ಬ್ರಿಸ್ಬೇನ್: ವುಲೂಂಗಾಬಾ ಅಥವಾ ಕ್ರಿಕೆಟ್ ಅಭಿಮಾನಿಗಳಿಗೆ ರೂಢಿಯಾಗಿರುವ ಗಾಬಾ ಬಹುಶಃ ಕೊನೆಯ ಬಾರಿಗೆ ಭಾರತ ತಂಡ ಆಡುತ್ತಿರುವ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.
ಶನಿವಾರ ಇಲ್ಲಿ ಆರಂಭವಾದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ದಿನದಾಟದ ಬಹಳಷ್ಟು ಭಾಗವು ಮಳೆಯಿಂದಾಗಿ ಸ್ಥಗಿತವಾಯಿತು. ಆತಿಥೇಯ ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದ್ದು ಮಾತ್ರ ದಿನದಾಟವಾಗಿತ್ತು. ಒಂದಡೆ ಮಳೆಯ ಆಟ ನಡೆಯುತ್ತಿದ್ದರೆ, ಇನ್ನೊಂದೆಡೆ ಗಾಬಾದ ಇತಿಹಾಸ ಮತ್ತು ಭವಿಷ್ಯದ ಕುರಿತ ಚರ್ಚೆ ಬಿಸಿಯೇರಿತ್ತು. 2032ರ ಒಲಿಂಪಿಕ್ ಕೂಟವು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಆ ಹೊತ್ತಿಗೆ ಅತ್ಯಾಧುನಿಕ ಸೌಲಭ್ಯಗಳಿರುವ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಯೋಜಿಸಿದೆ. ಅದರ ಅಂಗವಾಗಿ ಈ ಐತಿಹಾಸಿಕ ಕ್ರೀಡಾಂಗಣವನ್ನು ಕೆಡವಿ ಹೊಸದನ್ನು ಕಟ್ಟಲು ಯೋಜಿಸಲಾಗಿದೆ.
ಆಸ್ಟ್ರೇಲಿಯಾ ಮಾಧ್ಯಮ ವರದಿಗಳ ಪ್ರಕಾರ, ಸಿ.ಎ ಹಾಗೂ ಗಾಬಾದಲ್ಲಿ ಫುಟ್‌ಬಾಲ್ ಪಂದ್ಯಗಳನ್ನು ಆಯೋಜಿಸುವ ಬ್ರಿಸ್ಬೇನ್ ಲಯನ್ಸ್ ತಂಡದ ಆಡಳಿತವು ಮರುನಿರ್ಮಾಣದ ಕುರಿತು ಕ್ವಿನ್ಸ್‌ಲ್ಯಾಂಡ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. 100 ದಿನಗಳ ಒಲಿಂಪಿಕ್ ತಾಣ ಅವಲೋಕನದ ಅಂಗವಾಗಿ ಈ ಪ್ರಸ್ತಾವ ಸಲ್ಲಿಸಿದೆ.
‘ವಿಶ್ವ ದರ್ಜೆಯ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಇದೊಂದು ಸುವರ್ಣಾವಕಾಶವಾಗಿದೆ. ಇದರಿಂದಾಗಿ ಕ್ವಿನ್ಸ್‌ಲ್ಯಾಂಡ್ ಪ್ರಾಂತ್ಯಕ್ಕೆ ಬಹಳ ದೊಡ್ಡ ಲಾಭವಾಗುತ್ತದೆ ಮತ್ತು ಪಾರಂಪರಿಕ ಮೌಲ್ಯ ಹೆಚ್ಚುತ್ತದೆ’ ಎಂದು ಪ್ರಸ್ತಾವದ ಕುರಿತು ಸಿ.ಎ ನಿರ್ಗಮಿತ ಅಧ್ಯಕ್ಷ ನಿಕ್ ಹಾಕ್ಲೀ ಅವರು ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಎಲ್ಲವೂ ಯೋಜನೆಯಂತೆ ಸಾಗಿದರೆ ವಿಕ್ಟೋರಿಯಾ ಪಾರ್ಕ್‌ನಲ್ಲಿ ನೂತನ ಕ್ರೀಡಾಂಗಣ ತಲೆಯೆತ್ತಲಿದೆ.
