ADVERTISEMENT

ಮುಂಬೈ ಆಟಗಾರರಿಗೆ ಬಂಪರ್‌; ಬಿಸಿಸಿಐನಷ್ಟೇ ಪಂದ್ಯ ಶುಲ್ಕ ನೀಡಲಿರುವ ಎಂಸಿಎ

ಪಿಟಿಐ
Published 23 ಮಾರ್ಚ್ 2024, 16:37 IST
Last Updated 23 ಮಾರ್ಚ್ 2024, 16:37 IST
   

ಮುಂಬೈ: ಮುಂಬರುವ 2024–25 ಸಾಲಿನಿಂದ ಮುಂಬೈ ತಂಡದ ಸೀನಿಯರ್ ಆಟಗಾರರಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ನೀಡುವಷ್ಟೇ ಪಂದ್ಯ ಶುಲ್ಕವನ್ನು ಅಲ್ಲಿನ ಕ್ರಿಕೆಟ್‌ ಸಂಸ್ಥೆಯೂ ನೀಡಲಿದೆ. ಈ ವಿಷಯವನ್ನು ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಅಧ್ಯಕ್ಷ ಅಮೋಲ್‌ ಕಾಳೆ ಶನಿವಾರ ತಿಳಿಸಿದ್ದಾರೆ.

ರಣಜಿ ಟ್ರೋಫಿ ಮಹತ್ವವನ್ನು ಉತ್ತೇಜಿಸುವ ಕ್ರಮವಾಗಿ ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆ ವ್ಯಾಪ್ತಿಯಲ್ಲಿ ರೆಡ್‌ ಬಾಲ್ ಕ್ರಿಕೆಟ್‌ ಬೆಳವಣಿಗೆಗೆ ನೆರವಾಗುವುದು ಈ ಕ್ರಮದ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಬಿಸಿಸಿಐ ನೀಡುವಷ್ಟೆ ಪಂದ್ಯ ಸಂಭಾವನೆಯನ್ನು ನೀಡುವ ಪ್ರಸ್ತಾವವನ್ನು ರಾಜ್ಯ ಸಂಸ್ಥೆಯ ಅಪೆಕ್ಸ್ ಕೌನ್ಸಿಲ್‌ ಸಭೆಯಲ್ಲಿ ಅಮೋಲ್ ಕಾಳೆ ಮುಂದಿಟ್ಟರು. ಇದಕ್ಕೆ ಸಭೆ ಸಮ್ಮತಿ ಸೂಚಿಸಿತು.

ADVERTISEMENT

‘ಆಟಗಾರರು ವಿಶೇಷವಾಗಿ ರಣಜಿ ಆಡುವವರು ಹೆಚ್ಚು ಸಂಪಾದಿಸಬೇಕು ಎನ್ನುವ ಉದ್ದೇಶದಿಂದ ಸಂಸ್ಥೆಯು ಈ ಹೆಚ್ಚುವರಿ ಹಣ ನೀಡಲು ಮುಂದಾಗಿರುವುದಾಗಿ’ ಕಾಳೆ ತಿಳಿಸಿದ್ದಾರೆ.

ಮುಂಬೈ ಇತ್ತೀಚೆಗೆ 42ನೇ ಬಾರಿ ರಣಜಿ ಟ್ರೋಫಿ ಗೆದ್ದುಕೊಂಡಿತ್ತು. ವಿಜೇತ ತಂಡಕ್ಕೆ ಬಿಸಿಸಿಐ ನೀಡಿದಷ್ಟೇ (₹5 ಕೋಟಿ) ಬಹುಮಾನ ಮೊತ್ತವನ್ನು ಮುಂಬೈ ಕ್ರಿಕೆಟ್‌ ಸಂಸ್ಥೆ ಸಹ ಪ್ರಕಟಿಸಿತ್ತು.

ಬಿಸಿಸಿಐ 2021ರಲ್ಲಿ ಪಂದ್ಯ ಸಂಭಾವನೆ ಪರಿಷ್ಕರಿಸಿದ್ದು, 1 ರಿಂದ 20 ಪ್ರಥಮ ದರ್ಜೆ ಪಂದ್ಯ ಆಡುವ ಆಟಗಾರನಿಗೆ ಪಂದ್ಯ ನಡೆಯುವ ಪ್ರತಿ ದಿನ ₹40,000 ನಿಗದಿಪಡಿಸಿದೆ. ಐದು ದಿನಗಳ ಪಂದ್ಯಕ್ಕೆ ₹2.40 ಲಕ್ಷ ಸಿಗುತ್ತಿದೆ. ಎಂಸಿಎ ನಿರ್ಧಾರದಿಂದ ಮುಂದಿನ ಋತುವಿನಿಂದ ಮುಂಬೈ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಸಿಗುವ ಮೊತ್ತ 4.80 ಲಕ್ಷ ಆಗಲಿದೆ. 21 ರಿಂದ 40 ಪಂದ್ಯ ಆಡುವ ಆಟಗಾರನಿಗೆ ನಿತ್ಯ ₹50,000 ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಆಡುವ ಆಟಗಾರರಿಗೆ ನಿತ್ಯ ₹60,000 ವರೆಗೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.