
ಪಾಕಿಸ್ತಾನ ತಂಡ
ರಾಯಿಟರ್ಸ್ ಚಿತ್ರ
ಡಲ್ಲಾಸ್: ಅಮೆರಿಕ ವಿರುದ್ಧ ಗುರುವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಆಟವಾಡಿದ ರೀತಿಗೆ ಪಾಕ್‌ನ ಮಾಜಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಪಾಕಿಸ್ತಾನದ ಮಾಜಿ ಆಟಗಾರರಾದ ಯೂನಿಸ್ ಖಾನ್, ವಾಸಿಂ ಅಕ್ರಮ್, ಜಾವೇದ್ ಮಿಯಾಂದಾದ, ಮೊಸಿನ್ ಖಾನ್ ಸೇರಿದಂತೆ ಕ್ರಿಕೆಟ್ ವಿಶ್ಲೇಷಕ ಓಮರ್ ಅಲವಿ ಅವರ ಟೀಕೆ ಮಾಡಿದ್ದಾರೆ.
ಶೋಚನೀಯ ಆಟವಾಡಿದ ಪಾಕಿಸ್ತಾನ ತಂಡವನ್ನು ಮಾಜಿ ವೇಗಿ ವಾಸಿಂ ಅಕ್ರಮ್ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಬರ್ ಅಜಂ ಬಳಗಕ್ಕೆ ನಾಕೌಟ್ ಹಾದಿ ಕಠಿಣವಾಗಲಿದೆ ಎಂದೂ ಹೇಳಿದ್ದಾರೆ.
‘ಪಾಕಿಸ್ತಾನದ್ದು ನಿರಾಶಾದಾಯಕ ಪ್ರದರ್ಶನ. ಸೋಲು– ಗೆಲುವು ಆಟದ ಭಾಗ. ಆದರೆ ಕೊನೆಯ ಎಸೆತದವರೆಗೆ ಹೋರಾಟ ನೀಡಬೇಕಿತ್ತು. ಪಾಕಿಸ್ತಾನ ಕ್ರಿಕೆಟ್‌ಗೆ ಇದು ಕೆಟ್ಟ ದಿನ’ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ಪಾಕ್ ತಂಡದ ಹಾದಿ ಇನ್ನು ಮುಂದೆ ಕಠಿಣವಾಗಲಿದೆ. ಆ ತಂಡವು ಭಾರತ ವಿರುದ್ಧ (ಜೂ. 9) ಆಡಬೇಕಾಗಿದೆ. ನಂತರ ಇನ್ನೆರಡು ಉತ್ತಮ ತಂಡಗಳ (ಐರ್ಲೆಂಡ್, ಕೆನಡ) ಜೊತೆಯೂ ಸೆಣಸಬೇಕಿದೆ ಎಂದರು.
ಮಾಜಿ ನಾಯಕ ಯೂನಿಸ್ ಖಾನ್ ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಹಲವು ತಪ್ಪುಗಳನ್ನು ಮಾಡಿತು. ಹಾಗೇ ಸೂಪರ್ ಓವರ್‌ನಲ್ಲಿ ಫಕರ್ ಜಮಾನ್ ಅವರನ್ನು ಆಡಿಸಬೇಕಿತ್ತು ಎಂದು ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಭವಿಷ್ಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್‌ಗೂ ಮೊದಲು ಪಾಕಿಸ್ತಾನ ತಂಡವು ಅಫ್ಗಾನಿಸ್ತಾನ, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳ ವಿರುದ್ಧ ಸೋತಿದೆ. ಈಗ ಅಮೆರಿಕ ವಿರುದ್ಧ ಸಹ ಸೋತಿದೆ. ಈ ಪಂದ್ಯವನ್ನು ನೋಡಿದರೆ ನಮ್ಮ ಆಟಗಾರರಲ್ಲಿ ಹೋರಾಟದ ಮನೋಭಾವ ಎಲ್ಲಿದೆ? ಎಂದು ಕ್ರಿಕೆಟ್ ವಿಶ್ಲೇಷಕ ಒಮೈರ್ ಅಲವಿ ಪ್ರಶ್ನೆ ಮಾಡಿದ್ದಾರೆ.
ಅಮೆರಿಕ ವಿರುದ್ಧ ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ಬ್ಯಾಟಿಂಗ್‌ನಲ್ಲೂ ಪಾಕಿಸ್ತಾನ ಲಯ ಕಂಡುಕೊಳ್ಳುಬೇಕಿದೆ ಎಂದರು. ಮುಂದಿನ ಪಂದ್ಯಗಳಲ್ಲಿ ಫೀಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ ವಿಭಾಗದಲ್ಲಿ ನಾವು ಪುಟಿದೇಳಬೇಕಿದೆ ಎಂದು ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.