ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ ನಿರಾಕರಿಸಿದ ರೈಲ್ವೇಸ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 16:08 IST
Last Updated 19 ಅಕ್ಟೋಬರ್ 2025, 16:08 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ರೈಲ್ವೇಸ್‌ನ ಕೆಳಮಧ್ಯಮ ಕ್ರಮಾಂಕದ ವಿರಾಟ್‌ ಜೈಸ್ವಾಲ್‌ ಮತ್ತು ಅಭಿಷೇಕ್‌ ಕೌಶಲ್‌  ಅವರು ಹೋರಾಟದ ಶತಕಗಳ ಮೂಲಕ ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವನ್ನು ನಿರಾಕರಿಸಿದರು. ನಾಲ್ಕು ದಿನಗಳ ಈ ಪಂದ್ಯ  ಭಾನುವಾರ ರೋಚಕ ಡ್ರಾ ಆಯಿತು.

ADVERTISEMENT

ಡಿ ಗುಂಪಿನ ಪಂದ್ಯದಲ್ಲಿ ಫಾಲೊ ಆನ್‌ಗೆ ಒಳಗಾದ ರೈಲ್ವೇಸ್‌ 343 ರನ್‌ಗಳಿಂದ ಹಿಂದುಳಿದಿದ್ದು, ಆತಿಥೇಯರು ಗೆಲುವಿನ ನಿರೀಕ್ಷೆಯಲ್ಲಿದ್ದರು.

ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 41 ರನ್ ಗಳಿಸಿದ್ದ ರೈಲ್ವೇಸ್‌ ಒಂದು ಹಂತದಲ್ಲಿ 8 ವಿಕೆಟ್‌ಗೆ 202 ರನ್ ಗಳಿಸಿ ಸೋಲಿನ ಸುಳಿಯಲ್ಲಿತ್ತು. ಎಡಗೈ ಸ್ಪಿನ್ನರ್ ಹಾರ್ದಿಕ್ ರಾಜ್‌ 87 ರನ್ನಿಗೆ 6 ವಿಕೆಟ್‌ ಕಬಳಿಸಿದ್ದರು. ಆದರೆ ರೈಲ್ವೇಸ್‌ ಹಳಿತಪ್ಪಿಸಲು ಆಗಲಿಲ್ಲ.

ವಿರಾಟ್‌ (ಅಜೇಯ 108, 223 ಎಸೆತ, 4x21, 6x1) ಅವರು ಅಭಿಷೇಕ್ (102, 202ಎ, 4x8, 6x3) ಅವರು 9ನೇ ವಿಕೆಟ್‌ಗೆ 117 ರನ್ ಸೇರಿಸಿ ಕರ್ನಾಟಕದ ಗುರಿಗೆ ಅಡ್ಡಿಯಾದರು. ಇದಕ್ಕೆ ಮೊದಲು ಆಡುವಾಗ ಗಾಯಾಳಾದ್ದ ಅಭಿಷೇಕ್ ಎಂಟನೇ ವಿಕೆಟ್‌ ಬಿದ್ದಾಗ ಆಡಲು ಮರಳಿದ್ದರು.

95ನೇ ಓವರಿನಲ್ಲಿ ಅಭಿಷೇಕ್ ಔಟಾದರೂ, ಕೊನೆಯ ಆಟಗಾರ ಉಮರ್ ಮಲಿಕ್ (1 ರನ್‌, 47ಎ) ಜೊತೆ ವಿರಾಟ್‌ ಬರೋಬರಿ ನೂರು ಎಸೆತಗಳನ್ನು ಆಡಿ ತಂಡಕ್ಕೆ ಆಪತ್ಬಾಂಧವರಾದರು. ತಂಡ 111 ಓವರುಗಳಲ್ಲಿ 9 ವಿಕೆಟ್‌ಗೆ 339 ರನ್ ಗಳಿಸಿ ಪಂದ್ಯ ಮುಗಿಸಿತು. ಕೊನೆಯ ವಿಕೆಟ್‌ಗೆ 20 ರನ್ ಜೊತೆಯಾಟ ಅಮೂಲ್ಯವಾಯಿತು.

ಕರ್ನಾಟಕ 11 ಪಾಯಿಂಟ್‌ಗಳೊಡನೆ ಡಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಉತ್ತರಾಖಂಡ (12), ಉತ್ತರ ಪ್ರದೇಶ (11) ಮೊದಲ ಎರಡು ಸ್ಥಾನದಲ್ಲಿವೆ. ಹಿಮಾಚಲ (7) ಮತ್ತು ಛತ್ತೀಸಗಢ (6) ಕೊನೆಯ ಎರಡು ಸ್ಥಾನದಲ್ಲಿವೆ. ಕರ್ನಾಟಕ ಇದೇ 25 ರಿಂದ ನಡೆಯುವ ಮುಂದಿನ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಆಡಲಿದೆ.

ಸ್ಕೋರುಗಳು: ಮೊದಲ ಇನಿಂಗ್ಸ್‌: ಕರ್ನಾಟಕ: 7 ವಿಕೆಟ್‌ಗೆ 529 ಡಿ; ರೈಲ್ವೇಸ್‌: 186 (ಫಾಲೋಆನ್‌) ಮತ್ತು ಎರಡನೇ ಇನಿಂಗ್ಸ್‌: 111 ಓವರುಗಳಲ್ಲಿ 9 ವಿಕೆಟ್‌ಗೆ 339 (ಅಂಚಿತ್ ಯಾದವ್‌ 47, ಅನ್ಶ್‌ ಯಾದವ್‌ 32, ಅಭಿಷೇಕ್‌ ಕೌಲ್ 102, ವಿರಾಟ್‌ ಜೈಸ್ವಾಲ್‌ ಔಟಾಗದೇ 108; ಹಾರ್ದಿಕ್‌ ರಾಜ್‌ 87ಕ್ಕೆ6, ಧ್ರುವ್ ಪ್ರಭಾಕರ್ 47ಕ್ಕೆ2).4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.