ADVERTISEMENT

ಬ್ರಿಸ್ಬೆನ್‌ ಪಂದ್ಯದ ಆಯೋಜನೆ ಅನುಮಾನ?

ಪಿಟಿಐ
Published 3 ಜನವರಿ 2021, 15:37 IST
Last Updated 3 ಜನವರಿ 2021, 15:37 IST
ಡೇವಿಡ್ ವಾರ್ನರ್  ಮತ್ತು ಮ್ಯಾಥ್ಯೂ ವೇಡ್
ಡೇವಿಡ್ ವಾರ್ನರ್  ಮತ್ತು ಮ್ಯಾಥ್ಯೂ ವೇಡ್   

ನವದೆಹಲಿ: ಬಾರ್ಡರ್ ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯ ನಡೆಯಲಿರುವ ಬ್ರಿಸ್ಬೇನ್‌ ರಾಜ್ಯದ ಕೋವಿಡ್ ತಡೆ ನಿಯಮಗಳಿಗೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ಅದರ ಬೆನ್ನಲ್ಲೇ ತನ್ನ ಪಟ್ಟು ಸಡಿಲಿಸಲು ಕ್ವಿನ್ಸ್‌ಲ್ಯಾಂಡ್ ಸರ್ಕಾರವು ಒಪ್ಪದ ಕಾರಣ ಪಂದ್ಯದ ಆಯೋಜನೆ ಅನುಮಾನವಾಗಿದೆ.

ಜನವರಿ 15ರಿಂದ ನಾಲ್ಕನೇ ಪಂದ್ಯ ನಡೆಯಲಿದೆ. ತಂಡವು ಏಳರಿಂದ 11ರವರೆಗೆ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಆಡಲಿದೆ. ಬ್ರಿಸ್ಟೆನ್ ಇರುವುದು ಕ್ವಿನ್ಸ್‌ಲ್ಯಾಂಡ್‌ನಲ್ಲಿ. ಸಿಡ್ನಿಯು ನ್ಯೂಸೌತ್‌ ವೇಲ್ಸ್‌ ರಾಜ್ಯದಲ್ಲಿದೆ.

ಕ್ವಿನ್ಸ್‌ಲ್ಯಾಂಡ್ ರಾಜ್ಯ ಸರ್ಕಾರವು ಬೇರೆ ರಾಜ್ಯಗಳಿಂದ ಬರುವವರು ಕಡ್ಡಾಯ ಕ್ವಾರಂಟೈನ್ ಪಾಲಿಸಬೇಕು ಎಂಬ ನಿಯಮ ಮಾಡಿದೆ. ಆದ್ದರಿಂದ ಭಾರತ ತಂಡಕ್ಕೂ ಇದು (ಹೋಟೆಲ್–ಕ್ರೀಡಾಂಗಣ–ಹೋಟೆಲ್) ಈ ನಿಯಮ ಅನ್ವಯವಾಗಲಿದೆ.

ADVERTISEMENT

ಆದರೆ, ಸರಣಿಗೂ ಮುನ್ನ 14 ದಿನಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಪಾಲಿಸಲಾಗಿದೆ. ಈಗ ಮತ್ತೆ ಅಗತ್ಯವಿಲ್ಲ ಎಂಬುದು ಭಾರತದ ನಿಲುವಾಗಿದೆ.

’ಇದು ಗೊಂದಲಮಯ ಸ್ಥಿತಿಯಾಗಿದೆ. ಇನ್ನೂ ಕೆಲವು ದಿನ ಕಾದು ನೋಡೋಣ‘ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

ಒಂದೊಮ್ಮೆ ಬ್ರಿಸ್ಬೆನ್‌ನಲ್ಲಿ ಪಂದ್ಯ ರದ್ದಾದರೆ ಸಿಡ್ನಿಯಲ್ಲಿಯೇ ನಡೆಸುವ ಸಾಧ್ಯತೆ ಎಂದೂ ಹೇಳಲಾಗುತ್ತಿದೆ.