‘ಈ ಮೈದಾನದೊಂದಿಗೆ ಹಲವಾರು ನೆನಪುಗಳು ಇವೆ. ಆದರೆ ಕೆಲವು ಅನಾನುಕೂಲಗಳೂ ಇವೆ. ವಾಹನಗಳ ನಿಲುಗಡೆಯೂ ಅದರಲ್ಲೊಂದಾಗಿದೆ’ ಎಂದು ಸ್ಥಳೀಯ ಕ್ರೀಡಾ ಪತ್ರಕರ್ತ ರಾಬರ್ಟ್ ಕ್ರಾಡಿಕ್ ಹೇಳುತ್ತಾರೆ.
‘ಆಸ್ಟ್ರೇಲಿಯಾದ ಟೆಸ್ಟ್ ತಾಣಗಳಲ್ಲಿ ಗಾಬಾಕ್ಕೆ 5ನೇ ಸ್ಥಾನವಿದೆ. ಕ್ರೀಡಾಂಗಣದೊಂದಿಗೆ ನೂರಾರು ನೆನಪುಗಳಿವೆ, ಭಾವನಾತ್ಮಕ ನಂಟು ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕಾಲದೊಂದಿಗೆ ಮುನ್ನಡೆಯುವುದು ಕೂಡ ಅಗತ್ಯ. ವಿಶ್ವದ ವೇಗಕ್ಕನುಗುಣವಾಗಿ ಸಾಗಬೇಕು’ ಎಂದೂ ರಾಬರ್ಟ್ ಹೇಳುತ್ತಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪಂದ್ಯವೊಂದು ಟೈ ಆದ ತಾಣ ಇದಾಗಿದೆ. ಆಗ ಸರ್ ಡಾನ್ ಬ್ರಾಡ್ಮನ್ ಅವರು, ‘ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯದ್ಭುತವಾದ ಫಲಿತಾಂಶ ಇದಾಗಿದೆ’ ಎಂದು ಹೇಳಿದ್ದರು. ಶನಿವಾರ (ಡಿಸೆಂಬರ್ 14) ಟೈ ಟೆಸ್ಟ್ ಮುಗಿದು 64 ವರ್ಷಗಳು ತುಂಬಿತು.
ಆಸ್ಟ್ರೇಲಿಯಾದ ಅಗ್ರಮಾನ್ಯ ಕ್ರೀಡಾಂಗಣದಲ್ಲಿ ಗಾಬಾ ಕೂಡ ಒಂದು. ಆಸ್ಟ್ರೇಲಿಯಾವು ಪ್ರತಿ ಬಾರಿಯೂ ಬಾರ್ಡರ್–ಗಾವಸ್ಕರ್ ಟ್ರೋಫಿಯನ್ನು ಆಯೋಜಿಸಿದಾಗಲೆಲ್ಲ ಸರಣಿಯ ಮೊದಲ ಪಂದ್ಯವನ್ನು ಇಲ್ಲಿ ನಡೆಸುವ ಸಂಪ್ರದಾಯವಿತ್ತು. ಆದರೆ ಈ ಬಾರಿಯ ಸರಣಿಯ ಮೊದಲ ಪಂದ್ಯವನ್ನು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಸಲಾಯಿತು.
ಭಾರತದ ಅಭಿಮಾನಿಗಳಿಗೂ ಈ ಕ್ರೀಡಾಂಗಣದೊಂದಿಗೆ ಭಾವನಾತ್ಮಕ ನಂಟು ಇದೆ. ಪ್ರಮುಖವಾಗಿ 2020–21ರಲ್ಲಿ ಭಾರತ ಇಲ್ಲಿ ಜಯಿಸಿತ್ತು.
