ADVERTISEMENT

Cheteshwar Pujara Retirement: ಪೂಜಾರ ಸಾಧನೆ ಕೊಂಡಾಡಿದ ಭಾರತದ ಮಾಜಿ ತಾರೆಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2025, 9:47 IST
Last Updated 24 ಆಗಸ್ಟ್ 2025, 9:47 IST
<div class="paragraphs"><p>ಚೇತೇಶ್ವರ ಪೂಜಾರ</p></div>

ಚೇತೇಶ್ವರ ಪೂಜಾರ

   

(ಪಿಟಿಐ ಚಿತ್ರ)

ನವದೆಹಲಿ: ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ನಿವೃತ್ತಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಪೂಜಾರ ಅವರ ಸಾಧನೆಯನ್ನು ಭಾರತದ ಮಾಜಿ ತಾರೆಯರು ಕೊಂಡಾಡಿದ್ದಾರೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಮಾಜಿ ಆಟಗಾರರು ಪೂಜಾರ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ADVERTISEMENT

'ಬಿರುಗಾಳಿ ಬೀಸಿದಾಗ ಅವರು ಎದ್ದು ನಿಂತು ದಿಟ್ಟವಾಗಿ ಎದುರಿಸಿದರು. ಭರವಸೆ ಮಂಕಾದಾಗ ಅವರು ಹೋರಾಡಿದರು. ಅಭಿನಂದನೆಗಳು ಪೂಜಿ (ಪೂಜಾರ)' ಎಂದು ಗಂಭೀರ್ ಬರೆದುಕೊಂಡಿದ್ದಾರೆ.

ಪೂಜಾರ ಅವರ ಬದ್ಧತೆಯನ್ನು ಮೆಲುಕು ಹಾಕಿರುವ ಮಾಜಿ ಆಟಗಾರ ಯುವರಾಜ್ ಸಿಂಗ್, 'ದೇಶಕ್ಕಾಗಿ ಸದಾ ತನ್ನ ಮನಸ್ಸು, ದೇಹ ಹಾಗೂ ಆತ್ಮವನ್ನು ಸಮರ್ಪಿಸಿದ ಪೂಜಾರ ಅವರ ಅತ್ಯುತ್ತಮ ವೃತ್ತಿ ಜೀವನಕ್ಕಾಗಿ ಅಭಿನಂದನೆಗಳು' ಎಂದಿದ್ದಾರೆ.

2021ರಲ್ಲಿ ಆಸ್ಟ್ರೇಲಿಯಾದ ವಿರುದ್ಧದ ನಿರ್ಣಾಯಕ ಗಾಬಾ ಟೆಸ್ಟ್ ಪಂದ್ಯದಲ್ಲಿ ಸತತ ಗಾಯದ ಹೊರತಾಗಿಯೂ ದಿಟ್ಟ ಹೋರಾಟದ ಮೂಲಕ ಸರಣಿ ಗೆಲುವಿಗೆ ಕಾರಣವಾದ ಪೂಜಾರ ಅವರ ಮನೋಬಲವನ್ನು ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಉಲ್ಲೇಖಿಸಿದ್ದಾರೆ.

'ಮೊದಲ ಬಾರಿ ಪೂಜಾರ ಅವರ ಸಾಮರ್ಥ್ಯವನ್ನು ನೋಡಿದಾಗ, ಅದೇ ಸಾಮರ್ಥ್ಯವನ್ನು ಪ್ರದರ್ಶನವಾಗಿ ಬದಲಾಯಿಸಿರುವುದು ನಿಜಕ್ಕೂ ಅದ್ಭುತವಾಗಿತ್ತು. ಗಾಬಾ ಟೆಸ್ಟ್ ಪಂದ್ಯದಲ್ಲಿ ದೇಹಕ್ಕೆ ಸತತವಾಗಿ ಚೆಂಡು ಬಡಿದರೂ ನೋವಿನ ನಡುವೆಯೂ ಪೂಜಾರ ತೋರಿದ ಆತ್ಮಸ್ಥೈರ್ಯ ನಿಜವಾಗಿಯೂ ಪೂಜಾರ ಎಂಬ ಕ್ರಿಕೆಟಿಗ ಏನೆಂಬುದನ್ನು ನಮಗೆ ತಿಳಿಸುತ್ತದೆ. ದೇಶಕ್ಕಾಗಿ ತಮ್ಮದೆಲ್ಲವನ್ನು ಸಮರ್ಪಿಸಿದ್ದಾರೆ. ಜೀವನದಲ್ಲಿ ದ್ವಿತೀಯ ಇನಿಂಗ್ಸ್ ಆನಂದಮಯವಾಗಿರಲಿ' ಎಂದು ಹಾರೈಸಿದ್ದಾರೆ.

'ಚೇತೇಶ್ವರ ಪೂಜಾರ ಕ್ರಿಕೆಟ್‌ನ ನಿಜವಾದ ರಾಯಭಾರಿ' ಎಂದು ಅನಿಲ್ ಕುಂಬ್ಳೆ ಪ್ರಶಂಸಿಸಿದ್ದಾರೆ. 'ಕ್ರಿಕೆಟ್ ಮೈದಾನದಲ್ಲಿ ನಿಮ್ಮ ಸಾಧನೆಗಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ' ಎಂದಿದ್ದಾರೆ.

ಹಿಂದೆ ಪೂಜಾರ ಅವರೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಂಡಿದ್ದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಅಮೋಘ ಟೆಸ್ಟ್ ವೃತ್ತಿ ಜೀವನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 'ನಿಮ್ಮ ದೃಢನಿಶ್ಚಯ ಹಾಗೂ ಕಠಿಣ ಪರಿಶ್ರಮ ಸ್ಫೂರ್ತಿದಾಯಕವಾಗಿತ್ತು. ನೀವು ಸಾಧಿಸಿದ್ದರ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಹುದು. ಮುಂದಿನ ಜೀವನಕ್ಕೆ ಶುಭಹಾರೈಕೆಗಳು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.