ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ: ಸಂಪೂರ್ಣ ಮರುವಿನ್ಯಾಸಕ್ಕೆ ಶಿಫಾರಸು

ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿ ವರದಿಯಲ್ಲಿ ಉಲ್ಲೇಖ, ಹಂತ–ಹಂತಗಳಲ್ಲಿ ಕಾಮಗಾರಿ ನಡೆಸಲು ಕೆಎಸ್‌ಸಿಎ ಯೋಜನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 15:48 IST
Last Updated 15 ಫೆಬ್ರುವರಿ 2026, 15:48 IST
ಚಿನ್ನಸ್ವಾಮಿ ಕ್ರೀಡಾಂಗಣ  –ಪ್ರಜಾವಾಣಿ ಚಿತ್ರ
ಚಿನ್ನಸ್ವಾಮಿ ಕ್ರೀಡಾಂಗಣ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣ ಮರುವಿನ್ಯಾಸ ಮಾಡಿ ಎಂದು ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಶಿಫಾರಸು ಮಾಡಿದೆ.

ಸಮಿತಿಯು ರಾಜ್ಯ ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಈ ಮಾಹಿತಿ ಇದೆ. 2025ರ ಜೂನ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ ಟ್ರೋಫಿ ಗೆದ್ದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು.

ಆನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿಗಳ ಆಯೋಜನೆಗೆ ಇದ್ದ ಅನುಮತಿಯನ್ನು ರಾಜ್ಯ ಸರ್ಕಾರವು ರದ್ದುಪಡಿಸಿತ್ತು. ಐಪಿಎಲ್‌ ಪಂದ್ಯಾವಳಿ ಆಯೋಜನೆಗೆ ಅನುಮತಿ ನೀಡುವಂತೆ ಕೆಎಸ್‌ಸಿಎ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿಯು ಮಾಡಿದ್ದ ಶಿಫಾರಸುಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿ, ರಾಜ್ಯ ಸರ್ಕಾರವು ಐಪಿಎಲ್ ಪಂದ್ಯಗಳ ಆಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿದೆ.

ADVERTISEMENT

ಕ್ರೀಡಾಂಗಣದ ಎಲ್ಲ ಪ್ರವೇಶದ್ವಾರಗಳನ್ನು ಮರುವಿನ್ಯಾಸ ಮಾಡಿ, ಅವುಗಳ ನಂಬರ್‌ಗಳನ್ನು ಸರಿಯಾಗಿ ನಿಯೋಜನೆ ಮಾಡಬೇಕು. ಪಾರ್ಕಿಂಗ್‌ ವ್ಯವಸ್ಥೆ, ತಪಾಸಣೆ, ವೈದ್ಯಕೀಯ ಘಟಕಗಳ ನಿಯೋಜನೆ ಮತ್ತಿತರ ವಿಷಯಗಳತ್ತ ಗಮನ ನೀಡಬೇಕು. ಒಟ್ಟಾರೆಯಾಗಿ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಮರುವಿನ್ಯಾಸ ಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿತ್ತು.

ಕೆಎಸ್‌ಸಿಎಯು ಅಷ್ಟೂ ಶಿಫಾರಸುಗಳನ್ನು ಮೂರು ಹಂತದಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಮತ್ತು ತಕ್ಷಣ ಪಂದ್ಯ ಆಯೋಜನೆಗೆ ಕೆಲವು ಮಾರ್ಪಾಡುಗಳನ್ನು ಮಾಡುತ್ತೇವೆ ಎಂದು ಪ್ರಸ್ತಾವ ಸಲ್ಲಿಸಿತ್ತು. ಆದರೆ ಸಮಿತಿಯು, ಕ್ರೀಡಾಂಗಣದ ಅಲ್ಲಿ–ಇಲ್ಲಿ ಸಣ್ಣಪುಟ್ಟ ಮಾರ್ಪಾಡು ಮಾಡುವ ಪ್ರಸ್ತಾವನ್ನು ಕೈಬಿಡಿ. ಇಡೀ ಕ್ರೀಡಾಂಗಣವನ್ನು ಮರುವಿನ್ಯಾಸ ಮಾಡಿ ಎಂದು ಸೂಚಿಸಿದೆ.

