ಕೋಲ್ಕತ್ತ: ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ನೆಲಕಚ್ಚಿದ ನಂತರ ಅದನ್ನು ಸರಿದೂಗಿಸುವ ಅವಕಾಶವಾಗಿ ಈಗ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಫಿಟ್ ಆಗಿ ತಂಡಕ್ಕೆ ಮರಳಿರುವ ಮೊಹಮ್ಮದ್ ಶಮಿ ಅವರ ನಿರ್ವಹಣೆಯ ಮೇಲೆ ಹೆಚ್ಚಿನ ಕುತೂಹಲವಿದೆ.
ಐದು ಪಂದ್ಯಗಳ ಟಿ20 ಸರಣಿಯ ನಂತರ ಇವೆರಡು ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿವೆ. ಪಾಕಿಸ್ತಾನ– ದುಬೈನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಮೊದಲು ತಂಡ ಸಂಯೋಜನೆ, ಪ್ರಯೋಗ ಮತ್ತು ಸಾಮರ್ಥ್ಯ ಪರೀಕ್ಷೆಗೆ ಉಭಯ ತಂಡಗಳಿಗೆ ಈ ಸರಣಿ ಉತ್ತಮ ವೇದಿಕೆಯಾಗಿದೆ.
ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ಮೊದಲ ನಾಲ್ಕು ಪಂದ್ಯ ಕಳೆದುಕೊಂಡರೂ, ನಂತರ 24 ವಿಕೆಟ್‌ಗಳೊಡನೆ ತಂಡದ ಯಶಸ್ವಿ ಬೌಲರ್ ಎನಿಸಿದ್ದರು. ವಿಶೇಷವೆಂದರೆ, 34 ವರ್ಷ ವಯಸ್ಸಿನ ವೇಗಿ 2014ರಲ್ಲಿ ಪದಾರ್ಪಣೆ ನಂತರ ಆಡಿದ 23 ಟಿ20 ಪಂದ್ಯಗಳಲ್ಲಿ 29.62 ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆದಿರುವುದು. ಫಿಟ್ನೆಸ್ ಸವಾಲಿನ ಜೊತೆಗೆ ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನ ಸುಧಾರಿಸಲು ಪ್ರಯತ್ನ ನಡೆಸಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ತಂಡಕ್ಕೂ ಆಯ್ಕೆಯಾಗಿರುವ ಶಮಿ ಅವರ ಪುನರಾಗಮನ ದೇಶದ ಕ್ರಿಕೆಟ್‌ಪ್ರಿಯರ ಸೆಳೆದಿದೆ. ಇತ್ತೀಚೆಗೆ ದೇಶಿ ಕ್ರಿಕೆಟ್‌ನಲ್ಲಿ ಅವರ ಬೌಲಿಂಗ್ ಉತ್ತಮ ಮಟ್ಟದಲ್ಲೇ ಇತ್ತು.
ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಚಾಂಪಿಯನ್ಸ್ ಟ್ರೋಫಿ ಆಡುವುದು ಅನುಮಾನ ಆಗಿರುವ ಕಾರಣ ಶಮಿ ಅವರ ಪುನರಾಮಗನಕ್ಕೆ ಹೆಚ್ಚಿನ ಮಹತ್ವವಿದೆ.
ಅಕ್ಷರ್‌ಗೆ ಹೊಣೆ:
ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ಟಿ20 ಮಾದರಿಯಲ್ಲಿ ಮೊದಲ ಬಾರಿ ಭಾರತ ತಂಡದ ಉಪನಾಯಕನಾಗಿಕಣಕ್ಕಿಳಿಯಲಿದ್ದಾರೆ. ಕೆರಿಬಿಯನ್‌ನಲ್ಲಿ ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನಲ್ಲಿ ವಹಿಸಿದ ಪ್ರಮುಖ ಪಾತ್ರಕ್ಕಾಗಿ ಅಕ್ಷರ್‌ಗೆ ಈ ಪಟ್ಟ ಒಲಿದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಅವರು 31 ಎಸೆತಗಳಲ್ಲಿ 47 ರನ್ ಗಳಿಸಿದ್ದರು. ಎಂಟು ಪಂದ್ಯಗಳಲ್ಲಿ 19.22 ಸರಾಸರಿಯಲ್ಲಿ 9 ವಿಕೆಟ್ ಪಡೆದಿದ್ದರು.
