತ್ರ: ರಂಜು ಪಿ.
ವಿಶ್ವದ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ವಿಕೆಟ್‌ಕೀಪರ್–ಬ್ಯಾಟರ್‌ಗಳ ಸಾಲಿನಲ್ಲಿ ಕರ್ನಾಟಕದ ಸೈಯದ್ ಕಿರ್ಮಾನಿ ಅವರದ್ದು ವಿಶಿಷ್ಟ ಛಾಪು. ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ಪ್ರಥಮಗಳ ದಾಖಲೆ ಹೊಂದಿರುವ ಆಟಗಾರ. 1983ರ ವಿಶ್ವಕಪ್ ವಿಜಯದಲ್ಲಿ ಹಾಗೂ 1974ರಲ್ಲಿ ಕರ್ನಾಟಕ ತಂಡವು ಮೊದಲ ರಣಜಿ ಟ್ರೋಫಿ ಗದ್ದಾಗ ಕಾಣಿಕೆ ನೀಡಿದವರು. ವಿಶ್ವಶ್ರೇಷ್ಠ ಸ್ಪಿನ್ನರ್ ಮತ್ತು ಮಧ್ಮಮವೇಗಿಗಳ ಬೌಲಿಂಗ್‌ಗೆ ಅಚ್ಚುಕಟ್ಟಾಗಿ ವಿಕೆಟ್‌ಕೀಪಿಂಗ್ ಮಾಡಿ ತಮ್ಮ ಮುಂದಿನ ಪೀಳಿಗೆಗಳಿಗೆ ದಾರಿದೀಪವಾದವರು. ಇವತ್ತು ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ನಿಮ್ಮ ವೃತ್ತಿಜೀವನದಲ್ಲಿ ಅತ್ಯಂತ ಹೆಚ್ಚು ಸಂತೃಪ್ತಿ ನೀಡಿದ ಇನಿಂಗ್ಸ್ ಯಾವುದು?
ಬಹಳಷ್ಟು ಇನಿಂಗ್ಸ್‌ಗಳಲ್ಲಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ನನ್ನ ಸವಿನೆನಪುಗಳಿವೆ. ಆದರೆ, ನಿಸ್ಸಂಶಯವಾಗಿ ಜಿಂಬಾಬ್ವೆ ಎದುರು ಕಪಿಲ್ ದೇವ್ ಅವರೊಂದಿಗಿನ ಜೊತೆಯಾಟವೇ ನನ್ನ ಫೆವರಿಟ್. ಅದೊಂದು ಐತಿಹಾಸಿಕ ಇನಿಂಗ್ಸ್. ಕ್ರಿಕೆಟ್ ವಲಯದ ಚಹರೆಯನ್ನೇ ಬದಲಿಸಿದ ಆಟ ಅದು. ನನ್ನ ಸಹ ಆಟಗಾರರೆಲ್ಲರೂ ಪೆವಿಲಿಯನ್‌ನಲ್ಲಿ ಕುಳಿತಿದ್ದರು. ಅವರೆಲ್ಲರಿಗೂ ಸೋಲಿನ ಆತಂಕ ಕಾಡಿತ್ತು. ಆದರೆ, ಕಪಿಲ್ ಮಾತ್ರ ನಿರ್ಭಯವಾಗಿ ಬ್ಯಾಟ್ ಬೀಸುತ್ತಿದ್ದರು. ಪ್ರತಿಯೊಂದು ಎಸೆತವನ್ನು ಹೊಡೆಯಿರಿ. ರನ್ ಗಳಿಸೋಣ ಎಂದು ಅವರಿಗೆ ಹುರಿದಂಬಿಸುತ್ತಿದ್ದೆ. ಅವರು ಅಜೇಯ 175 ಹೊಡೆದಿದ್ದು ಇಂದಿಗೂ ಸರ್ವಶ್ರೇಷ್ಠ ಇನಿಂಗ್ಸ್. ಅಂತಹ ಒತ್ತಡದಲ್ಲಿ ಈ ರೀತಿಯ ಆಟ ಯಾರಿಂದಲೂ ಸಾಧ್ಯವಿಲ್ಲ.
ಕ್ರಿಕೆಟ್ ಆಟಗಾರನಾಗಬೇಕೆಂಬ ಆಸಕ್ತಿ ಹೇಗೆ ಹುಟ್ಟಿತು?
