ADVERTISEMENT

ಬಾರ್ಡರ್‌–ಗಾವಸ್ಕರ್ ಟ್ರೋಫಿ: ದೊಡ್ಡ ‘ಗುರಿ’ ನೀಡುವತ್ತ ಭಾರತದ ಚಿತ್ತ

ಮುಂದುವರಿದ ರಾಹುಲ್ ವೈಫಲ್ಯ, ಪೂಜಾರ ಆಸರೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 3:49 IST
Last Updated 9 ಡಿಸೆಂಬರ್ 2018, 3:49 IST
ರಿಷಭ್ ಪಂತ್
ರಿಷಭ್ ಪಂತ್   

ಅಡಿಲೇಡ್: ಭಾನುವಾರ ಬೆಳಿಗ್ಗೆ ಭಾರತದ ಬ್ಯಾಟ್ಸ್‌ಮನ್‌ಗಳ ಆಟ ನಡೆಯುವುದೋ ಅಥವಾ ಆಸ್ಟ್ರೇಲಿ ಯಾದ ಬೌಲಿಂಗ್ ಪಡೆ ಮೇಲುಗೈ ಸಾಧಿಸುವುದೋ?

ಇಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್‌ನಲ್ಲಿ ಶನಿವಾರ ದಿನ ದಾಟದ ಅಂತ್ಯಕ್ಕೆ ಉಳಿದ ಪ್ರಶ್ನೆಗಳು ಇವು. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿಯಿದೆ. ಆದ್ದರಿಂದ ಸ್ಪಷ್ಟ ಫಲಿತಾಂಶ ಹೊರಹೊಮ್ಮುವುದು ಖಚಿತವಾಗಿದೆ. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಲಭಿಸಿರುವ 15 ರನ್‌ಗಳ ಅಲ್ಪ ಮುನ್ನಡೆಯನ್ನು ಗೆಲು ವಿನ ಸೋಪಾನ ಮಾಡಿಕೊಳ್ಳುವ ಛಲದಲ್ಲಿ ಭಾರತ ತಂಡ ಆಡುತ್ತಿದೆ. ಅದಕ್ಕೆ ಪೂರಕವಾಗಿ 166 ರನ್‌ಗಳ ಮುನ್ನಡೆಯನ್ನೂ ಸಾಧಿಸಿಕೊಂಡಿದೆ. ಎರಡನೇ ಇನಿಂಗ್ಸ್‌ನಲ್ಲಿ 61 ಓವರ್‌ ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿ ಸಿದ್ದು, ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದೆ.

ಆದರೆ, ಬೆಳಿಗ್ಗೆಯ ಅವಧಿಯ ವಾತಾ ವರಣವು ಬೌಲರ್‌ಗಳಿಗೇ ಹೆಚ್ಚು ನೆರವು ನೀಡುತ್ತದೆ. ಈ ಹಂತದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರೆ ಮಾತ್ರ ದೊಡ್ಡ ಗುರಿಯನ್ನು ಆಸ್ಟ್ರೇಲಿಯಾಕ್ಕೆ ಕೊಡಲು ಸಾಧ್ಯ. ಕ್ರೀಸ್‌ನಲ್ಲಿ ಲಂಗರು ಹಾಕಿರುವ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಮೇಲೆ ಈಗ ಹೆಚ್ಚಿನ ನಿರೀಕ್ಷೆ ಇದೆ. ಮೊದಲ ಇನಿಂಗ್ಸ್‌ನಲ್ಲಿ ಪೂಜಾರ ಶತಕ ಬಾರಿಸಿ ತಂಡ ಗೌರವ ಉಳಿಸಿದ್ದು ಕೂಡ ಇದಕ್ಕೆ ಕಾರಣ.

ADVERTISEMENT

ಅಲ್ಪ ಮುನ್ನಡೆ; ರಾಹುಲ್ ಹಿನ್ನಡೆ!

ಚೇತೇಶ್ವರ್ ಪೂಜಾರ ಅವರ ಶತಕದ ಬಲದಿಂದ ಭಾರತವು ಮೊದಲ ಇನಿಂಗ್ಸ್‌ನಲ್ಲಿ 250 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು 235 ರನ್‌ ಗಳಿಸಿ ಆಲೌಟ್‌ ಆಯಿತು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ತಮ್ಮ ಬ್ಯಾಟಿಂಗ್ ವೈಫಲ್ಯ ಎರಡನೇ ಇನಿಂಗ್ಸ್‌ನಲ್ಲಿಯೂ ಮುಂದುವರಿಯಿತು. 44 ರನ್‌ ಗಳಿಸಿದ ಅವರ ಆಟದಲ್ಲಿ ತಾಳ್ಮೆಯ ಕೊರತೆ ಇತ್ತು. ಮೂರು ಆಕರ್ಷಕ ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿದ್ದ ಅವರು 67 ಎಸೆತಗಳನ್ನು ಎದುರಿಸಿದರು. ಆದರೆ 25ನೇ ಓವರ್‌ನಲ್ಲಿ ಹ್ಯಾಜಲ್‌ ವುಡ್ ಎಸೆತವನ್ನು ತಪ್ಪಾಗಿ ಅಂದಾಜಿಸಿ ಆಡಿ ಟೀಮ್‌ ಪೇನ್‌ಗೆ ಕ್ಯಾಚಿತ್ತರು. ಅದಕ್ಕೂ ಸ್ವಲ್ಪ ಹೊತ್ತಿಗೆ ಮುನ್ನವೇ ಮುರಳಿ ವಿಜಯ್ (18; 53ಎಸೆತ) ಔಟಾಗಿ ಮರಳಿದ್ದರು. ಆದ್ದರಿಂದ ರಾಹುಲ್ ಮುಂದೆ ಎಚ್ಚರಿಕೆಯಿಂದ ಆಡಿ ರನ್‌ ಗಳಿಸುವ ಸವಾಲು ಇತ್ತು. ಅದನ್ನು ನಿಭಾಯಿಸುವಲ್ಲಿ ಅವರು ವಿಫಲರಾದರು.

