ADVERTISEMENT

ಭಾರತದ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ ಜಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 7:05 IST
Last Updated 31 ಜನವರಿ 2019, 7:05 IST
   

ಹ್ಯಾಮಿಲ್ಟನ್: ಗುರುವಾರ ನಡೆದ ಭಾರತ–ನ್ಯೂಜಿಲೆಂಡ್‌ ನಾಲ್ಕನೇ ಏಕದಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿತ್ತು.

ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ದೋನಿ ಅನುಪಸ್ಥಿತಿಯಲ್ಲಿ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಿದರು. ಪ್ರಾರಂಭದಿಂದಲೂ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ನ್ಯೂಜಿಲೆಂಡ್‌ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಲು ತಿಣುಕಾಡಿದರು. ಟ್ರೆಂಟ್‌ ಬೋಲ್ಡ್‌(5/21) ಹಾಗೂಕಾಲಿನ್ ಡಿ ಗ್ರ್ಯಾಂಡ್‌ಹೋಮ್(3/26) ಸ್ವಿಂಗ್‌ ಬೌಲಿಂಗ್‌ಗೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬಹುಬೇಗ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ ಭಾರತ ಕೇವಲ 92 ರನ್‌ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಭಾರತದ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್‌ 14.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿ ಗೆಲುವು ಪಡೆಯಿತು. ನ್ಯೂಜಿಲೆಂಡ್‌ ಆಟದ ಆರಂಭದಲ್ಲಿ ಭುವನೇಶ್ವರ್‌ ಕುಮಾರ್‌ ವಿಕೆಟ್‌ ಪಡೆಯುವ ಮೂಲಕ ರನ್‌ಗಳಿಗೆ ಪ್ರತಿರೋಧ ತೋರಿದರು.ಮಾರ್ಟಿನ್ ಗಪ್ಟಿಲ್(14) ಮತ್ತು ಕೇನ್ ವಿಲಿಯಮ್ಸನ್ (11) ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ,ಹೆನ್ರಿ ನಿಕೊಲ್ಸ್‌(30*) ಮತ್ತು ರಾಸ್ ಟೇಲರ್(37*) 14.4 ಓವರ್‌ಗಳಲ್ಲಿ ಆಟ ಪೂರ್ಣಗೊಳಿಸಿದರು.

ADVERTISEMENT

’ಈ ರೀತಿ ಆಗಬಹುದೆಂದು ಊಹಿಸಿರಲಿಲ್ಲ. ಆದರೆ, ಈ ರೀತಿ ಪಂದ್ಯ ಆಗುತ್ತಿರುತ್ತವೆ...’ ಎಂದು ರೋಹಿತ್‌ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಭಾರತದ ಇಂದು ಗಳಿಸಿದ ಸ್ಕೋರ್‌ ನ್ಯೂಜಿಲೆಂಡ್‌ ವಿರುದ್ಧ ಎರಡನೇ ಅತಿ ಕಡಿಮೆ ಹಾಗೂ ಒಟ್ಟಾರೆ ಕಡಿಮೆ ಸ್ಕೋರ್‌ ಪೈಕಿ ಏಳನೆಯದು. 2000ರಲ್ಲಿ ಶಾರ್ಜಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 54 ರನ್‌ ಗಳಿಸಿದ್ದು, ತಂಡದ ಈವರೆಗಿನ ಅತ್ಯಲ್ಪ ಸ್ಕೋರ್‌ ಆಗಿದೆ.

ಒಂದು ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿದ್ದ ಶಿಖರ್‌ ಧವನ್‌(13), ಆರನೇ ಓವರ್‌ನಲ್ಲಿ ನಿರ್ಗಮಿಸಿದರು. 200ನೇ ಪಂದ್ಯ ಆಡುತ್ತಿದ್ದ ರೋಹಿತ್‌ ಶರ್ಮಾ ಮುಂದಿನ ಓವರ್‌ನಲ್ಲಿ ಬೌಲ್ಟ್‌ಗೆ ವಿಕೆಟ್‌ ಒಪ್ಪಿಸಿದರು. ಅಲ್ಲಿಂದ ಗ್ರ್ಯಾಂಡ್‌ಹೋಮ್ ಸಹ ತಮ್ಮ ಸ್ವಿಂಗ್‌ ಮೋಡಿ ಪ್ರಾರಂಭಿಸಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಭಾರತದ ಪರ ಎರಡು ಅಂಕಿಗಳ ಸ್ಕೋರ್‌ ಗಳಿಸಿವರು:ಶಿಖರ್ ಧವನ್ 13, ಹಾರ್ದಿಕ್ ಪಾಂಡ್ಯ 16, ಕುಲದೀಪ್ ಯಾದವ್ 15, ಯಜುವೇಂದ್ರ ಚಾಹಲ್ 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.