ADVERTISEMENT

IND vs SA 2nd T20: ಗಿಲ್, ಸೂರ್ಯಗೆ ಲಯಕ್ಕೆ ಮರಳುವ ಸವಾಲು

ಗೆಲುವಿನ ಓಟ ಮುಂದುವರಿಸುವತ್ತ ಭಾರತ ಚಿತ್ತ; ತಿರುಗೇಟು ನೀಡುವ ಛಲದಲ್ಲಿ ದಕ್ಷಿಣ ಆಫ್ರಿಕಾ

ಪಿಟಿಐ
Published 10 ಡಿಸೆಂಬರ್ 2025, 13:37 IST
Last Updated 10 ಡಿಸೆಂಬರ್ 2025, 13:37 IST
ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ   –ಪಿಟಿಐ ಚಿತ್ರ
ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ   –ಪಿಟಿಐ ಚಿತ್ರ   

ಮುಲ್ಲನಪುರ: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ‘ಚುಟುಕು ಕ್ರಿಕೆಟ್’ ಮಾದರಿಯಲ್ಲಿ ತಮ್ಮ ಛಾಪು ಮೂಡಿಸುವ ಒತ್ತಡದಲ್ಲಿದ್ದಾರೆ.

ತಮ್ಮ ತವರೂರಿನಲ್ಲಿ ಸಾಮರ್ಥ್ಯ ಮೆರೆಯುವ ಅವಕಾಶ ಅವರಿಗೆ ಈಗ ಒದಗಿಬಂದಿದೆ. ಚಂಡೀಗಡ ಸಮೀಪದ ಮುಲ್ಲನಪುರದಲ್ಲಿ (ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ) ನಡೆಯಲಿರುವ  ದಕ್ಷಿಣ ಆಫ್ರಿಕಾ ಎದುರು ಗುರುವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಉತ್ತಮ ಆರಂಭ ನೀಡುವ ಛಲದಲ್ಲಿ ಅವರಿದ್ದಾರೆ. ಕಟಕ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅವರು ವೈಫಲ್ಯ ಅನುಭವಿಸಿದ್ದರು. ತಮ್ಮ ಬಾಲ್ಯದ ಗೆಳೆಯ ಅಭಿಷೇಕ್ ಶರ್ಮಾ ಅವರೊಂದಿಗೆ ಉತ್ತಮ ಆರಂಭ ನೀಡಿದರೆ ತಂಡವು ದೊಡ್ಡ ಮೊತ್ತ ಪೇರಿಸಲು ಅನುಕೂಲವಾಗಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿಯೂ ಗಿಲ್ ಹೆಚ್ಚು ರನ್ ಗಳಿಸಿರಲಿಲ್ಲ. ಆಗಲೂ ಅವರ ಬಗ್ಗೆ ಚರ್ಚೆಗಳು ನಡೆದಿದ್ದವು.  ಆದರೆ ತಂಡದ ವ್ಯವಸ್ಥಾಪಕ ಮಂಡಳಿಯು ಗಿಲ್ ಮೇಲೆ ಅಪಾರ ವಿಶ್ವಾಸವಿಟ್ಟು ಅವಕಾಶಗಳನ್ನು ನೀಡುತ್ತಲೇ ಇದೆ. 

ಸೂರ್ಯಕುಮಾರ್ ಯಾದವ್ ಬಳಗವು ಮಂಗಳವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಹಾರ್ದಿಕ್ ಪಾಂಡ್ಯ ಮಿಂಚಿನ ಅರ್ಧಶತಕ ಗಳಿಸಿದ್ದರು. ಬೌಲರ್‌ಗಳು ಸಂಘಟಿತ ದಾಳಿ ನಡೆಸಿ ಎದುರಾಳಿ ಬಳಗವನ್ನು ಕಟ್ಟಿಹಾಕಿದ್ದರು. ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 1–0 ಮುನ್ನಡೆ ಸಾಧಿಸಿತ್ತು. 

