ADVERTISEMENT

IPL 2023: ಗ್ರೀನ್‌ ಶತಕ; ಪ್ಲೇಆಫ್‌ಗೆ ಮುಂಬೈ

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 8 ವಿಕೆಟ್‌ ಗೆಲುವು

ಪಿಟಿಐ
Published 21 ಮೇ 2023, 20:12 IST
Last Updated 21 ಮೇ 2023, 20:12 IST
ಶತಕ ಗಳಿಸಿದ ಸಂಭ್ರಮದಲ್ಲಿ ಕ್ಯಾಮರಾನ್‌ ಗ್ರೀನ್‌
ಶತಕ ಗಳಿಸಿದ ಸಂಭ್ರಮದಲ್ಲಿ ಕ್ಯಾಮರಾನ್‌ ಗ್ರೀನ್‌   

ಮುಂಬೈ : ಕ್ಯಾಮರಾನ್‌ ಗ್ರೀನ್‌ ಅವರ ಅಬ್ಬರದ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಪ್ಲೇ ಆಫ್‌ಗೆ ಪ್ರವೇಶ ಪಡೆಯಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸನ್‌ ರೈಸರ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 200 ರನ್‌ ಗಳಿಸಿತು. ಮಯಂಕ್‌ ಅಗರವಾಲ್‌ (83 ರನ್‌, 46 ಎ., 4X8, 6X4) ಮತ್ತು ವಿವ್ರಾಂತ್‌ ಶರ್ಮಾ (69 ರನ್‌, 47 ಎ., 4X9, 6X2) ಅವರು ಗಮನ
ಸೆಳೆದರು.

ಮುಂಬೈ ತಂಡ ಇನ್ನೂ ಎರಡು ಓವರ್‌ಗಳು ಇರುವಂತೆಯೇ 2 ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಎದುರಾಳಿ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟಿದ ಗ್ರೀನ್‌ (ಔಟಾಗದೆ 100, 47 ಎ., 4X8, 6X8) ಅವರು ಭರ್ಜರಿ ಗೆಲುವಿಗೆ ಕಾರಣರಾದರು. ನಾಯಕ ರೋಹಿತ್‌ ಶರ್ಮಾ (56, 37 ಎ., 4X8,. 6X1) ಕೊಡುಗೆ ನೀಡಿದರು.

ADVERTISEMENT

ಇದರೊಂದಿಗೆ ಮುಂಬೈ, ಒಟ್ಟು 16 ಪಾಯಿಂಟ್ಸ್‌ಗಳೊಂದಿಗೆ ‘ಪ್ಲೇ ಆಫ್‌’ನಲ್ಲಿ ಸ್ಥಾನ  ಖಚಿತಪಡಿಸಿಕೊಂಡಿತು. ಆರ್‌ಸಿಬಿ ಮತ್ತು ಗುಜರಾತ್‌ ಟೈಟನ್ಸ್‌ ನಡುವೆ ಬೆಂಗಳೂರಿನಲ್ಲಿ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ ಸೋತಿದ್ದರಿಂದ ಮುಂಬೈ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್‌ ಪ್ರವೇಶಿಸಿತು.

ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ತಂಡ, ಇಶಾನ್‌ ಕಿಶನ್‌ (14 ರನ್‌, 12 ಎ.) ಅವರನ್ನು ಬೇಗನೇ ಕಳೆದು ಕೊಂಡಿತು. ಭುವನೇಶ್ವರ್‌ ಕುಮಾರ್‌ ಬೌಲಿಂಗ್‌ನಲ್ಲಿ ಅವರು ಹ್ಯಾರಿ ಬ್ರೂಕ್‌ಗೆ ಕ್ಯಾಚಿತ್ತರು. ಎರಡನೇ ವಿಕೆಟ್‌ಗೆ ಜತೆಯಾದ ರೋಹಿತ್‌ ಮತ್ತು ಗ್ರೀನ್‌ 65 ಎಸೆತಗಳಲ್ಲಿ 128 ರನ್‌ ಸೇರಿಸಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಇಬ್ಬರೂ ಆಕ್ರಮಣಕಾರಿಯಾಗಿ ಆಡಿದರು. ‘ಪವರ್‌ ಪ್ಲೇ’ನಲ್ಲಿ ಸ್ಕೋರ್‌ 60 ಆಗಿತ್ತು. ಅರ್ಧಶತಕ ಪೂರೈಸಿದ ಬೆನ್ನಲ್ಲೇ ರೋಹಿತ್‌ ಔಟಾದರೂ, ಗ್ರೀನ್‌ ತಮ್ಮ ಅಬ್ಬರ ಮುಂದುವರಿಸಿದರು.

