ADVERTISEMENT

ಗೌಪ್ಯ ವರದಿ ಸೋರಿಕೆ ತನಿಖೆಗೆ ಪೊಲೀಸರ ಮೊರೆಹೋದ ಸಿಎ

ಪಿಟಿಐ
Published 26 ಡಿಸೆಂಬರ್ 2021, 18:26 IST
Last Updated 26 ಡಿಸೆಂಬರ್ 2021, 18:26 IST
ನಿಕ್ ಹಾಕ್ಲೆ
ನಿಕ್ ಹಾಕ್ಲೆ   

ಮೆಲ್ಬರ್ನ್: ಆಸ್ಟ್ರೇಲಿಯಾದ ‘ಖ್ಯಾತನಾಮ’ ಕ್ರಿಕೆಟಿಗನೊಬ್ಬ ಮಾದಕ ವಸ್ತು ಸೇವಿಸಿದ ಕುರಿತ ಗೌಪ್ಯ ವರದಿಯೊಂದು ಮಾಧ್ಯಮಗಳಿಗೆ ಸೋರಿಕೆಯಾಗಿರುವುದರ ತನಿಖೆಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪೊಲೀಸರ ಮೊರೆ ಹೋಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ ಈ ವಿಷಯದ ಕುರಿತು ಭಾನುವಾರ ತಿಳಿಸಿದರು. ಈ ಪ್ರಕರಣದ ಬಗ್ಗೆ ‘ದ ಏಜ್’ ಸುದ್ದಿಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಈ ಹೆಜ್ಜೆ ಇಟ್ಟಿದೆ.

‘ಬೆಳಿಗ್ಗೆ ಈ ಲೇಖನವನ್ನು ನೋಡಿದೆ. ಇದರಲ್ಲಿರುವ ಮಾಹಿತಿಗಳು ಆಧಾರರಹಿತವಾಗಿದೆ. ಯಾವುದೇ ಮಾಹಿತಿಯನ್ನು ಕದಿಯುವುದು ಅಪರಾಧ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ನಿಕ್ ತಿಳಿಸಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗನೊಬ್ಬ ಕೊಕೆನ್ ಸೇವನೆ ಮಾಡಿ ಬಾಲ್ಕನಿಯಲ್ಲಿ ಮಹಿಳೆಯರೊಂದಿಗೆ ನಗ್ನವಾಗಿ ನರ್ತಿಸುತ್ತಿದ್ದನೆಂದು ಮಹಿಳೆಯೊಬ್ಬರು ನೀಡಿರುವ ಮಾಹಿತಿಯನ್ನು ಆಧರಿಸಿ ಪತ್ರಿಕೆಯು ವರದಿ ಮಾಡಿದೆ. ಮಾಹಿತಿ ನೀಡಿದ ಮಹಿಳೆಯು ತನ್ನನ್ನು ‘ಹೈ ಕ್ಲಾಸ್ ಎಸ್ಕಾರ್ಟ್‌‘ ಎಂದು ಹೇಳಿರುವ ಧ್ವನಿ ಮುದ್ರಣ ಇದೆ ಎಂದೂ ವರದಿಯಾಗಿದೆ.

ಈ ಪ್ರಕರಣದ ಬಗ್ಗೆ ಸಿಎದ ಮಾಜಿ ಸಮನ್ವಯ ಮುಖ್ಯಸ್ಥರಾದ ಸೀನ್ ಕ್ಯಾರೊಲ್ ಅವರ ಹೆಸರು ಕೂಡ ಕೇಳಿಬಂದಿದೆ.

ಕ್ಯಾರೊಲ್ ಅವರು ಒಂದು ವರ್ಷದ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ತೊರೆದಿದ್ದಾರೆ.

ಹೋದ ತಿಂಗಳು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಅವರು ಕ್ರಿಕೆಟ್ ಟಾಸ್ಮೆನಿಯಾದ ತಮ್ಮ ಸಹೋದ್ಯೋಗಿಯೊಬ್ಬರಿಗೆ ಅವಾಚ್ಯ ಪದಗಳಿದ್ದ ಸಂದೇಶ ಕಳಿಸಿದ್ದ ಕಾರಣಕ್ಕೆ ಅಮಾನತುಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.