ಕ್ರೀಡೆಯ ಗುಣ ನನಗೆ ದೈವದತ್ತವಾಗಿ ಬಂದಿದ್ದು. ಅಪ್ಪ ಹಾಕಿ ಹಾಗೂ ಅಮ್ಮ ಬಾಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಅಪ್ಪ ಸರ್ಕಾರಿ ಇಲಾಖೆಯಲ್ಲಿ ಸ್ಟೆನೊಗ್ರಾಫರ್ ಆಗಿದ್ದರು. ನಾನು ಸೇಂಟ್ ಜೋಸೆಫ್ ಶಾಲೆಯಲ್ಲಿ ಓದುತ್ತಿದ್ದೆ. ನಾನು ಆಟೋಟಗಳಲ್ಲಿ ಬಹಳ ಚುರುಕಾಗಿದ್ದೆ. ಶಾಲೆಯ ಕ್ರೀಡಾಕೂಟಗಳ ಎಲ್ಲ ಆಟಗಳಲ್ಲಿಯೂ ಭಾಗವಹಿಸುತ್ತಿದ್ದೆ. ಕ್ರಿಕೆಟ್ ಕೂಡ ಆಡುತ್ತಿದ್ದೆ. ಆ ಕಾಲದಲ್ಲಿ ಕ್ರಿಕೆಟ್‌ಗೆ ಇಷ್ಟು ಕ್ರೇಜ್ ಇರಲಿಲ್ಲ. ಮನೆಯಲ್ಲಿಯೂ ನಾನು ಕ್ರೀಡೆಯಲ್ಲಿ ಭಾಗವಹಿಸುವುದು ಇಷ್ಟವಿರಲಿಲ್ಲ. ಪ್ರೋತ್ಸಾಹವೂ ಸಿಕ್ಕಿರಲಿಲ್ಲ. ಚೆನ್ನಾಗಿ ಓದಿ, ಸರ್ಕಾರಿ ನೌಕರಿ ಗಳಿಸಿ ಎಂಬ ಒತ್ತಾಯ ಇತ್ತು. ಶಾಲೆಯ ವಾರ್ಷಿಕ ಕ್ರೀಡೆಗಳಲ್ಲಿ ಪ್ರಶಸ್ತಿ ಗೆದ್ದಾಗಲೂ ಅಪ್ಪನಿಗೆ ಹೇಳಿರಲಿಲ್ಲ. ಅಮ್ಮನಿಗಷ್ಟೇ ಕಪ್ ಕೊಟ್ಟಿದ್ದೆ. ಅವರು ಅಪ್ಪನಿಗೆ ಹೇಳಿದ್ದರು. ಆದರೂ ಅಪ್ಪ ಆಟ ನಿಯಮಿತವಾಗಿರಲಿ, ಓದು ಹೆಚ್ಚಿರಲಿ ಎಂದಿದ್ದರು. ಪ್ರತಿಭೆ, ಪ್ರಯತ್ನದಿಂದ ಶಾಲಾ ಕ್ರಿಕೆಟ್ ತಂಡದಲ್ಲಿ ಆಡಿದೆ. ವಲಯ, ಆಗಿನ ಮೈಸೂರು ರಾಜ್ಯ ಮಟ್ಟಕ್ಕೆ ಆಯ್ಕೆಯಾದೆ. ಜೂನಿಯರ್ ಹಂತದಲ್ಲಿ ಆಡಿದೆ. 1967ರಲ್ಲಿ ಇಂಗ್ಲೆಂಡ್‌ಗೆ ಆಡಲು ಹೊರಟಿದ್ದ ಇಂಡಿಯನ್ ಸ್ಕೂಲ್ ತಂಡಕ್ಕೆ ಆಯ್ಕೆಯಾದೆ. ವಿಕೆಟ್‌ಕೀಪಿಂಗ್ ಕೂಡ ನನ್ನ ಆಯ್ಕೆಯಾಗಿರಲಿಲ್ಲ. ಬೇರೆಯವರು ಹೆಚ್ಚು ಇಷ್ಟಪಡದ ಕಾರಣ ನನಗೆ ಅವಕಾಶ ಸಿಕ್ಕಿತ್ತು. ಅದರಲ್ಲಿ ಆಸಕ್ತಿಯಿಂದ ತೊಡಗಿಕೊಂಡೆ. ಹೊಸತನ್ನು ಕಲಿಯುತ್ತ ಹೋದೆ. ಸುಬ್ರಮಣ್ಯಂ ನಾಯಕತ್ವದ ಮೈಸೂರು ರಣಜಿ ತಂಡದಲ್ಲಿ 1968ರಲ್ಲಿ ಪದಾರ್ಪಣೆ ಮಾಡಿದೆ. ಅದಾಗಿ 9 ವರ್ಷಗಳ ನಂತರ ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ಮುಂದಿನದ್ದು ನಿಮಗೆಲ್ಲ ಗೊತ್ತಿದೆ.