ಸೂರ್ಯಕುಮಾರ್‌ ಯಾದವ್‌ (ಔಟಾಗದೆ 25, 16 ಎ., 4X4) ಜತೆ ಮುರಿಯದ ಮೂರನೇ ವಿಕೆಟ್‌ಗೆ 53 ರನ್‌ ಸೇರಿಸಿ ತಂಡವನ್ನು ಜಯದತ್ತ ಮುನ್ನಡೆಸಿದರು. ತಂಡದ ಗೆಲುವಿನ ರನ್‌ ಗಳಿಸುವ ಜತೆಯಲ್ಲೇ ಐಪಿಎಲ್‌ನಲ್ಲಿ ಚೊಚ್ಚಲ ಶತಕವನ್ನೂ ಪೂರೈಸಿದರು.

ಮಯಂಕ್‌ ಮಿಂಚು: ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ತಂಡಕ್ಕೆ ಮಯಂಕ್‌ ಮತ್ತು ವಿವ್ರಾಂತ್‌ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 13.5 ಓವರ್‌ಗಳಲ್ಲಿ 140 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 200 (ವಿವ್ರಾಂತ್ ಶರ್ಮಾ 69, ಮಯಂಕ್‌ ಅಗರವಾಲ್‌ 83, ಹೆನ್ರಿಚ್‌ ಕ್ಲಾಸನ್‌ 18, ಏಡನ್‌ ಮರ್ಕರಂ ಔಟಾಗದೆ 13, ಆಕಾಶ್‌ ಮಧ್ವಾಲ್‌ 37ಕ್ಕೆ 4, ಕ್ರಿಸ್‌ ಜೋರ್ಡನ್‌ 42ಕ್ಕೆ 1) ಮುಂಬೈ ಇಂಡಿಯನ್ಸ್‌ 18 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 201 (ಇಶಾನ್‌ ಕಿಶನ್‌ 14, ರೋಹಿತ್‌ ಶರ್ಮಾ 56, ಕ್ಯಾಮರಾನ್‌ ಗ್ರೀನ್‌ ಔಟಾಗದೆ 100, ಸೂರ್ಯಕುಮಾರ್‌ ಯಾದವ್‌ ಔಟಾಗದೆ 25, ಭುವನೇಶ್ವರ್‌ ಕುಮಾರ್ 26ಕ್ಕೆ 1) ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 8 ವಿಕೆಟ್‌ ಗೆಲುವು

ಮುಂಬೈ ಪರ ರೋಹಿತ್‌ 5,000 ರನ್‌

ರೋಹಿತ್‌ ಶರ್ಮಾ ಅವರು ಮುಂಬೈ ಇಂಡಿಯನ್ಸ್‌ ತಂಡದ ಪರ 5000 ರನ್‌ ಪೂರೈಸಿದರು. ಐಪಿಎಲ್‌ನ ಮೊದಲ ಮೂರು ಆವೃತ್ತಿಗಳಲ್ಲಿ ಡೆಕ್ಕನ್‌ ಚಾರ್ಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಅವರು, 2011ರಲ್ಲಿ ಮುಂಬೈ ತಂಡವನ್ನು ಸೇರಿದ್ದರು. ಒಟ್ಟಾರೆಯಾಗಿ ಅವರು ಐಪಿಎಲ್‌ನಲ್ಲಿ 6,192 ರನ್‌ ಗಳಿಸಿದ್ದಾರೆ.

ಲೀಗ್‌ ಕ್ರಿಕೆಟ್‌ ಮತ್ತು ಅಂತರರಾಷ್ಟ್ರೀಯ ಪಂದ್ಯಗಳು ಸೇರಿದಂತೆ ಟಿ20 ಮಾದರಿಯಲ್ಲಿ 11 ಸಾವಿರ ರನ್‌ ಪೂರೈಸಿದ ಸಾಧನೆಯನ್ನೂ ಈ ಪಂದ್ಯದಲ್ಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.