ADVERTISEMENT

ವಿರಾಟ್ ಈಗ ಮೊದಲಿಗಿಂತಲೂ ಬಲಶಾಲಿ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಕಂಡಿಷನಿಂಗ್ ಕೋಚ್ ಶಂಕರ್ ಬಸು ಮೆಚ್ಚುಗೆ

ಪಿಟಿಐ
Published 6 ಸೆಪ್ಟೆಂಬರ್ 2020, 11:20 IST
Last Updated 6 ಸೆಪ್ಟೆಂಬರ್ 2020, 11:20 IST
ವಿರಾಟ್ ಕೊಹ್ಲಿ ಮತ್ತು ಶಂಕರ್ ಬಸು
ವಿರಾಟ್ ಕೊಹ್ಲಿ ಮತ್ತು ಶಂಕರ್ ಬಸು   

ನವದೆಹಲಿ: ವಿರಾಟ್ ಕೊಹ್ಲಿ ಅವರು ಹಿಂದೆಂದಿಗಿಂತಲೂ ಈಗ ಹೆಚ್ಚು ಫಿಟ್‌ನೆಸ್‌ ಆಗಿದ್ದಾರೆ. ಲಾಕ್‌ಡೌನ್‌ನಿಂದ ಲಭಿಸಿದ ಬಿಡುವಿನಲ್ಲಿ ತಮ್ಮ ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಂಡಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟ್ರೆಂಥ್ ಮತ್ತು ಕಂಡಿಷನಿಂಗ್ ತರಬೇತುದಾರ ಶಂಕರ್ ಬಸು ಹೇಳಿದ್ದಾರೆ.

ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಂಭವಾದ ನಂತರ ವಿರಾಟ್ ಮುಂಬೈನ ತಮ್ಮ ಮನೆಯಲ್ಲಿ ಸುಮಾರು ಐದು ತಿಂಗಳುಗಳ ಕಾಲ ಕುಟುಂಬದೊಂದಿಗೆ ಇದ್ದರು. ಈ ಅವಧಿಯಲ್ಲಿ ಅವರು ಹೆಚ್ಚು ಕ್ರಿಕೆಟ್ ತಾಲೀಮು ನಡೆಸಿರಲಿಲ್ಲ. ಆದರೆ ತಮ್ಮ ಮನೆಯ ಜಿಮ್ನಾಷಿಯಂನಲ್ಲಿ ನಿಯಮಿತ ವ್ಯಾಯಾಮಗಳನ್ನು ಮಾಡುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಇದೀಗ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ ಟೂರ್ನಿಯಲ್ಲಿ ಆಡಲು ತೆರಳಿರುವ ಅವರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಅವರ ಅಭ್ಯಾಸ ಮತ್ತು ಫಿಟ್‌ನೆಸ್‌ ಮಟ್ಟವನ್ನು ಪರೀಕ್ಷಿಸಿರುವ ಶಂಕರ್, ’ಕೊಹ್ಲಿ ಅವರ ದೈಹಿಕ ಚಲನೆಯು ಮೊದಲಿನ ಮಟ್ಟದಲ್ಲಿಯೇ ಇದೆ. ಫಿಟ್‌ನೆಸ್‌ ಮಟ್ಟವು ಮತ್ತಷ್ಟು ಉತ್ತಮಗೊಂಡಿದೆ. ದೇಹದ ನೋವು ಮತ್ತು ಗಾಯಗಳೆಲ್ಲವೂ ಶಮನಗೊಂಡಿರುವ ಪರಿಣಾಮ ಅದು. ದೀರ್ಘ ವಿಶ್ರಾಂತಿಯಿಂದಾಗಿ ಅವರಿಗೆ ಹೆಚ್ಚು ಲಾಭವಾಗಿದೆ‘ ಎಂದಿದ್ದಾರೆ.

ADVERTISEMENT

2015 ರಿಂದ 2019ರವರೆಗೆ ಶಂಕರ್ ಬಸು ಅವರು ಭಾರತ ಕ್ರಿಕೆಟ್ ತಂಡದ ಟ್ರೇನರ್ ಕೂಡ ಆಗಿದ್ದರು. ಅದರಿಂದಾಗಿ ವಿರಾಟ್ ಸೇರಿದಂತೆ ಭಾರತದ ಪ್ರಮುಖ ಕ್ರಿಕೆಟಿಗರ ಫಿಟ್‌ನೆಸ್‌ ಕುರಿತು ಸಮಗ್ರ ಮಾಹಿತಿಯನ್ನು ಅವರು ಹೊಂದಿದ್ದಾರೆ.

’ಲಾಕ್‌ಡೌನ್ ಸಂದರ್ಭದಲ್ಲಿ ವಿರಾಟ್ ಅವರು ಯೋಜನಾಬದ್ಧ ಮತ್ತು ಶಿಸ್ತಿನ ವ್ಯಾಯಮ ಮತ್ತು ಆಹಾರ ಸೇವನೆ ನಿಯಮಗಳನ್ನು ಪಾಲಿಸಿದ್ದಾರೆ. ನಿಗದಿಯ ಸಮಯಕ್ಕೆ ಊಟ, ಓಟಗಳನ್ನು ತಪ್ಪಿಸಿಲ್ಲ. ಟ್ರೆಡ್‌ಮಿಲ್‌ ಓಟಕ್ಕಾಗಿಯೂ ಬಹಳಷ್ಟು ಸಮಯವನ್ನು ವಿನಿಯೋಗಿಸಿದ್ದಾರೆ. ದೇಹದ ವೇಗ ಮತ್ತು ಮಾಂಸಖಂಡಗಳ ಬಲವರ್ಧನೆಗೆ ಅವರು ಪ್ರಾಶಸ್ತ್ಯ ನೀಡಿದ್ದಾರೆ‘ ಎಂದು ಶಂಕರ್ ವಿವರಿಸಿದರು.

’ಕೆಲವು ಕ್ಲಿಷ್ಟಕರ ವ್ಯಾಯಾಮಗಳನ್ನು ಆಟಗಾರರು ಮಾಡುವ ರೀತಿಯಲ್ಲಿಯೇ ಅವರ ಫಿಟ್‌ನೆಸ್‌ ಅಳೆದುಬಿಡಬಹುದು. ಅಂತಹ ಕಠಿಣ ವ್ಯಾಯಮಗಳನ್ನು ನಿರಂತರವಾಗಿ ಅಭ್ಯಾಸ ಮಾಡಿದ್ದರಷ್ಟೆ ಸುಲಭವಾಗಿ ಒಲಿಯುತ್ತವೆ. ಜೊತೆಗೆ ದೇಹದ ಸಾಮರ್ಥ್ಯ ವೃದ್ಧಿಸುತ್ತವೆ. ಕೋಚ್‌ಗಳಿಗೆ ಅದು ಬಹಳ ಬೇಗ ತಿಳಿಯುತ್ತದೆ. ಅದರ ಆಧಾರದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.