ಸಮಿತಿಯ ವರದಿಯ ಆಧಾರದಲ್ಲಿ, ಐಪಿಎಲ್‌ ಪಂದ್ಯ ಆಯೋಜನೆಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಆದರೆ ಗೃಹ ಇಲಾಖೆಯು ಇನ್ನಷ್ಟೇ ಆದೇಶವನ್ನು ನೀಡಬೇಕಿದೆ.

‘ಮಾರ್ಚ್‌ 15ಕ್ಕೆ ಪೂರ್ಣಗೊಳಿಸಿ’

ಮಾರ್ಚ್‌ 26ರಿಂದ ಐಪಿಎಲ್‌ ಪಂದ್ಯಾವಳಿ ಆರಂಭವಾಗಲಿದ್ದು ಮಾರ್ಚ್‌ 15ರ ಒಳಗೆ ಮೊದಲ ಹಂತದ ಕಾಮಗಾರಿಗಳನ್ನು ಮುಗಿಸಲೇಬೇಕು ಎಂದು ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿಯು ಶಿಫಾರಸು ಮಾಡಿದೆ. 

ಮೊದಲ ಹಂತದಲ್ಲಿ ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮರು ವಿನ್ಯಾಸ ಮಾಡಿ. ಜನದಟ್ಟಣೆ ನಿರ್ವಹಣೆ ಮತ್ತು ತಪಾಸಣಾ ವ್ಯವಸ್ಥೆಯನ್ನು ಸಿದ್ಧಗೊಳಿಸಿ. ವೈದ್ಯಕೀಯ ಘಟಕಗಳು ಮತ್ತು ಆಂಬುಲೆನ್ಸ್‌ಗಳನ್ನು ನಿಯೋಜಿಸಿ ಮತ್ತು ಈ ಎಲ್ಲ ವ್ಯವಸ್ಥೆಗಳ ಅಣಕು ಕಾರ್ಯಾಚರಣೆ ನಡೆಸಿ ಎಂದು ಸಮಿತಿ ಸೂಚಿಸಿದೆ. ಸಂಬಂಧಿತ ಎಲ್ಲ ಕಾಮಗಾರಿಗಳಿಗೆ ಟೆಂಡರ್‌ ಅಂತಿಮಗೊಂಡಿದ್ದು ಹಲವು ಕಾಮಗಾರಿಗಳು ಆರಂಭವಾಗಿವೆ. ಕಾಲಮಿತಿಯಲ್ಲಿ ಅವುಗಳನ್ನು ಪೂರ್ಣಗೊಳಿಸುತ್ತೇವೆ. ವಾಹನ ನಿಲುಗಡೆಗೆ ಯುಬಿ ಮಾಲ್‌ ಕಂಠೀರವ ಕ್ರೀಡಾಂಗಣ ಮತ್ತು ಸೇಂಟ್‌ ಜಾನ್ಸ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲು ಮಾತುಕತೆ ನಡೆಯುತ್ತಿದೆ. ಮಾಣಿಕ್‌ ಷಾ ಪೆರೇಡ್‌ ಮೈದಾನದಲ್ಲೂ ವಾಹನ ನಿಲುಗಡೆಗೆ ಅವಕಾಶ ಕೇಳುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಕೆಎಸ್‌ಸಿಎ ಸಮಿತಿಗೆ ತಿಳಿಸಿದೆ.

ಪ್ರಮುಖ ಬದಲಾವಣೆಗಳು....

