ದುಬೈ: ಭಾರತ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಭಾನುವಾರ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಭಾರತ ಮತ್ತು ಪಾಕ್ ನಡುವಣ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಗೌರವಿಸಲಾಯಿತು.
‘ ಜಸ್‌ಪ್ರೀತ್ ಬೂಮ್ರಾ ಅವರು 2024ರ ಐಸಿಸಿ ಪ್ರಶಸ್ತಿಗಳು ಮತ್ತು ವರ್ಷದ ತಂಡದ ಕ್ಯಾಪ್‌ಗಳನ್ನು ಸ್ವೀಕರಿಸಿದ್ದಾರೆ’ ಎಂದು ಐಸಿಸಿ ಎಕ್ಸ್ ಖಾತೆಯಲ್ಲಿ ಸಂದೇಶ ಹಾಕಿದೆ.
ಬೆನ್ನುನೋವಿನ ಚಿಕಿತ್ಸೆಗಾಗಿ ಬೂಮ್ರಾ ಅವರು ವಿಶ್ರಾಂತಿಯಲ್ಲಿದ್ದಾರೆ. ಆದ್ದರಿಂದ ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿಲ್ಲ. ಪ್ರಶಸ್ತಿ ಸಮಾರಂಭಕ್ಕೂಮುನ್ನ ಅಭ್ಯಾಸನಿರತ ಭಾರತ ತಂಡದ ಆಟಗಾರರನ್ನೂ ಬೂಮ್ರಾ ಭೇಟಿಯಾದರು.
ಭಾರತದ ರಾಷ್ಟ್ರಗೀತೆ: ಸ್ಪಷ್ಟನೆ ಕೇಳಿದ ಪಿಸಿಬಿ
ಲಾಹೋರ್ (ಪಿಟಿಐ): ಇಲ್ಲಿಯ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದ ಆರಂಭಕ್ಕೂ ಮುನ್ನ ಭಾರತದ ರಾಷ್ಟ್ರಗೀತೆಯು ಅರೆಕ್ಷಣ ಮೊಳಗಿತ್ತು. ಈ ಬಗ್ಗೆ ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಪಿಸಿಬಿಯು ಐಸಿಸಿಯನ್ನು ಆಗ್ರಹಿಸಿದೆ.
ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಗಾಗಿ ಉಭಯ ತಂಡಗಳ ಆಟಗಾರರು ಸಾಲಿನಲ್ಲಿ ನಿಂತಿದ್ದರು. ಆದರೆ ಇದ್ದಕಿದ್ದಂತೆ ಭಾರತದ ರಾಷ್ಟ್ರಗೀತೆ ಮೊಳಗಿತು. ಒಂದೇ ಸೆಕೆಂಡಿನಲ್ಲಿಯೇ ಬಂದ್ ಮಾಡಲಾಯಿತು. ಕ್ರೀಡಾಂಗಣದಲ್ಲಿದ್ದ ಆಟಗಾರರು ಮತ್ತು ಪ್ರೇಕ್ಷಕರು ಇದರಿಂದ ಚಕಿತರಾದರು.
‘ರಾಷ್ಟ್ರಗೀತೆಯ ಧ್ವನಿಸುರುಳಿಗಳ ನಿರ್ವಹಣೆಯು ಐಸಿಸಿ ನಿಯೋಜಿತ ಸಿಬ್ಬಂದಿಯ ಹೊಣೆ. ಅದರಿಂದಾಗಿ ಇಂದು ನಡೆದ ಘಟನೆಗೆ ಐಸಿಸಿ ಸ್ಪಷ್ಟನೆ ನೀಡಬೇಕೆಂದು ಪಿಸಿಬಿಯು ಪತ್ರ ಬರೆದಿದೆ’ ಎಂದು ಮೂಲಗಳು ತಿಳಿಸಿವೆ.
ಬಾಬರ್ ಆಜಂ ಗೈರು
ಶನಿವಾರ ಸಂಜೆ ಪಾಕಿಸ್ತಾನ ತಂಡವು ಅಭ್ಯಾಸ ನಡೆಸಿದ ಹೊತ್ತಿನಲ್ಲಿ ಅನುಭವಿ ಬ್ಯಾಟರ್ ಬಾಬರ್ ಆಜಂ ಗೈರುಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ಪಿಸಿಬಿ ಮುಖ್ಯಸ್ಥ ಮೊಹಸಿನ್ ನಖ್ವಿ ಅವರು ಆಟಗಾರರನ್ನುದ್ದೇಶಿಸಿ ಚುಟುಕು ಭಾಷಣ ಮಾಡಿದಾಗಲೂ ಆಜಂ ಗೈರುಹಾಜರಾಗಿದ್ದರು.
‘ಭಾರತ ತಂಡದ ಎದುರಿನ ಪಂದ್ಯವನ್ನು ಗೆಲ್ಲಲೇಬೇಕು’ ಎಂದು ನಖ್ವಿ ಹೇಳಿದ್ದರು. ಆಜಂ ಅವರ ಅನುಪಸ್ಥಿತಿಯು ಈಗ ಪಾಕ್ ಕ್ರಿಕೆಟ್ ವಲಯದಲ್ಲಿ ಸಂಶಯ ಮೂಡಿಸಿದೆ.
ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಬಾಬರ್ ಅವರು 94 ಎಸೆತಗಳಲ್ಲಿ 64 ರನ್ ಗಳಿಸಿದ್ದರು. ಅವರ ನಿಧಾನಗತಿಯ ಆಟವೇ ತಂಡದ ಸೋಲಿಗೆ ಕಾರಣ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ತಂಡದ ಅಭ್ಯಾಸದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕೋಚ್ ಅಕೀಬ್ ಜಾವೇದ್ ಕೂಡ ಬಾಬರ್ ಗೈರಿನ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.