ತಮ್ಮ ಕಾಲಘಟ್ಟದಲ್ಲಿ ಭಾರತ ಮತ್ತು ಕರ್ನಾಟಕದಲ್ಲಿ ಶ್ರೇಷ್ಠ ಸ್ಪಿನ್ನರ್‌ಗಳಿದ್ದರು. ಅವರ ಬೌಲಿಂಗ್‌ಗೆ ಕೀಪಿಂಗ್ ಮಾಡುವುದು ಎಷ್ಟು ಸವಾಲಾಗಿತ್ತು?
ಸವಾಲು ಎನ್ನುವ ಪದವೇ ನನಗೆ ಗೊತ್ತಿಲ್ಲ. ಏಕೆಂದರೆ; ನಮಗೆ ಆಗಿನ ಕಾಲದಲ್ಲಿ ಕೋಚ್, ಫಿಸಿಯೊ, ವಿಡಿಯೊ ಅನಾಲಿಸ್ಟ್ ಮುಂತಾದವರ ನೆರವು ಇರಲಿಲ್ಲ. ಕೇಕಿ ತಾರಾಪುರ್ ಅವರ ಮಾರ್ಗದರ್ಶನ ಮತ್ತು ಅಭ್ಯಾಸದ ಸಂದರ್ಭದಲ್ಲಿ ಪ್ರಯೋಗಗಳ ಮೂಲಕ ಕಲಿತದ್ದಷ್ಟೇ. ಯರಪಳ್ಳಿ ಪ್ರಸನ್ನ, ಬಿ.ಎಸ್. ಚಂದ್ರಶೇಖರ್, ವೆಂಕಟರಾಘವನ್, ಬಿಷನ್ ಸಿಂಗ್ ಬೇಡಿ ಅವರ ಎಸೆತಗಳಿಗೆ ಕೀಪಿಂಗ್ ಮಾಡುವುದು ಅತ್ಯಂತ ಸಂತೋಷದ ವಿಷಯ. ಆ ಹಂತವನ್ನು ನಾನು ಮನಸಾರೆ ಆಸ್ವಾದಿಸಿದೆ. ನನ್ನದು ಎಂದಿಗೂ ಸೋಲೊಪ್ಪಿಕೊಳ್ಳದ ಸ್ವಭಾವ ಮತ್ತು ಶಿಸ್ತುಬದ್ಧ ಜೀವನ. ಅದರಿಂದಾಗಿ ಮಾನಸಿಕ, ದೈಹಿಕ ಒತ್ತಡ ಅನುಭವಿಸಲಿಲ್ಲ. ಎಂತಹದ್ದೇ ಸವಾಲಿಗೂ ನಗುನಗುತ್ತಲೇ ಎದೆಗೊಡುವುದು ರೂಢಿಯಾಗಿಬಿಟ್ಟಿದೆ.
ಬ್ಯಾಟರ್ ಆಗಿ ತಾವು ಎದುರಿಸಿದ ಸವಾಲುಗಳೇನು?
ಆ ಕಾಲದಲ್ಲಿ ಅಪ್ರತಿಮ ವೇಗಿಗಳು ಇದ್ದರು. ವೆಸ್ಟ್ ಇಂಡೀಸ್‌ನ ಮೈಕೆಲ್ ಹೋಲ್ಡಿಂಗ್, ಜೋಲ್ ಗಾರ್ನರ್, ಮಾಲ್ಕಂ ಮಾರ್ಷಲ್, ಆಸ್ಟ್ರೇಲಿಯಾದ ಡೆನಿಸ್ ಲಿಲಿ, ಜೆಫ್ ಥಾಂಪ್ಸನ್ ಅವರ ಮುಂದೆ ಆಡುವುದೆಂದರೇ ಆತಂಕವಿದ್ದ ಕಾಲ. ಆದರೆ ನಾವು ಹೆಲ್ಮೆಟ್ ಇಲ್ಲದೇ ಆಡಿದ್ದೆವು.
ಆಗ ಮತ್ತು ಈಗ ವಿಕೆಟ್‌ಕೀಪಿಂಗ್‌ನಲ್ಲಿ ಏನು ವ್ಯತ್ಯಾಸವಿದೆ?
