ಬೆಂಗಳೂರು: ವಿಪ್ರಜ್ ನಿಗಮ್ (20ಕ್ಕೆ 2; ಔಟಾಗದೇ 27) ಅವರ ಆಲ್‌ರೌಂಡ್ ಆಟದ ನೆರವಿನಿಂದ ಉತ್ತರ ಪ್ರದೇಶ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನಾಲ್ಕು ವಿಕೆಟ್‌ಗಳಿಂದ ಆಂಧ್ರ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರ ತಂಡವು ಎನ್‌ಡಿಎನ್‌ವಿ ಪ್ರಸಾದ್ (ಔಟಾಗದೇ 34;22ಎ) ಅವರ ಬ್ಯಾಟಿಂಗ್ ನೆರವಿನಿಂದ 20 ಓಔರ್‌ಗಳಲ್ಲಿ 6 ವಿಕೆಟ್‌ಗೆ 156 ರನ್ ಗಳಿಸಿತು. ಉತ್ತರ ಪ್ರದೇಶದ ವಿಪ್ರಜ್ ಮತ್ತು ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಉತ್ತರ ಪ್ರದೇಶ ತಂಡಕ್ಕೆ ಆರ್ಯನ್ ಜುಯಲ್ (19;20ಎ) ಮತ್ತು ಕರಣ್ ಶರ್ಮಾ (48;31ಎ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 8.1 ಓವರ್‌ಗಳಲ್ಲಿ 70 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, 109 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ರಿಂಕು ಸಿಂಗ್ (ಔಟಾಗದೇ 27;22ಎ) ಮತ್ತು ವಿಪ್ರಜ್ ಅವರು ಜವಾಬ್ದಾರಿಯುತ ಆಟವಾಡಿದರು. ವಿಪ್ರಜ್ ಕೇವಲ 8 ಎಸೆತಗಳಲ್ಲಿ ಮೂರು ಬೌಂಡರಿ, ಎರಡು ಸಿಕ್ಸರ್ ಸೇರಿದಂತೆ 27 ರನ್ ಗಳಿಸಿದರು. ಹೀಗಾಗಿ, ಇನ್ನೂ 6 ಎಸೆತ ಬಾಕಿ ಇರುವಂತೆ ತಂಡವು 6 ವಿಕೆಟ್‌ಗೆ 157 ರನ್ ಗಳಿಸಿ ಜಯ ಸಾಧಿಸಿತು.
ಉತ್ತರ ಪ್ರದೇಶ ತಂಡವು ಇದೇ 11ರಂದು ಬೆಂಗಳೂರಿನಲ್ಲಿ ನಡೆಯುವ ಎಂಟರ ಘಟ್ಟದ ಪಂದ್ಯದಲ್ಲಿ ದೆಹಲಿಯನ್ನು ಎದುರಿಸಲಿದೆ. ದೆಹಲಿ ತಂಡವು ‘ಸಿ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಸಂಕ್ಷಿಪ್ತ ಸ್ಕೋರ್
ಆಂಧ್ರ: 20 ಓವರ್‌ಗಳಲ್ಲಿ 6ಕ್ಕೆ 156 (ಎಸ್‌ಡಿಎನ್‌ವಿ ಪ್ರಸಾದ್ ಔಟಾಗದೇ 34; ವಿಪ್ರಜ್ ನಿಗಮ್ 20ಕ್ಕೆ 2, ಭುವನೇಶ್ವರ ಕುಮಾರ್ 30ಕ್ಕೆ 2).
ಉತ್ತರ ಪ್ರದೇಶ: 19 ಓವರ್‌ಗಳಲ್ಲಿ 6ಕ್ಕೆ 157 (ಕರಣ್ ಶರ್ಮಾ 48, ವಿಪ್ರಜ್ ನಿಗಮ್ ಔಟಾಗದೇ 27, ರಿಂಕು ಸಿಂಗ್ ಔಟಾಗದೇ 27).
ಫಲಿತಾಂಶ: ಉತ್ತರ ಪ್ರದೇಶ ತಂಡಕ್ಕೆ 4 ವಿಕೆಟ್ ಜಯ, 6 ಅಂಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.