ಸಂಜು ಸ್ಯಾಮ್ಸನ್ ಪಾಲಿಗೆ ಈ ಸರಣಿ ನಿರ್ಣಾಯಕ. ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಪರಿಗಣಿಸಿರಲಿಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಸತತ ಎರಡು ಶತಕಗಳೊಡನೆ ಅವರು ಬಾಹುಬಲ ಮೆರೆದಿದ್ದರು. ಭರವಸೆಯ ಆಲ್‌ರೌಂಡರ್ ನಿತೀಶ್ ರೆಡ್ಡಿ ಅವರು ತಂಡಕ್ಕೆ ಹೆಚ್ಚುವರಿ ಬೌಲಿಂಗ್ ಆಯ್ಕೆ ಒದಗಿಸಿದ್ದಾರೆ.
ಇಂಗ್ಲೆಂಡ್‌ಗೆ ಸವಾಲು:
ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್‌ನ ದಿಗ್ಗಜ ಬ್ರೆಂಡನ್ ಮೆಕ್ಕಲಂ ಕೋಚ್ ಆದ ನಂತರ ಮೊದಲ ಸಲ ಕಣಕ್ಕಿಳಿಯುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ತಂಡ ಹೊರಬಿದ್ದ ಕಾರಣ ಮ್ಯಾಥ್ಯೂ ಮೋಟ್ ಪದತ್ಯಾಗ ಮಾಡಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಝ್‌ಬಾಲ್ ಮೂಲಕ ಕ್ರಾಂತಿಯೆಬ್ಬಿಸಿದ ಮೆಕ್ಕಲಂ ಈಗ ಸೀಮಿತ ಓವರುಗಳಲ್ಲಿ ಯಾವ ರೀತಿ ತಂತ್ರ ಅನುಸರಿಸುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.
ಮೆಕ್ಕಲಂ ಅವರಿಗೆ ಕೋಲ್ಕತ್ತ ಚಿರಪರಿಚಿತ. ಅವರು ಐಪಿಎಲ್‌ನಲ್ಲಿ ಕೆಕೆಆರ್‌ಗೆ ಆಡಿದ್ದರು. ನಂತರ ತಂಡಕ್ಕೆ ಮಾರ್ಗದರ್ಶನವನ್ನೂ ನೀಡಿದ್ದರು.
ತಂಡವು, ಪ್ರಮುಖ ಆಟಗಾರರಾದ ರೀಸ್ ಟೋಪ್ಲಿ, ಸ್ಯಾಮ್ ಕರನ್ ಮತ್ತು ವಿಲ್ ಜ್ಯಾಕ್ಸ್ ಅವರನ್ನು ಕಳೆದುಕೊಂಡಿದೆ. ಆದರೆ 21 ವರ್ಷ ವಯಸ್ಸಿನ ಬ್ಯಾಟರ್ ಜೇಕಬ್ ಬೆಥೆಲ್ ಭರವಸೆ ಮೂಡಿಸಿದ್ದಾರೆ. ಅವರು ಏಳು ಟಿ20 ಪಂದ್ಯಗಳಲ್ಲಿ 167.96ರ ಸ್ಟ್ರೈಕ್‌ರೇಟ್ ಹೊಂದಿದ್ದು 57.66 ಸರಾಸರಿ ಹೊಂದಿದ್ದಾರೆ.
ತಂಡಗಳು:
ಭಾರತ (15): ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್ ಮತ್ತು ಧ್ರುವ್ ಜುರೇಲ್ (ವಿಕೆಟ್ ಕೀಪರ್)
ಇಂಗ್ಲೆಂಡ್ (11): ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೇಕಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜೊಫ್ರಾ ಅರ್ಚರ್, ಗಸ್ ಅಟ್ಕಿನ್ಸನ್, ಬೆನ್ ಡಕೆಟ್, ಜೇಮಿ ಓವರ್ಟನ್, ಅದಿಲ್ ರಶೀದ್ ಮತ್ತು ಮಾರ್ಕ್ ವುಡ್.
ಪಂದ್ಯ ಆರಂಭ: ರಾತ್ರಿ 7.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.