ADVERTISEMENT

IND vs WI | ತವರಿನಲ್ಲಿ ಶುಭಮನ್ ಗಿಲ್ ನಾಯಕತ್ವಕ್ಕೆ ಮೊದಲ ‘ಟೆಸ್ಟ್’

ಭಾರತ–ವೆಸ್ಟ್ ಇಂಡೀಸ್ ಮೊದಲ ಟೆಸ್ಟ್‌ ನಾಳೆಯಿಂದ

ಪಿಟಿಐ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
<div class="paragraphs"><p>ಅಹಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಅಭ್ಯಾಸ ನಡೆಸಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್&nbsp;</p></div>

ಅಹಮದಾಬಾದಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಅಭ್ಯಾಸ ನಡೆಸಿದ ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ 

   

–ಎಪಿ/ಪಿಟಿಐ ಚಿತ್ರ

ಅಹಮದಾಬಾದ್: ಭಾರತ ತಂಡವು ಏಷ್ಯಾ ಕಪ್ ವಿಜಯದ ನಂತರ ಟೆಸ್ಟ್ ಕ್ರಿಕೆಟ್‌ನತ್ತ ಹೊರಳಲಿದೆ. 

ADVERTISEMENT

ಅಕ್ಟೋಬರ್ 2ರಿಂದ ವೆಸ್ಟ್ ಇಂಡೀಸ್ ವಿರುದ್ಧದದ ಎರಡು ಟೆಸ್ಟ್‌ಗಳ ಸರಣಿ ನಡೆಯಲಿದೆ. ನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು  ಸೋಮವಾರ ತಡರಾತ್ರಿ ಇಲ್ಲಿಗೆ ಬಂದಿಳಿದಿದ್ದಾರೆ. ಸುಮಾರು ಮೂರು ತಾಸುಗಳ ಮಾತುಕತೆಯಲ್ಲಿ ತಂಡ ಸಂಯೋಜನೆಯ ಕುರಿತು ಚರ್ಚಿಸಿದ್ದಾರೆ.

ವಿಂಡೀಸ್ ಎದುರಿನ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಟೂರ್ನಿಯ ಭಾಗವಾಗಿದೆ. ಮಂಗಳವಾರ ತಂಡದ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಫೀಲ್ಡಿಂಗ್ ತಾಲೀಮಿಗೆ ಹೆಚ್ಚು ಒತ್ತು ಕೊಟ್ಟರು. ವೇಗಿ ಜಸ್‌ಪ್ರೀತ್ ಬೂಮ್ರಾ, ಎಡಗೈ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರು ಅಭ್ಯಾಸದಿಂದ ವಿಶ್ರಾಂತಿ ಪಡೆದರು. 

ಮಳೆ ಬಂದು ನಿಂತ ನಂತರ ವೇಗಿಗಳಾದ ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಬ್ಬರೂ ಈಚೆಗೆ ಆಸ್ಟ್ರೇಲಿಯಾ ಎ ತಂಡದ ಎದುರಿನ ‘ಟೆಸ್ಟ್‌’ನಲ್ಲಿ ಆಡಿದ್ದರು. ಅವರಿಬ್ಬರೂ ಇಲ್ಲಿ ನೆಟ್ಸ್‌ನಲ್ಲಿ 45 ನಿಮಿಷಗಳ ಕಾಲ ಬೌಲಿಂಗ್ ಅಭ್ಯಾಸ ನಡೆಸಿದರು. ಇಬ್ಬರೂ ಬಲಗೈ ವೇಗಿಗಳು ಉತ್ತಮ ಲಯದಲ್ಲಿರುವಂತೆ ಕಂಡರು. ಉತ್ತಮ ವೇಗ, ಚಲನೆ ಮತ್ತು ಬೌನ್ಸರ್‌ಗಳನ್ನು ಹಾಕಿದರು.  

ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಅವರೂ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಇಬ್ಬರೂ ಉತ್ತಮ ಲಯದಲ್ಲಿದ್ದರು.  ವಿಕೆಟ್‌ಕೀಪರ್–ಬ್ಯಾಟರ್ ಧ್ರುವ ಜುರೇಲ್, ಬಿ. ಸಾಯಿ ಸುದರ್ಶನ್ ಮತ್ತು ದೇವದತ್ತ ಪಡಿಕ್ಕಲ್ ಅವರೂ ಅಭ್ಯಾಡ ನಡೆಸಿದರು. ಆದರೆ ನಾಯಕ ಗಿಲ್ ಮಾತ್ರ ಲಯಕ್ಕೆ ಮರಳುವ ಅಗತ್ಯವಿದೆ. ವೇಗಿಗಳು ಮತ್ತು ಥ್ರೋಡೌನ್ ಪರಿಣತರ ಎಸೆತಗಳನ್ನು ಎದುರಿಸಲು ಅವರು ಪರದಾಡಿದರು. ಬೇರೆ ಬೇರೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಗಿಲ್ ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದರು. 

ಗಿಲ್ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಇಂಗ್ಲೆಂಡ್‌ನಲ್ಲಿ ಈಚೆಗೆ ನಡೆದಿದ್ದ ಸರಣಿಯಲ್ಲಿ ಭಾರತವು 2–2ರಿಂದ ಸಮಬಲ ಸಾಧಿಸಿತ್ತು. 

ವಿಂಡೀಸ್ ಅಭ್ಯಾಸ 

ಆಲ್‌ರೌಂಡರ್ ರಾಸ್ಟನ್ ಚೇಸ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡವು ಮಧ್ಯಾಹ್ನ ಮಳೆ ಇದ್ದ ಕಾರಣ, ನರೇಂದ್ರ ಮೋದಿ ಕ್ರೀಡಾಂಗಣದ ಇಂಡೋರ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿತು.  

ಇತ್ತೀಚಿನ ದಿನಗಳಲ್ಲಿ ಉತ್ತಮ ಆಟ ತೋರುವಲ್ಲಿ ವಿಫಲವಾಗಿರುವ ವಿಂಡೀಸ್‌ಗೆ ಭಾರತವು ಕಠಿಣ ಸವಾಲೊಡ್ಡುವ ಎಲ್ಲ ಸಾಧ್ಯತೆಗಳೂ ಇವೆ.  ವಿಕೆಟ್‌ಕೀಪರ್ ಶಾಯ್ ಹೋಪ್, ಬ್ಯಾಟರ್ ಬ್ರೆಂಡನ್ ಕಿಂಗ್ ಮತ್ತು ಯುವ ಆಟಗಾರರ ಮೇಲೆ ತಂಡವು ಅವಲಂಬಿತವಾಗಿದೆ. 

ಉಭಯ ತಂಡಗಳ ಮೊದಲ ಟೆಸ್ಟ್ ಅಹಮದಾಬಾದಿನಲ್ಲಿ ಇದೇ 2ರಿಂದ 6ರವರೆಗೆ ಹಾಗೂ ಎರಡನೇ ಟೆಸ್ಟ್ ನವದೆಹಲಿಯಲ್ಲಿ ಅ. 10ರಿಂದ 14ರವರೆಗೆ ನಡೆಯಲಿದೆ. 

ಪಂದ್ಯ ಆರಂಭ: ಬೆಳಿಗ್ಗೆ 9.30 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.