1968ರಲ್ಲಿ ಭಾರತ ತಂಡವು 395 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿತ್ತು. ಭಾರತ ತಂಡವು ಜಯದ ಸನಿಹಕ್ಕೆ ಬಂದಿತ್ತು. ಮೋಟಗಾನಹಳ್ಳಿ ಜೈಸಿಂಹ ಶತಕ (101), ರೂಸಿ ಸೂರ್ತಿ (64), ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ (48) ಮತ್ತು ಚಂದು ಬೋರ್ಡೆ (63) ಅವರು ಮಿಂಚಿದ್ದರು. ಅದರಿಂದಾಗಿ ಗೆಲುವಿನ ಭರವಸೆ ಮೂಡಿತ್ತು. ಆದರೆ ತಂಡವು 355 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 39 ರನ್‌ಗಳಿಂದ ಜಯಿಸಿತು.
ಹೈದರಾಬಾದಿನ ಸ್ಟೈಲಿಷ್ ಬ್ಯಾಟರ್ ಜೈಸಿಂಹ ಅವರು ಬ್ರಿಸ್ಬೇನ್‌ಗೆ ಕೊನೆಯ ಕ್ಷಣದಲ್ಲಿ ಬಂದಿಳಿದಿದ್ದರು. ಸ್ಪಿನ್ನರ್ ಬಿ.ಎಸ್. ಚಂದ್ರಶೇಖರ್ ಗಾಯಗೊಂಡಿದ್ದ ಕಾರಣ ಜೈಸಿಂಹ ಅವರನ್ನು ಸೇರ್ಪಡೆ ಮಾಡಲಾಗಿತ್ತು. ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೆ ತೀರಾ ಅಲ್ಪಸಮಯ ಒದಗಿತ್ತು. ಅದರೂ ಮೊದಲ ಇನಿಂಗ್ಸ್‌ನಲ್ಲಿ ಅವರು 74 ಮತ್ತು ಎರಡನೇಯದ್ದರಲ್ಲಿ ಶತಕ ದಾಖಲಿಸಿದ್ದರು.
1977ರ ಡಿಸೆಂಬರ್‌ನಲ್ಲಿ ಸುನಿಲ್ ಗಾವಸ್ಕರ್ (113), ಸೈಯದ್ ಕಿರ್ಮಾನಿ (55) ಮತ್ತು ಬಿಷನ್ ಸಿಂಗ್ ಬೇಡಿ ಅವರ ಛಲದ ಬ್ಯಾಟಿಂಗ್ (26) ಭಾರತೀಯರು ಸದಾಕಾಲ ನೆನಪಿಡುವಂತಹ ದ್ಟು. ಆ ಪಂದ್ಯದಲ್ಲಿ 341 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ 16 ರನ್‌ಗಳಿಂದ ಸೋತಿತ್ತು.
ಪ್ರಸ್ತುತ ಭಾರತ ತಂಡದ ಆಟಗಾರರಿಗೂ ಕೂಡ ಈ ಕ್ರೀಡಾಂಗಣದಲ್ಲಿ ಹಲವು ಸುಂದರ ನೆನಪುಗಳಿವೆ. ಕ್ರೀಡಾಂಗಣ ಬದಲಾದರೂ ನೆನಪುಗಳ ಹಾಗೆಯೇ ಇರುತ್ತವೆ.
ಟಿಕೆಟ್ ಹಣ ಮರಳಿಸಲು ನಿರ್ಧಾರ
ಬ್ರಿಸ್ಬೇನ್: ಮಳೆಯಿಂದಾಗಿ ಮೊದಲ ದಿನದಾಟವು ಸ್ಥಗಿತವಾದ ಕಾರಣಕ್ಕೆ ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಹಿಂದಿರುಗಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಘೋಷಿಸಿದೆ. 15 ಓವರ್‌ಗಳಿಗಿಂತ ಕಡಿಮೆ ಆಟವು ನಡೆದು ಸ್ಥಗಿತವಾದರೆ ಟಿಕೆಟ್ ಹಣ ಮರಳಿಸಬೇಕು ಎಂಬ ನಿಯಮದಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಈ ಪಂದ್ಯದ ಮೊದಲ ದಿನದಾಟದಲ್ಲಿ ಕೇವಲ 13.2 ಓವರ್‌ಗಳಷ್ಟು ಆಟ ಮಾತ್ರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.