ಗಾಬಾದಲ್ಲಿಯೇ ನಡೆಯಲಿ: ವೇಡ್

ಸಿಡ್ನಿಯಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನೂ ಆಯೋಜಿಸುವುದಕ್ಕೆ ಆಸ್ಟ್ರೇಲಿಯಾ ತಂಡದ ಆಟಗಾರ ಮ್ಯಾಥ್ಯೂ ವೇಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

’ಸಿಡ್ನಿಯಲ್ಲಿ ಒಂದರ ಹಿಂದೆ ಒಂದು ಎರಡು ಪಂದ್ಯಗಳು ನಡೆಯುವುದು ಸರಿಯಲ್ಲ. ಬ್ರಿಸ್ಟೆನ್‌ನ ಗಾಬಾದ್ಲಲಿ ನಡೆಯಲಿ‘ ಎಂದು ಪ್ರತಿಪಾದಿಸಿದ್ದಾರೆ.

’ಕ್ವಿನ್ಸ್‌ಲ್ಯಾಂಡ್ ನಿಯಮ ಮತ್ತು ಭಾರತದ ನಿಲುವಿನ ಕುರಿತು ನನಗೆ ತಿಳಿದಿಲ್ಲ. ಪೂರ್ವ ನಿರ್ಧಾರದಂತೆಯೇ ಪಂದ್ಯಗಳು ನಡೆದರೆ ಒಳ್ಳೆಯದು‘ ಎಂದು ವೇಡ್ ಹೇಳಿದ್ದಾರೆ.

’ಕೋವಿಡ್ ತಡೆಗೆ ಕಠಿಣವಾದ ಶಿಷ್ಟಾಚಾರ ಪಾಲನೆ ಮತ್ತು ಸುರಕ್ಷಾ ನಿಯಮಗಳು ಇರುತ್ತವೆ. ಆ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ತಂಡವು ಗಾಬಾದಲ್ಲಿ ಆಡುವುದನ್ನು ಯಾವಾಗಲೂ ಪ್ರೀತಿಸುತ್ತದೆ‘ ಎಂದು ವೇಡ್ ಅಭಿಪ್ರಾಯಪಟ್ಟಿದ್ದಾರೆ.

ಗಾಬಾ ಕ್ರೀಡಾಂಗಣದಲ್ಲಿ ಭಾರತವು ಇದುವರೆಗೆ ಟೆಸ್ಟ್‌ ಗೆದ್ದಿಲ್ಲ.

‘ನಿಯಮ ಪಾಲಿಸದಿದ್ದರೆ ಬರುವುದೇ ಬೇಡ‘

ನಿಯಮ ಪಾಲಿಸಿ ಇಲ್ಲದಿದ್ದರೆ ಬ್ರಿಸ್ಟೆನ್‌ಗೆ ಪ್ರಯಾಣಿಸುವ ಅಗತ್ಯವಿಲ್ಲವೆಂದು ಕ್ವಿನ್ಸ್‌ಲ್ಯಾಂಡ್ ರಾಜ್ಯದ ಸಚಿವೆ ರೋಸ್ ಬೇಟ್ಸ್‌ ಅವರು ಭಾರತ ತಂಡಕ್ಕೆ ಕಟುವಾದ ಎಚ್ಚರಿಕೆ ಕೊಟ್ಟಿದ್ದಾರೆ.

ಅವರು ಈ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್, ’ಭಾರತ ತಂಡದ ಬ್ಯಾಗ್‌ನಲ್ಲಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಇದೆ‘ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್ ಅವರು ಬ್ಯಾಗ್‌ ಅನ್ನು ಬೆನ್ನಿಗೇರಿಸಿಕೊಂಡು ಮುಗುಳ್ನಗುತ್ತಿರುವ ಚಿತ್ರವನ್ನೂ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.