ADVERTISEMENT

ಸದ್ಯ ಬಿನ್ನಿ ಅಧ್ಯಕ್ಷ ಸ್ಥಾನ ಅಬಾಧಿತ: ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಎಜಿಎಂ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 15:55 IST
Last Updated 12 ಆಗಸ್ಟ್ 2025, 15:55 IST
ರೋಜರ್‌ ಬಿನ್ನಿ
ರೋಜರ್‌ ಬಿನ್ನಿ   

ಬೆಂಗಳೂರು: ಮುಂದಿನ ತಿಂಗಳು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ವಾರ್ಷಿಕ ಮಹಾಸಭೆ ನಡೆಯಲಿದ್ದು, ರೋಜರ್‌ ಬಿನ್ನಿ ಅವರು  ಕನಿಷ್ಠ ಅಲ್ಲಿಯವರೆಗೆ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. 1983ರ ವಿಶ್ವಕಪ್‌ ಗೆದ್ದ ತಂಡದ ಆಲ್‌ರೌಂಡರ್‌ ಬಿನ್ನಿ ಕಳೆದ ತಿಂಗಳು 70ನೇ ವರ್ಷಕ್ಕೆ ಕಾಲಿಟ್ಟಿದ್ದರು.

2022ರ ಅಕ್ಟೋಬರ್‌ನಲ್ಲಿ ಸೌರವ್ ಗಂಗೂಲಿ ಅವರ ಸ್ಥಾನದಲ್ಲಿ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮಂಗಳವಾರ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು ಇದರ ಪ್ರಕಾರ, ವಿಶ್ವ ಕ್ರೀಡಾ ಸಂಸ್ಥೆಗಳು ವಯೋಮಿತಿ ವಿಧಿಸದಿದ್ದಲ್ಲಿ ಪದಾಧಿಕಾರಿಗಳು 75ನೇ ವಯಸ್ಸಿನವರೆಗೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ. ಬಿಸಿಸಿಐನ ರಾಜ್ಯ ಘಟಕಗಳ ಸದಸ್ಯರು ಒಪ್ಪಿದಲ್ಲಿ ಬಿನ್ನಿ ಅವರು ಇನ್ನೂ ಐದು ವರ್ಷ ಅಧಿಕಾರದಲ್ಲಿರಲು ಅವಕಾಶವಿದೆ. ಐಸಿಸಿ ವಯೋಮಿತಿಗೆ ಸಂಬಂಧಿಸಿ ಯಾವುದೇ ನಿಯಮ ರಚಿಸಿಲ್ಲ.

ADVERTISEMENT

‘ಸೆಪ್ಟೆಂಬರ್‌ನಲ್ಲಿ ಮಂಡಳಿ ಸಭೆ ನಿಗದಿಯಾಗಿದ್ದು, ರೋಜರ್‌ ಅಲ್ಲಿಯವರೆಗೆ ಮುಂದುವರಿಯಲಿದ್ದಾರೆ. ಆದರೆ ಅವರು ಮತ್ತೊಂದು ಅವಧಿಗೆ ಅಧಿಕಾರದಲ್ಲಿ ಇರುತ್ತಾರೆಯೇ ಎಂಬುದನ್ನು ಸದಸ್ಯರು ಮತ್ತು ಬಿಸಿಸಿಐನ ಪ್ರಭಾವಿ ವ್ಯಕ್ತಿಗಳು ನಿರ್ಧರಿಸಲಿದ್ದಾರೆ’ ಎಂದು ಮಂಡಳಿ ಮೂಲವೊಂದು ತಿಳಿಸಿದೆ.

ಬಿಸಿಸಿಐ, ಹೊಸ ಕ್ರೀಡಾ ಮಸೂದೆಯ ವ್ಯಾಪ್ತಿಗೆ ಬರಲಿದೆ. ಆದರೆ ಅದು ಸರ್ಕಾರದಿಂದ ಅನುದಾನ ಅಥವಾ ಆರ್ಥಿಕ ನೆರವು ಪಡೆಯದ ಕಾರಣ ಇತರ ಕ್ರೀಡಾ ಫೆಡರೇಷನ್‌ಗಳಂತೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಬರುವುದಿಲ್ಲ. ಬಿಸಿಸಿಐ ಕಾನೂನು ತಂಡ ಈ ಮಸೂದೆಯ ಬಗ್ಗೆ ಅಧ್ಯಯನ ನಡೆಸುತ್ತಿದೆ.

‘ಈಗಷ್ಟೇ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಅಂಗೀಕಾರಗೊಂಡಿದೆ. ಅದರ ಬಗ್ಗೆ ಸಮಗ್ರ ಅಧ್ಯಯನ ನಡೆಯುತ್ತಿದೆ. ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಸಮಾಲೋಚನೆ ನಡೆಸುತ್ತೇವೆ’ ಎಂದೂ ಮೂಲ ತಿಳಿಸಿದೆ.

‘ಈ ಮಸೂದೆಯ ಇತರ ಕೆಲವು ಅಂಶಗಳ ಬಗ್ಗೆ ಹಿರಿಯ ಆಟಗಾರರು, ತರಬೇತಿ ಸಿಬ್ಬಂದಿ ಒಳಗೊಂಡಂತೆ ಭಾಗೀದಾರರ ಜೊತೆ ಸಮಾಲೋಚಿಸಲಾಗುವುದು. ಏಕೆಂದರೆ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕೂಡ ಸೇರ್ಪಡೆ ಆಗಿರುವ ಕಾರಣ ಇದರ ಅಗತ್ಯವಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.