ADVERTISEMENT

ವಾಟ್ಲಿಂಗ್‌ ದಾಖಲೆಯ ದ್ವಿಶತಕ

ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌: ಗೆಲುವಿನತ್ತ ದಾಪುಗಾಲಿಟ್ಟ ನ್ಯೂಜಿಲೆಂಡ್‌

ಏಜೆನ್ಸೀಸ್
Published 24 ನವೆಂಬರ್ 2019, 19:30 IST
Last Updated 24 ನವೆಂಬರ್ 2019, 19:30 IST
ಬಿ.ಜೆ. ವಾಟ್ಲಿಂಗ್‌ ಮತ್ತು ಮಿಷೆಲ್‌ ಸ್ಯಾಂಟನರ್‌ (ಬಲ) ಸಮಾಲೋಚನೆಯಲ್ಲಿ ತೊಡಗಿದ್ದ ಕ್ಷಣ –ಎಎಫ್‌ಪಿ ಚಿತ್ರ
ಬಿ.ಜೆ. ವಾಟ್ಲಿಂಗ್‌ ಮತ್ತು ಮಿಷೆಲ್‌ ಸ್ಯಾಂಟನರ್‌ (ಬಲ) ಸಮಾಲೋಚನೆಯಲ್ಲಿ ತೊಡಗಿದ್ದ ಕ್ಷಣ –ಎಎಫ್‌ಪಿ ಚಿತ್ರ   

ಮೌಂಟ್‌ ಮಾಂಗಾನುಯಿ: ವಿಕೆಟ್‌ ಕೀಪರ್‌ ಬಿ.ಜೆ.ವಾಟ್ಲಿಂಗ್‌ (205; 473ಎ, 24ಬೌಂ, 1ಸಿ) ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಭಾನುವಾರ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದರು.

ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ದ್ವಿತಶಕ ಸಿಡಿಸಿದ ವಾಟ್ಲಿಂಗ್‌, ನ್ಯೂಜಿಲೆಂಡ್‌ ತಂಡ ಗೆಲುವಿನತ್ತ ದಾಪುಗಾಲಿಡಲು ನೆರವಾದರು. ಮಿಷೆಲ್‌ ಸ್ಯಾಂಟನರ್‌ (126; 269ಎ; 11ಬೌಂ, 5ಸಿ) ಕೂಡ ಟೆಸ್ಟ್‌ ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.

ಇವರ ಅಮೋಘ ಜೊತೆಯಾಟದಿಂದಾಗಿ ಕೇನ್‌ ವಿಲಿಯಮ್ಸನ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 201 ಓವರ್‌ಗಳಲ್ಲಿ 9 ವಿಕೆಟ್‌ಗೆ 615ರನ್‌ ಗಳಿಸಿ ಡಿಕ್ಲೇರ್ಡ್‌ ಮಾಡಿಕೊಂಡಿತು. ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಎದುರು ನ್ಯೂಜಿಲೆಂಡ್‌ ದಾಖಲಿಸಿದ ಅತ್ಯಧಿಕ ಮೊತ್ತ ಇದಾಗಿದೆ. 1973ರಲ್ಲಿ ಲಾರ್ಡ್ಸ್‌ ಅಂಗಳದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 9 ವಿಕೆಟ್‌ಗೆ 551ರನ್‌ ಗಳಿಸಿದ್ದು ಇದುವರೆಗಿನ ಉತ್ತಮ ಸಾಧನೆಯಾಗಿತ್ತು.

ADVERTISEMENT

ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಜೋ ರೂಟ್‌ ಬಳಗ ಮಿಷೆಲ್‌ ಸ್ಯಾಂಟನರ್‌ ಅವರ ಸ್ಪಿನ್ ಬಲೆಯೊಳಗೆ ಸಿಲುಕಿ ಒದ್ದಾಡಿತು. ಈ ತಂಡ ದಿನದಾಟದ ಅಂತ್ಯಕ್ಕೆ 27.4 ಓವರ್‌ಗಳಲ್ಲಿ 3 ವಿಕೆಟ್‌ಗೆ 55ರನ್‌ ಗಳಿಸಿದೆ.

ವಾಟ್ಲಿಂಗ್‌ ಮ್ಯಾರಥಾನ್‌ ಇನಿಂಗ್ಸ್‌: ಶನಿವಾರ ಶತಕ ಸಿಡಿಸಿ ಇಂಗ್ಲೆಂಡ್‌ ಬೌಲರ್‌ಗಳನ್ನು ಹೈರಾಣಾಗಿಸಿದ್ದ ವಾಟ್ಲಿಂಗ್‌, ನಾಲ್ಕನೇ ದಿನದಾಟದಲ್ಲೂ ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಅವರು 11 ಗಂಟೆಗೂ ಹೆಚ್ಚು ಕಾಲ ಕ್ರೀಸ್‌ನಲ್ಲಿದ್ದರು.