ADVERTISEMENT

ಗಿಲ್ ಅವರಲ್ಲದೇ ಸೂರ್ಯ ಅವರ ಬ್ಯಾಟಿಂಗ್ ಫಾರ್ಮ್ ಮೇಲೆ ಈಗ ಎಲ್ಲ ಕಣ್ಣುಗಳಿವೆ. ಅವರು ಕೂಡ ಒಂದು ವರ್ಷದಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಇನ್ನೆರಡು ತಿಂಗಳು ಕಳೆದರೆ  ಸೂರ್ಯ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕಿದೆ. ಪ್ರಶಸ್ತಿಯನ್ನು  ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಅವರು  ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಸಾಮರ್ಥ್ಯ ಮೆರೆಯುವ ಅಗತ್ಯವಿದೆ.

ಗಾಯದಿಂದ ಚೇತರಿಸಿಕೊಂಡು ಬಂದ ನಂತರದ ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಹಾರ್ದಿಕ್ ಮಿಂಚಿರುವುದು ತಂಡದಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಬೌಲಿಂಗ್‌ ವಿಭಾಗದಲ್ಲಿ ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ ಅವರೊಂದಿಗೆ ಹಾರ್ದಿಕ್ ಹೊಣೆ ಹಂಚಿಕೊಂಡಿದ್ದರು. ಜಿತೇಶ್ ಶರ್ಮಾ ವಿಕೆಟ್‌ಕೀಪಿಂಗ್‌ನಲ್ಲಿ ಚುರುಕಾಗಿದ್ದಾರೆ. ಅಲ್ಲದೇ ಯುಡಿಆರ್‌ಎಸ್‌ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ನಿರ್ಣಯಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್ ಕೂಡ ಉತ್ತಮವಾಗಿದೆ.  ಅಕ್ಷರ್ ಪಟೇಲ್ ಇರುವುದರಿಂದ ಕೆಳಕ್ರಮಾಂಕದವರೆಗೂ ಬ್ಯಾಟಿಂಗ್ ಶಕ್ತಿ ಇದೆ. 

ಪ್ರವಾಸಿ ಬಳಗದಲ್ಲಿ ಟಿ20 ಪರಿಣತ ಬ್ಯಾಟರ್‌ಗಳು ಇದ್ದಾರೆ. ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಡೆವಾಲ್ಡ್‌ ಬ್ರೆವಿಸ್ ಹಾಗೂ ಕ್ವಿಂಟನ್ ಡಿ ಕಾಕ್ ಅವರು ತಮ್ಮ ನೈಜ ಸಾಮರ್ಥ್ಯಕ್ಕೆ ಮರಳಿದರೆ ಭಾರತದ ಬೌಲರ್‌ಗಳಿಗೆ ಕಠಿಣ ಸವಾಲು ಎದುರಾಗುವುದು ಖಚಿತ. ಮೊದಲ ಪಂದ್ಯದಲ್ಲಿ ಅವರನ್ನು ಕಟ್ಟಿಹಾಕುವಲ್ಲಿ ಆತಿಥೇಯರು ಯಶಸ್ವಿಯಾಗಿದ್ದರು. ಪುಟಿದೇಳುವ ಸಾಮರ್ಥ್ಯ ಇರುವ ದಕ್ಷಿಣ ಆಫ್ರಿಕಾ ತಂಡವು ವಿಭಿನ್ನ ತಂತ್ರಗಾರಿಕೆಯೊಂದಿಗೆ ಇಲ್ಲಿ ಕಣಕ್ಕಿಳಿಯುವ ಛಲದಲ್ಲಿದೆ. 

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಜಿಯೊಸ್ಟಾರ್ ನೆಟ್‌ವರ್ಕ್ 

ಶುಭಮನ್ ಗಿಲ್ ಅಭಿಷೇಕ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್     –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.