*ಕ್ರೀಡಾಂಗಣದ ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮರುವಿನ್ಯಾಸ ಮಾಡಬೇಕು. ಜನರು ಸುಲಭವಾಗಿ ಒಳಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಕೂಲ ಆಗುವ ರೀತಿಯಲ್ಲಿ ಬ್ಯಾರಿಕೇಡ್‌ಗಳನ್ನು ವಿನ್ಯಾಸ ಮಾಡಬೇಕು. ತ್ವರಿತ ತಪಾಸಣೆಗೆ ಅನುಕೂಲ ಆಗುವ ರೀತಿಯಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು

* ಕಬ್ಬನ್‌ ರಸ್ತೆ ಮತ್ತು ಲಿಂಕ್‌ ರಸ್ತೆಯಲ್ಲಿರುವ ಗೇಟ್‌ಗಳ ಮೂಲಕ ಮಾತ್ರವೇ ಪ್ರೇಕ್ಷಕರಿಗೆ ಪ್ರವೇಶ ಮತ್ತು ನಿರ್ಗಮನ ಅವಕಾಶ ಕಲ್ಪಿಸಬೇಕು. ಆಟಗಾರರು ಮತ್ತು ಅತಿಗಣ್ಯರ ಪ್ರವೇಶಕ್ಕೆ ಕ್ವೀನ್ಸ್‌ ರಸ್ತೆಯ ಗೇಟ್‌ಗಳನ್ನು ಮೀಸಲಿರಿಸಬೇಕು. ಆಟಗಾರರು ವಾಹನ ನಿಲುಗಡೆ ಜಾಗದಿಂದ ನೇರವಾಗಿ ಡ್ರೆಸ್ಸಿಂಗ್‌ ಕೋಣೆಗೆ ಹೋಗುವಂತೆ ಮರುವಿನ್ಯಾಸ ಮಾಡಬೇಕು. ಅವರ ಖಾಸಗಿತನ ಮತ್ತು ಸುರಕ್ಷತೆಗೆ ಒತ್ತು ನೀಡಬೇಕು

* ಪಂದ್ಯ ಆಯೋಜನೆ ವೇಳೆ ಕ್ರೀಡಾಂಗಣದ ‘ಬಿ’ ಗ್ರೌಂಡ್‌ ಮತ್ತು ಟೆನ್ನಿಸ್‌ ಕೋರ್ಟ್‌ನಲ್ಲಿ ಪ್ರವೇಶ ನಿರ್ಗಮನ ತಪಾಸಣೆಗೆ ಅವಕಾಶವಿರಬೇಕು. ಉಳಿದ ಸಮಯದಲ್ಲಿ ಅಭ್ಯಾಸ ನಡೆಸಲು ಇಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಬಹುದು. ಆದರೆ ಯಾವುದೇ ಶಾಶ್ವತ ನಿರ್ಮಾಣ ಮಾಡಬಾರದು

* ಕ್ರೀಡಾಂಗಣದ ಉಳಿದ ಪ್ರದೇಶದಲ್ಲಿಯೇ ನೆಲದಾಳದ ಬಹುಮಹಡಿ ಪಾರ್ಕಿಂಗ್‌ ಕಟ್ಟಡ ನಿರ್ಮಿಸಬೇಕು * ಕ್ರೀಡಾಂಗಣದ ಹೊರ ಆವರಣದಲ್ಲಿ ನೆಲಮಟ್ಟದಲ್ಲಿ ಇರುವ ಮೂಲಸೌಕರ್ಯ–ಸವಲತ್ತುಗಳ ಪ್ರದೇಶವನ್ನು ತೆರವು ಮಾಡಬೇಕು. ಅವುಗಳು ಮೊದಲ ಮಹಡಿ ಅಥವಾ ಎರಡನೇ ಮಹಡಿಗೆ ಸ್ಥಳಾಂತರವಾಗುವಂತೆ ಮರುವಿನ್ಯಾಸ ಮಾಡಬೇಕು

*ಪ್ರೇಕಕ್ಷರು ಸಾರ್ವಜನಿಕ ಸಾರಿಗೆಯನ್ನೇ ಬಳಸುವಂತೆ ಉತ್ತೇಜನಕ್ಕೆ ಕ್ರಮ ತೆಗೆದುಕೊಳ್ಳಬೇಕು. ಪಂದ್ಯದ ಟಿಕೆಟ್‌ ಹೊಂದಿರುವವರಿಗೆ ಮೆಟ್ರೊ ರೈಲು ಮತ್ತು ಬಿಎಂಟಿಸಿ ಬಸ್‌ನಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.