ಜೋ ರೂಟ್‌ ಹಾಕಿದ 197ನೇ ಓವರ್‌ನ ಎರಡನೇ ಎಸೆತವನ್ನು ಬ್ಯಾಕ್ವರ್ಡ್‌ ಸ್ಕ್ವೇರ್‌ ಲೆಗ್‌ನತ್ತ ಬಾರಿಸಿ ಒಂದು ರನ್‌ ಕಲೆಹಾಕಿದ ವಾಟ್ಲಿಂಗ್‌, ದ್ವಿಶತಕ ಪೂರೈಸಿದರು. ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮೊದಲ ವಿಕೆಟ್‌ ಕೀಪರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ 10ನೇ ವಿಕೆಟ್‌ ಕೀಪರ್‌ ಎಂಬ ಶ್ರೇಯವೂ ಅವರದ್ದಾಯಿತು.

ಟೆಸ್ಟ್‌ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಅತೀ ಹೆಚ್ಚು ಎಸೆತಗಳನ್ನು (473) ಎದುರಿಸಿದ ಎರಡನೇ ವಿಕೆಟ್‌ ಕೀಪರ್‌ ಎಂಬ ಹಿರಿಮೆಗೂ ಭಾಜನರಾದರು. ಆದರೆ ಶ್ರೀಲಂಕಾದ ಬ್ರೆಂಡನ್‌ ಕುರುಪ್ಪು ಹೆಸರಿನಲ್ಲಿರುವ ದಾಖಲೆ ಮೀರಿನಿಲ್ಲಲು ವಾಟ್ಲಿಂಗ್‌ಗೆ ಆಗಲಿಲ್ಲ. 1987ರಲ್ಲಿ ಕೊಲಂಬೊದಲ್ಲಿ ನಡೆದಿದ್ದ ನ್ಯೂಜಿಲೆಂಡ್‌ ಎದುರಿನ ಟೆಸ್ಟ್‌ನಲ್ಲಿ ಕುರುಪ್ಪು 548 ಎಸೆತಗಳನ್ನು ಎದುರಿಸಿದ್ದರು.

ದಾಖಲೆಯ ಜೊತೆಯಾಟ: ವಾಟ್ಲಿಂಗ್ ಮತ್ತು ಸ್ಯಾಂಟನರ್‌ ಅವರು ಏಳನೇ ವಿಕೆಟ್‌ ಪಾಲುದಾರಿಕೆಯಲ್ಲಿ 261ರನ್‌ಗಳನ್ನು ಸೇರಿಸಿ ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಮೊದಲ ಜೋಡಿ ಎಂಬ ಹಿರಿಮೆಗೂ ಪಾತ್ರರಾದರು. ಇದಕ್ಕಾಗಿ ಇವರು 500 ಎಸೆತಗಳನ್ನು ಎದುರಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌; ಮೊದಲ ಇನಿಂಗ್ಸ್‌: 124 ಓವರ್‌ಗಳಲ್ಲಿ 353 ಮತ್ತು 27.4 ಓವರ್‌ಗಳಲ್ಲಿ 3 ವಿಕೆಟ್‌ಗೆ 55 (ರೋರಿ ಬರ್ನ್ಸ್‌ 31, ಡಾಮಿನಿಕ್‌ ಸಿಬ್ಲೆ 12; ಮಿಷೆಲ್‌ ಸ್ಯಾಂಟನರ್‌ 6ಕ್ಕೆ3).

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌; 201 ಓವರ್‌ಗಳಲ್ಲಿ 9 ವಿಕೆಟ್‌ಗೆ 615 ಡಿಕ್ಲೇರ್ಡ್‌ (ಬಿ.ಜೆ. ವಾಟ್ಲಿಂಗ್‌ 205, ಮಿಷೆಲ್‌ ಸ್ಯಾಂಟನರ್‌ 126, ನೀಲ್‌ ವಾಗ್ನರ್‌ ಔಟಾಗದೆ 11; ಜೋಫ್ರಾ ಆರ್ಚರ್‌ 107ಕ್ಕೆ1, ಸ್ಯಾಮ್‌ ಕರನ್‌ 119ಕ್ಕೆ3, ಜಾಕ್‌ ಲೀಚ್‌ 153ಕ್ಕೆ2, ಬೆನ್‌ ಸ್ಟೋಕ್ಸ್‌ 74ಕ್ಕೆ2, ಜೋ ರೂಟ್‌ 67ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.