ನಾನು ವಿಕೆಟ್‌ಕೀಪಿಂಗ್ ಕಲಿಯಲು ಆರಂಭಿಸಿದ್ದೇ ಇಟ್ಟಿಗೆಗಳ ನೆರವಿನಿಂದ. ಆಗ ಕೈಗವಸು ಖರೀದಿಸಲು ಹಣದ ಕೊರತೆ ಇತ್ತು. ಹಂತ ಹಂತವಾಗಿ ಕಲಿತು ಬೆಳೆದೆ. ಈಗ ಸ್ಥಿತಿ ಬಹಳ ಸುಧಾರಿಸಿದೆ. ವಿಕೆಟ್‌ಕೀಪಿಂಗ್ ವೃತ್ತಿಪರವಾಗಿದೆ. ಆಧುನಿಕ ತಂತ್ರಜ್ಞಾನ ಬಂದಿದೆ. ಅಂಪೈರಿಂಗ್ ನಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದರಿಂದಾಗಿ ಉತ್ತಮ ನಿರ್ಣಯಗಳು ಹೊರಹೊಮ್ಮುತ್ತಿವೆ. ನಮ್ಮ ಸಂದರ್ಭದಲ್ಲಿ ಬಹಳಷ್ಟು ಅಂಪೈರ್‌ಗಳು ಪಕ್ಷಪಾತಿಗಳಾಗಿದ್ದರು. ಖ್ಯಾತನಾಮ ಆಟಗಾರರು ಮತ್ತು ತಮ್ಮ ದೇಶದ ಬ್ಯಾಟರ್‌ಗಳ ಪರವಾಗಿದ್ದ ಘಟನೆಗಳು ಇವೆ. ಟಿವಿ ಇರಲಿಲ್ಲ. ಇದರಿಂದಾಗಿ ಉಭಯ ತಂಡಗಳ ಆಟಗಾರರ ನಡುವೆ ಭಿನ್ನಾಭಿಪ್ರಾಯ ಮೂಡುತ್ತಿದ್ದವು. ಆದರೆ ನಾನು ಯಾವತ್ತೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ನಾವು ಸ್ಲೆಡ್ಜಿಂಗ್(ಕೆಣಕುವುದು) ಮಾಡುತ್ತಿರಲಿಲ್ಲ. ವಾಂಖೆಡೆಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ ಇಂಗ್ಲೆಂಡ್‌ನ ಆ್ಯಲನ್ ಲ್ಯಾಂಬ್ ಅವರನ್ನು ಸ್ಟಂಪ್ ಮಾಡಿ ಅಪೀಲ್ ಮಾಡಿದೆ. ಅವರ ಕಾಲು ಗಾಳಿಯಲ್ಲಿತ್ತು ಎಂದು ಅರಿತಿದ್ದೆ. ಲೆಗ್‌ಅಂಪೈರ್ ಔಟ್ ನೀಡಿದರು. ಲ್ಯಾಂಬ್ ನನ್ನನ್ನು ವಂಚಕ ಎಂದು ಬಯ್ಯುತ್ತ ಹೊರಹೋದರು. ನಾನು ಆ ರಾತ್ರಿ ನಿದ್ರಿಸಲಿಲ್ಲ. ಬೆಳಗಿನ ಜಾವ ಹೋಟೆಲ್‌ಗೆ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಚಿತ್ರಗಳಲ್ಲಿ ಅಲನ್ ಮುಂದಡಿ ಇಟ್ಟು ಆಡುವ ಪ್ರಯತ್ನದಲ್ಲಿ ಅವರ ಹಿಂಗಾಲು ಗಾಳಿಯಲ್ಲಿದ್ದಾಗಲೇ ನಾನು ಬೇಲ್ಸ್ ಹಾರಿಸಿದ್ದು ಸ್ಪಷ್ಟವಾಗಿತ್ತು. ಆ ಪತ್ರಿಕೆಗಳನ್ನು ಕ್ರೀಡಾಂಗಣಕ್ಕೆ ತೆಗೆದುಕೊಂಡು ಬಂದು ಅವರ ಡ್ರೆಸಿಂಗ್ ಕೋಣೆಗೆ ಹೋದೆ. ಅವರ ಮುಂದೆ ಪತ್ರಿಕೆಗಳನ್ನು ಬೀಸಿ ಒಗೆದು ಚಿತ್ರ ನೋಡಿಕೊಳ್ಳಿ. ನನ್ನನ್ನು ವಂಚಕ ಎಂದಿರಲ್ಲ ಎಂದು ಅಬ್ಬರಿಸಿದ್ದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.