ADVERTISEMENT

ಪ್ರಕಾಶ್ ಪಡುಕೋಣೆಗೆ ಜೀವಮಾನ ಸಾಧನೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 15:44 IST
Last Updated 18 ನವೆಂಬರ್ 2021, 15:44 IST
ಪ್ರಕಾಶ್ ಪಡುಕೋಣೆ
ಪ್ರಕಾಶ್ ಪಡುಕೋಣೆ   

ನವದೆಹಲಿ: ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು ಪ್ರಕಾಶ್ ಪಡುಕೋಣೆ ಅವರನ್ನು ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಿತ್ತು. ಪ್ರಶಸ್ತಿ ಆಯ್ಕೆ ಆಯೋಗವು ವಿಶ್ವದ ಶ್ರೇಷ್ಠ ಬ್ಯಾಡ್ಮಿಂಟನ್ ಪಟುಗಳನ್ನು ಆಯ್ಕೆ ಮಾಡಿ ಬಿಡಬ್ಲ್ಯುಎಫ್‌ಗೆ ಶಿಫಾರಸು ಮಾಡಿತ್ತು. ಅದರಲ್ಲಿ ಕನ್ನಡಿಗ ಪ್ರಕಾಶ್ ಅವರನ್ನು ಗೌರವಿಸಲು ಬಿಡ್ಲ್ಯುಎಫ್‌ ನಿರ್ಧರಿಸಿದೆ.

ವಿಶ್ವದ ಮಾಜಿ ಅಗ್ರಶ್ರೇಯಾಂಕದ ಆಟಗಾರ, ಭಾರತದ ಮೊದಲ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ಆಲ್‌ ಇಂಗ್ಲೆಂಡ್ ಚಾಂಪಿಯನ್ ಕೂಡ ಆಗಿರುವ ಪ್ರಕಾಶ್ ಅವರಿಗೆ 2018ರಲ್ಲಿ ಬಿಎಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿತ್ತು.

ADVERTISEMENT

ಬಿಡಬ್ಲ್ಯುಎಫ್‌ ಕೌನ್ಸಿಲ್ ಮೆರಿಟೊರಿಯಸ್ ಸರ್ವಿಸ್ ಅವಾರ್ಡ್ ವಿಭಾಗದಲ್ಲಿ ಹರಿಯಾಣ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ದೇವೆಂದರ್ ಸಿಂಗ್, ಮಹಾರಾಷ್ಟ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್‌.ಎ. ಶೆಟ್ಟಿ, ಬಿಎಐ ಉಪಾಧ್ಯಕ್ಷ ಮಾಣಿಕ್ ಶಾ, ಡಾ. ಓ.ಡಿ. ಶರ್ಮಾ ಅವರ ನಾಮನಿರ್ದೇಶನ ಮಾಡಿದೆ.

ಉತ್ತರಾಖಂಡ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷೆ ಅಲಕನಂದಾ ಅಶೋಕ್ ಅವರಿಗೆ ಮಹಿಳಾ ಮತ್ತು ಲಿಂಗಸಮಾನತೆ ವಿಭಾಗದ ಪ್ರಶಸ್ತಿ ನೀಡಲಾಗುವುದು.

‘ಇವತ್ತು ಭಾರತದ ಬ್ಯಾಡ್ಮಿಂಟನ್ ಈ ಹಂತಕ್ಕೆ ಬೆಳೆದು ನಿಲ್ಲಲು ಪ್ರಕಾಶ್ ಪಡುಕೋಣೆ ಅವರ ಸಾಧನೆ ಮತ್ತು ಕಾಣಿಕೆಗಳು ಪ್ರಮುಖವಾಗಿವೆ. ಅವರಿಗೆ ಬಿಡಬ್ಲ್ಯುಎಫ್‌ ಪ್ರಶಸ್ತಿ ಸಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ’ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ಹೇಳಿದ್ದಾರೆ.

ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ನಡೆಯುವ ಸಂದರ್ಭದಲ್ಲಿ ಎಲ್ಲ ಪುರಸ್ಕೃತರಿಗೆ ಪ್ರಮಾಣಪತ್ರ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.