ADVERTISEMENT

ಟಿ20 ವಿಶ್ವಕಪ್ ವಿಜೇತ ಅಂಧರ ಮಹಿಳೆಯರಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 19:55 IST
Last Updated 24 ನವೆಂಬರ್ 2025, 19:55 IST
ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಸೋಮವಾರ ಬೆಂಗಳೂರಿಗೆ ಬಂದ ಭಾರತ ತಂಡದ ಆಟಗಾರ್ತಿಯರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ
ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಸೋಮವಾರ ಬೆಂಗಳೂರಿಗೆ ಬಂದ ಭಾರತ ತಂಡದ ಆಟಗಾರ್ತಿಯರು ಕೇಕ್‌ ಕತ್ತರಿಸಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ    

ಬೆಂಗಳೂರು: ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡವು ಸೋಮವಾರ ಶ್ರೀಲಂಕಾದಿಂದ ಬೆಂಗಳೂರಿಗೆ ಬಂದಿಳಿಯಿತು. ವಿಶ್ವವಿಜೇತ ವನಿತೆಯರನ್ನು ಹರ್ಷೋದ್ಗಾರದ ನಡುವೆ ಆರತಿ ಬೆಳಗಿ, ತಿಲಕ ಹಚ್ಚಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. 

ಕೊಲಂಬೊದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ನೇಪಾಳ ತಂಡವನ್ನು ಮಣಿಸಿ ಚಾರಿತ್ರಿಕ ಸಾಧನೆ ಮೆರೆದಿತ್ತು. 16 ಆಟಗಾರ್ತಿಯರ ತಂಡದಲ್ಲಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದರು. ತುಮಕೂರಿನ ದೀಪಿಕಾ ಟಿ.ಸಿ. (ನಾಯಕಿ), ಕಾವ್ಯಾ ಎನ್‌.ಆರ್‌, ಶಿವಮೊಗ್ಗದ ರಿಪ್ಪನ್‌ಪೇಟೆಯ ಕಾವ್ಯಾ ವಿ. ಅವರು ತಂಡದಲ್ಲಿದ್ದರು. 

ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಅಧ್ಯಕ್ಷ ಮಹಾಂತೇಶ ಜಿ. ಕಿವಡಸಣ್ಣವರ ಅವರ ನೇತೃತ್ವದಲ್ಲಿ ತಂಡವು ಚೆನ್ನೈ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಎರಡೂ ವಿಮಾನ ನಿಲ್ದಾಣಗಳಲ್ಲಿ ಚಾಂಪಿಯನ್ನರಿಗೆ ಅಧಿಕಾರಿಗಳು ಮತ್ತು ಅಭಿಮಾನಿಗಳಿಂದ ಭಾವವನಾತ್ಮಕ ಸ್ವಾಗತ ದೊರೆಯಿತು. 

ADVERTISEMENT

‘ಭಾರತದ ಆತಿಥ್ಯದಲ್ಲೇ ನಡೆದ ವಿಶ್ವಕಪ್ ಗೆಲ್ಲುವುದು ತಂಡದ ಗುರಿಯಾಗಿತ್ತು. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸಿದ್ದೆವು. ಒಂದೇ ಕುಟುಂಬದ ಸದಸ್ಯರಂತೆ ಆಡಿ, ಏಳೂ ಪಂದ್ಯಗಳನ್ನು ಗೆದ್ದು ನಮ್ಮ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿದ್ದೇವೆ. ನಾವು ಜೀವನದಲ್ಲಿ ಎದುರಿಸಿದ ಸವಾಲುಗಳು, ಅವಮಾನಗಳಿಗೆ ಈ ಮೂಲಕ ಉತ್ತರಿಸಿದ್ದೇವೆ’ ಎನ್ನುತ್ತಾ ದೀಪಿಕಾ ಅವರು ಮಾಧ್ಯಮ ಸಂವಾದದಲ್ಲಿ ಭಾವುಕರಾದರು.

‘ತಂಡದಲ್ಲಿರುವ ಬಹುತೇಕ ಆಟಗಾರ್ತಿಯರು ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೆಲವರ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ವಾರವಿದೆ. ನಮಗೆ ಅನುಕಂಪಕ್ಕಿಂತ ಅವಕಾಶ ಬೇಕು. ಸ್ವಾವಲಂಬಿ ಬದುಕು ನಡೆಸಲು ಸರ್ಕಾರದಿಂದ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಹೇಳಿದರು.

‘ತಂಡವು ಟೂರ್ನಿಯಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದೆ. ತಂಡದಲ್ಲಿರುವ ಆಟಗಾರ್ತಿಯರು ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದಾರೆ. ದೇಶವನ್ನು ಪ್ರತಿನಿಧಿಸಿ ಗೆದ್ದಿರುವ ತಂಡಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸೂಕ್ತ ಗೌರವ ಸಿಗುವ ನಿರೀಕ್ಷೆಯಿದೆ’ ಎಂದು ಸಮರ್ಥನಂ ಟ್ರಸ್ಟ್‌ ಅಧ್ಯಕ್ಷರೂ ಆಗಿರುವ ಮಹಾಂತೇಶ್ ತಿಳಿಸಿದರು.

‘ಭಾರತ ತಂಡವನ್ನು ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಜೆ ಕೇಂದ್ರ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಈ ವೇಳೆಯಲ್ಲಿ ಪ್ರತ್ಯೇಕ ಕ್ರೀಡಾಂಗಣ, ನಗದು ಪುರಸ್ಕಾರ, ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ಬಹುಮಾನ ಘೋಷಣೆ: ವಿಶ್ವಕಪ್‌ ಗೆದ್ದ ತಂಡದ ಆಟಗಾರ್ತಿಯರಿಗೆ ಚಿಂಟೆಲ್ಸ್ ಗ್ರೂಪ್ ತಲಾ ₹1 ಲಕ್ಷ ಮತ್ತು ಚಿಪ್‌ಲಾಜಿಕ್ ಟೆಕ್‌ ಸಂಸ್ಥೆಯು ತಲಾ ₹ 25 ಸಾವಿರ ಬಹುಮಾನ ಘೋಷಿಸಿವೆ. 

=

ನಮ್ಮನ್ನು ಪ್ರೋತ್ಸಾಹಿಸಿದ ಸಮರ್ಥನಂ ಟ್ರಸ್ಟ್‌ ಮತ್ತು ದೇಶವನ್ನು ಕಾಯುವ ಯೋಧರಿಗೆ ಈ ಗೆಲುವನ್ನು ಅರ್ಪಿಸುತ್ತೇವೆ.

 ದೀಪಿಕಾ ಟಿ.ಸಿ., ಭಾರತ ತಂಡದ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.