ADVERTISEMENT

ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯಾ ತಂಡದ ಪರ ಆಡಲಿದ್ದಾನೆ 7ರ ಹರೆಯದ ಬಾಲಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 12:45 IST
Last Updated 23 ಡಿಸೆಂಬರ್ 2018, 12:45 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್   

ಮೆಲ್ಬರ್ನ್‌: ಡಿಸೆಂಬರ್ 26ರಂದು ಆರಂಭವಾಗಲಿರುವ 'ಬಾಕ್ಸಿಂಗ್ ಡೇ' ಟೆಸ್ಟ್ ಪಂದ್ಯದಲ್ಲಿ ಏಳು ವರ್ಷದ ಆರ್ಶಿ ಶಿಲ್ಲರ್ ಎಂಬ ಬಾಲಕ ಆಸ್ಟ್ರೇಲಿಯಾತಂಡದ ಪರವಾಗಿ ಆಡಲಿದ್ದಾನೆ.ಲೆಗ್ ಸ್ಪಿನ್ನರ್ ಆಗಿರುವ ಆರ್ಶಿ, ಆಸ್ಟ್ರೇಲಿಯಾ ತಂಡದಲ್ಲಿ 15ನೇ ಸದಸ್ಯನಾಗಿದ್ದಾನೆ.
ಅಡಿಲೇಡ್‍ನಲ್ಲಿ ನಡೆದಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಶಿಲ್ಲರ್ ಆಸ್ಟ್ರೇಲಿಯಾ ತಂಡದ ಸದಸ್ಯರೊಂದಿಗೆ ತಾಲೀಮು ನಡೆಸಿದ್ದರು, ಶಿಲ್ಲರ್ ಈಗ ಆಸ್ಟ್ರೇಲಿಯಾ ತಂಡದ ಪರವಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ಸುದ್ದಿಯನ್ನು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನೆ ದೃಢೀಕರಿಸಿದ್ದಾರೆ ಎಂದು ಟೈಮ್ಸ್ ನೌ ನ್ಯೂಸ್ ಡಾಟ್ ಕಾಂ ವರದಿ ಮಾಡಿದೆ.

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ತಂಡ ಯುಎಇಯಲ್ಲಿ ಪಾಕಿಸ್ತಾನದ ವಿರುದ್ಧ ಆಟವಾಡುತ್ತಿದ್ದಾಗ ಶಿಲ್ಲರ್ ಅವರನ್ನು ತಂಡಕ್ಕೆ ಸೇರಿಸಿರುವ ವಿಷಯ ತಿಳಿಸಿತ್ತು.ಇದೀಗ ತಂಡಕ್ಕೆ ಸೇರ್ಪಡೆಯಾಗಿರುವ ಶಿಲ್ಲರ್ ತಾನು ಭಾರತ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸುತ್ತೇನೆ ಎಂದು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್‌ ಅವರಲ್ಲಿ ಹೇಳಿದ್ದಾರೆ. ಏತನ್ಮಧ್ಯೆ, Cricket.com.au ಜತೆ ನಡೆಸಿದ ಸಂವಾದದಲ್ಲಿ ತನಗೆ ಆಸ್ಟ್ರೇಲಿಯಾ ತಂಡದ ನಾಯಕನಾಗಬೇಕೆಂಬ ಆಸೆ ಇದೆ ಎಂದು ಶಿಲ್ಲರ್ ತಿಳಿಸಿದ್ದನು.

ಯಾರು ಈ ಬಾಲಕ?
ಕ್ರಿಕೆಟ್ ಎಂದರೆ ಈ ಹುಡುಗನಿಗೆ ಪಂಚಪ್ರಾಣ.ಮೂರು ತಿಂಗಳ ಮಗುವಾಗಿದ್ದಾಗ ಈತನಿಗೆ ಹೃದಯ ಸಂಬಂಧಿ ಕಾಯಿಲೆ ಬಂದಿತ್ತು. ಓಪನ್ ಹಾರ್ಟ್ ಸರ್ಜರಿ ಸೇರಿದಂತೆ 13 ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಈ ಬಾಲಕ ಶನಿವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ. ಶಿಲ್ಲರ್‌ನ ಕ್ರಿಕೆಟ್ ಹುಚ್ಚುನೋಡಿ ಆಸ್ಟ್ರೇಲಿಯಾದ ಕೋಚ್ ಆತನ ಹೆತ್ತವರನ್ನು ಭೇಟಿ ಮಾಡಿದ್ದರು.ಶೇನ್ ವಾರ್ನ್ ಅವರ ಕಟ್ಟಾ ಅಭಿಮಾನಿಯಾಗಿರುವ ಈತ ಆಸ್ಟ್ರೇಲಿಯಾ ತಂಡದ ನಾಯಕನಾಗಬೇಕೆಂಬ ಆಸೆಯನ್ನು ತಂಡದ ಕೋಚ್‌‍ಗೆ ಹೇಳಿದ್ದನು.ಆ ಆಸೆಯನ್ನು ಪೂರೈಸಿದ ಕ್ರಿಕೆಟ್ ತಂಡ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಶಿಲ್ಲರ್‌ನ್ನು ತಂಡದ ಉಪ ನಾಯಕನನ್ನಾಗಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.