ಇನ್ನೊಂದು ಬದಿಯಲ್ಲಿ ಶಾಂತ ಚಿತ್ತದಿಂದ ಆಡುತ್ತಿದ್ದ ಪೂಜಾರ ಅವ ರೊಂದಿಗೆ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ (34; 104ಎ, 3ಬೌಂ) ತಾಳ್ಮೆಯಿಂದ ಆಡಿದರು. ಇವರಿಬ್ಬರೂ ಮೂರನೇ ವಿಕೆಟ್ ಜೊತೆಯಾಟದಲ್ಲಿ 71 ರನ್‌ ಸೇರಿಸಿದರು. ಸ್ಪಿನ್ನರ್ ನೇಥನ್ ಲಯನ್ ವಿರಾಟ್ ವಿಕೆಟ್ ಗಳಿಸಿ, ಜೊತೆಯಾಟವನ್ನು ಮುರಿದರು. ಪೂಜಾರ ವಿಕೆಟ್‌ ಗಳಿಸುವ ಬೌಲರ್‌ಗಳ ಪ್ರಯತ್ನಗಳು ವಿಫಲವಾದವು. ಆಸ್ಟ್ರೇಲಿಯಾ ಎರಡು ಬಾರಿ ಯುಡಿಆರ್‌ಎಸ್‌ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಪಡೆದಾಗಲೂ ಪೂಜಾರ ನಾಟೌಟ್ ಆಗಿ ಉಳಿದರು.

ಧೋನಿ ದಾಖಲೆ ಸರಿಗಟ್ಟಿದ ಪಂತ್

ಭಾರತ ತಂಡದ ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಆಸ್ಟ್ರೇಲಿಯಾ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು ಆರು ಕ್ಯಾಚ್ ಪಡೆದು ಮಹೇಂದ್ರಸಿಂಗ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು.

2009ರಲ್ಲಿ ಧೋನಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ ಆರು ಕ್ಯಾಚ್ ಪಡೆದಿದ್ದರು.

ಇದೀಗ ಪಂತ್ ಅವರು ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಟಿಮ್ ಪೇನ್, ಮಿಷೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಕ್ಯಾಚ್‌ಗಳನ್ನು ಕಬಳಿಸಿದರು. ಅವರು ಹೋದ ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು. 21 ವರ್ಷದ ಪಂತ್ ಈಗ ಆರನೇ ಟೆಸ್ಟ್ ಆಡುತ್ತಿದ್ದಾರೆ.

ವಿರಾಟ್ ಡ್ಯಾನ್ಸ್‌; ಅನುಷ್ಕಾ ಪ್ರೆಸೆನ್ಸ್!

ಇಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಎರಡೂ ಇನಿಂಗ್ಸ್‌ ಗಳಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಸಫಲರಾಗಿಲ್ಲ. ಆದರೆ ಮೂರನೇ ದಿನದಾಟದಲ್ಲಿ ತಮ್ಮ ನೃತ್ಯದ ಮೂಲಕ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದ್ದಾರೆ. ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅವರು ಕೆಲ ಕ್ಷಣಗಳವರೆಗೆ ತಮ್ಮಷ್ಟಕ್ಕೆ ತಾವೇ ಮೈಕೈ ಕುಲುಕಿ ಡ್ಯಾನ್ಸ್‌ ಮಾಡಿದರು. ಟೆಸ್ಟ್‌ ಆಟದ ಏಕತಾನತೆಯನ್ನು ಹೊಡೆದೊಡಿಸಲು ಅವರು ಈ ರೀತಿ ಮಾಡಿದ್ದಾರೆನ್ನ ಲಾಗಿದೆ. ಇದೀಗ ಅವರ ನೃತ್ಯದ ವಿಡಿಯೋ ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಅಪಾರ ಮೆಚ್ಚುಗೆ ಗಳಿಸುತ್ತಿದೆ. ಅವರ ಪತ್ನಿ ಅನುಷ್ಕಾ ಶರ್ಮಾ ಅವರೂ ಪಂದ್ಯ ವೀಕ್ಷಿಸಿದರು. ಆಟಗಾರರು ತಮ್ಮ ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಕರೆದೊಯ್ಯಲು ಅನುಮತಿ ಇಲ್ಲ. ಆದ್ದರಿಂದ ಅನುಷ್ಕಾ ಅವರು ಭಾರತದಿಂದ ಪ್ರತ್ಯೇಕವಾಗಿ ಆಡಿಲೇಡ್‌ಗೆ ತೆರಳಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.